ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಅರಮನೆಯಲ್ಲಿ ರಾಜವೈಭವ ಮರುಕಳಿಸಿದ್ದು, ಗುರುವಾರ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರತ್ನಖಚಿತ ಸಿಂಹಾಸನವನ್ನೇರಿ 10ನೇ ಬಾರಿಗೆ ಖಾಸಗಿ ದರ್ಬಾರ್ ನಡೆಸಿದರು.
ಚಾಮುಂಡೇಶ್ವರಿಯ ಅಗ್ರಪೂಜೆಯೊಡನೆ ದಸರಾ ಹಬ್ಬಕ್ಕೆ ಚಾಲನೆ ದೊರೆತರೆ, ಇತ್ತ ಅರಮನೆಯಲ್ಲಿ ಖಾಸಗಿ ದರ್ಬಾರ್‌ನೊಂದಿಗೆ ನವರಾತ್ರಿ ಆಚರಣೆ ಚಾಲನೆ ಪಡೆದುಕೊಂಡಿತು. ಯದುವೀರ ಒಡೆಯರ್ ಸಂಸದರಾದ ಬಳಿಕ ಮೊದಲ ಬಾರಿಗೆ ದರ್ಬಾರ್ ಸಭಾಂಗಣದಲ್ಲಿ ರತ್ನ ಖಚಿತ ಸಿಂಹಾಸನವನ್ನೇರಿ ದರ್ಬಾರ್ ನಡೆಸಿದರು.
ಮುತ್ತಿನ ಮಣಿಯ ವಿನ್ಯಾಸವುಳ್ಳ, ತಿಳಿ ನೇರಳೆ ವರ್ಣದ ಮೈಸೂರು ಪೇಟ, ರೇಷ್ಮೆ ಖುರ್ತಾ-ಪೈಜಾಮ-ಶಲ್ಯವನ್ನೊಳಗೊಂಡ ರಾಜಪೋಷಾಕು, ರಾಜಲಾಂಛನ ಗಂಢಬೇರುಂಡ ಒಳಗೊಂಡ ರತ್ನಖಚಿತ ಸರ, ಪರಂಪರಾಗತವಾದ ಆಭರಣ ಧರಿಸಿ, ರಾಜಮನೆತನದ ಪಟ್ಟದ ಕತ್ತಿ ಹಿಡಿದು ಸಿಂಹಾಸನವೇರಿ ಬೆಳಗ್ಗೆ 11.35 ರಿಂದ 12.05ರೊಳಗಿನ ಶುಭ ಮುಹೂರ್ತದಲ್ಲಿ ದರ್ಬಾರ್ ನಡೆಸಿದರು. ಯದುವೀರ್ ಸಿಂಹಾಸನಾರೋಹಣಕ್ಕೆ ಆಗಮಿಸುತ್ತಿದ್ದಂತೆಯೇ ಹೊಗಳು ಭಟರ ಜಯಘೋಷ, ಮಂಗಳವಾದ್ಯದ ಮೊಳಗುವಿಕೆಯಾಯಿತು.
“ಸಿಎಂ ಭಾಗವಹಿಸಿದ್ದು ಪ್ರಜಾಪ್ರಭುತ್ವಕ್ಕೆ ಅಪಮಾನ’
ಬೆಳಗಾವಿ: ನಾಡಹಬ್ಬ ದಸರಾದಲ್ಲಿ ಕಳಂಕಿತ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದು ಪ್ರಜಾತಂತ್ರ ವ್ಯವಸ್ಥೆಗೆ ಮಾಡಿದ ಅಪಮಾನ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರೋಪಿತ ಮುಖ್ಯಮಂತ್ರಿಗಳು ಯಾವುದೇ ಕಾರಣಕ್ಕೂ ಮುಂದುವರಿಯಬಾರದು ಎಂದರು.