Advertisement

ಬೆಳೆ ನಷ್ಟ ಪರಿಹಾರ ದತ್ತಾಂಶ ಪಟ್ಟಿಯಲ್ಲಿ ಯಡ್ರಾಮಿ ಶೂನ್ಯ

11:15 AM Dec 24, 2021 | Team Udayavani |

ಯಡ್ರಾಮಿ: ಕಳೆದ ಎರಡು ತಿಂಗಳ ಹಿಂದೆ ತಾಲೂಕಿನಾದ್ಯಂತ ಜಿಟಿಜಿಟಿ ಮಳೆ ಬಂದು ನಿತ್ಯ ಅತಿಯಾದ ಮಂಜು ಆವರಿಸಿದ್ದರಿಂದ ತೊಗರಿ, ಹತ್ತಿ ಬೆಳೆಗಳ ಹೂವು ಉದುರಿ ಗೊಡ್ಡು ಗಿಡಗಳೇ ರೈತನ ಪಾಲಿನ ಫಸಲು ಎಂಬಂತಾಗಿದೆ.

Advertisement

ತಾಲೂಕಿನ ಇಜೇರಿ, ಬಿಳವಾರ, ಅರಳಗುಂಡಗಿ, ಮಳ್ಳಿ ವಲಯಗಳ ಗ್ರಾಮಗಳಲ್ಲಿ ಸೆಪ್ಟೆಂಬರ್‌, ಅಕ್ಟೋಬರ್‌ ಕೊನೆ ವಾರದಲ್ಲಿ, ನವೆಂಬರ್‌ ತಿಂಗಳ ಮೊದಲ ವಾರದಲ್ಲಿ ಅಲ್ಪ ಮಳೆ ಬಂದರೂ ಅತಿಯಾದ ಹೊಗೆಮಂಜು ಬಿದ್ದು ತೊಗರಿ ಮತ್ತು ಹತ್ತಿ ಶೇ.90ರಷ್ಟು ನಾಶವಾಗಿವೆ. ಜಿಲ್ಲಾಡಳಿತ ಜಿಲ್ಲೆಯ ತಾಲೂಕುಗಳಲ್ಲಿ ಆದ ಮಳೆ ಪ್ರಮಾಣದ ಮಾನದಂಡ ಅನುಸರಿಸಿ ಬೆಳೆ ನಷ್ಟದ ಕುರಿತು ನಿರ್ಧರಿಸುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಪ್ರಶ್ನೆಯಾಗಿದೆ.

ಜೋರಾದ ಮಳೆ ಬಂದರೆ ಮಾತ್ರ ಬೆಳೆ ನಾಶವಾಗಲಿವೆ ಎಂಬ ಅವೈಜ್ಞಾನಿಕ ತಪ್ಪು ಗ್ರಹಿಕೆಯಿಂದಲೆ ಯಡ್ರಾಮಿ ರೈತರು ಪರಿಹಾರ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ತುಂತುರು ಮಳೆ ಬಂದಾಗ ಬೆಳಗಿನ ಜಾವ ಬೀಳುವ ಮಂಜಿನಿಂದಲೂ ಬೆಳೆ ನಾಶ ಹೊಂದಲಿವೆ ಎಂಬ ಸತ್ಯ ಅಧಿಕಾರಿಗಳು ಮನಗಾಣಬೇಕಿದೆ ಎಂಬುದು ಸ್ಥಳೀಯ ರೈತರ ವಾದವಾಗಿದೆ.

ತಾಲೂಕಿನ ಪ್ರತಿ ಹಳ್ಳಿಯ ಜಮೀನುಗಳಲ್ಲಿ ತಾವು ಬಿತ್ತಿ ಬೆಳೆದ ತೊಗರಿ, ಹತ್ತಿ ಬೆಳೆಗಳ ಲಕ್ಷಣ ನೋಡಿದ ರೈತರಲ್ಲಿನ ಆನಂದ, ಉಲ್ಲಾಸ ನವೆಂಬರ್‌ ಮೊದಲ ವಾರದಲ್ಲಿ ಮಂಜಿನಂತೆ ಕರಗಿ ಹೋಯಿತು. ಪ್ರತಿ ಎಕರೆಗೆ ತೊಗರಿ ಬೆಳೆ ಕನಿಷ್ಟ ಎರಡು ಕ್ವಿಂಟಲ್‌ ಕೂಡಾ ಬರದಂತಾಗಿದೆ ಎಂದು ರೈತರು ಗೋಳು ತೋಡಿಕೊಳ್ಳುತ್ತಿದ್ದಾರೆ. ಹತ್ತಿ ಬೆಳೆಯ ಪಾಡೂ ಈ ಸಮಸ್ಯೆಯಿಂದ ಹೊರತಾಗಿಲ್ಲ. ಅದಕ್ಕೆ ಖರ್ಚು ಮಾಡಿದಷ್ಟು ಹಣ ಬಂದರೆ ಜೀವ ಉಳಿಯಿತು ಎನ್ನುವ ಸ್ಥಿತಿ ರೈತನದ್ದಾಗಿದೆ.

