Advertisement

ಯಡ್ರಾಮಿ ತಾಲೂಕಾದ್ರೂ ಸುಧಾರಿಸಿಲ್ಲ ರಸ್ತೆ ಸ್ಥಿತಿ

11:57 AM Jan 20, 2022 | Team Udayavani |

ಯಡ್ರಾಮಿ: ನೂತನ ತಾಲೂಕಾಗಿ ಯಡ್ರಾಮಿಯನ್ನು ಘೋಷಿಸಿದರೂ ಈ ಭಾಗದಲ್ಲಿ ಬರುವ ಗ್ರಾಮಗಳ ರಸ್ತೆಗಳ ದುಸ್ಥಿತಿ ಇನ್ನೂ ಸುಧಾರಿಸಿಲ್ಲ, ಕೆಲವೆಡೆ ಸಾರಿಗೆ ಬಸ್‌ಗಳ ಸಂಪರ್ಕವೂ ಇಲ್ಲ.

Advertisement

ಹೌದು, ತಾಲೂಕಿನಿಂದ 18 ಕಿ.ಮೀ ದೂರದಲ್ಲಿ ರುವ ಚಿಕ್ಕ ಗ್ರಾಮ ಬಿರಾಳ(ಹಿಸ್ಸಾ) ಇದಕ್ಕೆ ಕನ್ನಡಿ ಹಿಡಿದಂತಿದೆ. ಈ ಗ್ರಾಮ ಪಕ್ಕದ ಕುಳಗೇರಿ ಗ್ರಾಪಂ ವ್ಯಾಪ್ತಿಗೆ ಒಳಗೊಂಡಿದ್ದು, ಇಬ್ಬರು ಗ್ರಾಪಂ ಸದಸ್ಯರನ್ನು ಹೊಂದಿದೆ. ಶಹಾಪುರ-ಸಿಂದಗಿ ಮುಖ್ಯ ರಸ್ತೆಯಿಂದ 3ಕಿ.ಮೀ ದೂರದಲ್ಲಿರುವ ಗ್ರಾಮಕ್ಕೆ ತೆರಳಲು ಸುಸಜ್ಜಿತ ರಸ್ತೆ ಇಲ್ಲ. ಸುಮಾರು 12 ವರ್ಷದ ಹಿಂದೆ ಡಾಂಬರು ಕಂಡ ಈ ರಸ್ತೆ ಈಗ ತೀರಾ ಹದಗೆಟ್ಟ ಸ್ಥಿತಿಯಲ್ಲಿದೆ.

ರಸ್ತೆಯ ಎರಡು ಬದಿ ಮುಳ್ಳು ಕಂಟಿಗಳಿಂದ ಆವೃತವಾಗಿದೆ. ರಸ್ತೆ ತುಂಬಾ ತಗ್ಗು-ದಿನ್ನೆಗಳೇ ತುಂಬಿವೆ. ಗ್ರಾಮದ ರೈತರು ತಮ್ಮ ಜಮೀನುಗಳಿಂದ ಕಬ್ಬು ಹೊತ್ತ ಟ್ರ್ಯಾಕ್ಟರ್‌ಗಳು ಇದೇ ರಸ್ತೆಯಿಂದ ಬರಬೇಕಾದರೆ ಮುಖ್ಯ ರಸ್ತೆಗೆ ಬಂದು ತಲುಪುತ್ತದೆಯೇ ಎನ್ನುವ ಅನುಮಾನ ಹುಟ್ಟಿ ಸುವಂತೆ ರಸ್ತೆ ಹದಗೆಟ್ಟಿದೆ. ಗ್ರಾಮದಿಂದ ಗ್ರಾಮ ಪಂಚಾಯಿತಿ ಕಾರ್ಯ ನಿಮಿತ್ತ ಕುಳಗೇರಿಗೆ ತೆರಳುವ ಎರಡು ಕಿ.ಮೀ ದೂರದ ರಸ್ತೆಯೂ ಹಾಳಾಗಿದೆ. ಈ ರಸ್ತೆಯಲ್ಲಿ ಗ್ರಾಮಸ್ಥರು ಸಂಚರಿಸಲು ಪರದಾಡುವಂತೆ ಆಗಿದೆ. ಈ ಕುರಿತು ಕ್ಷೇತ್ರದ ಶಾಸಕರು ಎರಡು ವರ್ಷದ ಹಿಂದೆ ಗ್ರಾಮಕ್ಕೆ ಭೇಟಿ ನೀಡಿದಾಗ ರಸ್ತೆ ಸುಧಾರಣೆ ಮಾಡುವ ಭರವಸೆ ನೀಡಿದ್ದರು. ಸದ್ಯ ಈ ಕುರಿತು ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.

ಇದನ್ನೂ ಓದಿ:

ಗ್ರಾಮದಿಂದ 2 ಕಿ.ಮೀ ದೂರದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗೆ ತೆರಳಲು ವಿದ್ಯಾರ್ಥಿಗಳು ಹದಗೆಟ್ಟ ಬಿರಾಳ ರಸ್ತೆಯಲ್ಲೇ ಸಂಚರಿಸುತ್ತಿದ್ದಾರೆ. ಈ ಕುರಿತು ಸ್ಥಳೀಯ ಆಡಳಿತ, ಜನಪ್ರತಿನಿಧಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

Advertisement

ಕಡೆ ಹಳ್ಳಿ ಇದ್ದಿದ್ದಕ್ಕೆ ಯಾರೂ ಕಾಳಜಿ ಮಾಡೋದಿಲ್ಲ. ಶಾಸಕರು ನಮ್ಮೂರಿಗೆ ಬಂದಾಗ ರಸ್ತೆ ಬಗ್ಗೆ ಮನವಿ ಮಾಡಿದ್ವಿ. ಅವರು ದುರಸ್ತಿ ಮಾಡುವ ಭರವಸೆ ನೀಡಿದ್ದರು. ಆದರೆ ಇನ್ನೂ ಭರವಸೆ ಈಡೇರಿಲ್ಲ. -ದೇವರಾಯ ಪೂಜಾರಿ, ಕುಳಗೇರಿ ಗ್ರಾಪಂ ಸದಸ್ಯ, ಬಿರಾಳ (ಹಿಸ್ಸಾ)

ನಮ್ಮದು ಚಿಕ್ಕ ಗ್ರಾಮ. ಬಹಳ ವರ್ಷಗಳ ಹಿಂದೆ ರಸ್ತೆ ಇತ್ತು. ಸದ್ಯ ತೀರಾ ಕೆಟ್ಟಿದೆ. ದಿನನಿತ್ಯ ಧೂಳಿನಲ್ಲಿ ತಿರುಗಾಡುವಂತಾಗಿದೆ. ವಿದ್ಯಾರ್ಥಿಗಳು ಈ