ಇನ್ನಾದರೂ ತಾಲೂಕು, ಜಿಲ್ಲಾಡಳಿತ ಹಾಗೂ ಶಾಸಕರು ಖುದ್ದಾಗಿ ಪರಿಶೀಲಿಸಿ ರೈತರ ಹಿತ ಕಾಪಾಡುವಂತ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದು ತಾಲೂಕಿನ ಸಂಘಟನೆಗಳ ಮುಖಂಡರು ಹಾಗೂ ರೈತರ ಒತ್ತಾಯವಾಗಿದೆ.

Advertisement

ಜಿಲ್ಲೆಯ 11 ತಾಲೂಕುಗಳಲ್ಲಿ ಯಡ್ರಾಮಿ ಮಾತ್ರ ಪರಿಹಾರ ದತ್ತಾಂಶ ನೋಂದಣಿ ಕಾರ್ಯದಿಂದ ಶೂನ್ಯವಾಗಿದೆ. ಇದಕ್ಕೆ ತಾಲೂಕಾಡಳಿತ ಹಾಗೂ ಶಾಸಕರ ನಿರ್ಲಕ್ಷವೇ ಕಾರಣ ಎನ್ನುವುದು ಜನರ ಅಭಿಪ್ರಾಯವಾಗಿದೆ.

ನಾನು ಕೃಷಿ ಮತ್ತು ಕಂದಾಯ ಇಲಾಖೆ ಜಂಟಿ ಸಮೀಕ್ಷೆ ವರದಿ ಗಮನಿಸಿದ್ದೇನೆ. ಈ ಕುರಿತು ವರದಿಯ ಮಾಹಿತಿ ಸ್ವತಃ ಬರೆದು, ಅದನ್ನು ನಮ್ಮ ಕೇಸ್‌ವರ್ಕರ್‌ಗೆ ಕೊಟ್ಟು, ಅದನ್ನು ಮೇಲಧಿಕಾರಿಗಳಿಗೆ ಕಳುಹಿಸಲು ಸೂಚಿಸಿದ್ದೆ. ಮುಂದೆ ಏನಾಗಿದೆ ಎಂಬುದೇ ತಿಳಿಯುತ್ತಿಲ್ಲ. -ಸತ್ಯಪ್ರಸಾದ, ಗ್ರೇಡ್‌-2 ತಹಶೀಲ್ದಾರ್‌, ಯಡ್ರಾಮಿ

ನಾನು ಹತ್ತು ಎಕರೆ ತೊಗರಿ ಬಿತ್ತಿದ್ದೇನೆ. ಹೂವು ಹಿಡಿಯುವ ತನಕವೂ ಬೆಳೆ ಚೆನ್ನಾಗಿಯೇ ಇತ್ತು. ಹೂವು ಹಿಡಿದು ಮಗ್ಗಿ ಆಗುವ ಸಮಯದಲ್ಲಿ ತೀವ್ರ ಮಂಜು ಬಿದ್ದು, ತೊಗರಿ ಗಿಡಗಳು ಕಸದ ಕಡ್ಡಿಯಂತಾದವು. ಒಂದು ಗಿಡದಲ್ಲಿ ಎರಡ್ಮೂರು ಕಾಯಿ ಇದ್ದರೆ ಎಷ್ಟು ರಾಶಿ ಆಗುತ್ತದೆ ಎನ್ನುವ ವಿಚಾರವನ್ನು ಅಧಿಕಾರಿಗಳು ಮಾಡಬೇಕು. ನಮಗೆ ಪರಿಹಾರ ಒದಗಿಸಬೇಕು. -ಅರ್ಜುನ ಪೂಜಾರಿ, ಹಿರಿಯ ರೈತ, ಕುಕನೂರ

ತಹಶೀಲ್ದಾರ್‌, ಸಿಬ್ಬಂದಿ ಹಾಗೂ ಕೃಷಿ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯವೇ ಸಮಸ್ಯೆಗೆ ಕಾರಣ. ಇಲ್ಲೇ ಕರ್ತವ್ಯ ನಿಭಾಯಿಸುವ ಕಂದಾಯ ಸಿಬ್ಬಂದಿ ಜಮೀನುಗಳಲ್ಲಿನ ಬೆಳೆ ಹಾಳಾಗಿದ್ದನ್ನು ಗಮನಿಸಿದರೂ ವರದಿ ನೀಡುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ರೈತರಿಗೆ ಅನ್ಯಾಯ ಎಸಗುವಂತಹ ಕೆಲಸ ಮಾಡಿದ ನೌಕರರಿಗೆ ತಕ್ಕ ಶಿಕ್ಷೆ ಆಗಬೇಕು. ಕೂಡಲೇ ರೈತರಿಗೆ ನ್ಯಾಯ ಒದಗಿಸಿಕೊಡಬೇಕು. -ಡಾ| ವಿಶ್ವನಾಥ ಪಾಟೀಲ,ಕರವೇ ಮುಖಂಡ, ಯಡ್ರಾಮಿ

ಸಂತೋಷ ಬಿ. ನವಲಗುಂದ

Advertisement

Udayavani is now on Telegram. Click here to join our channel and stay updated with the latest news.

Next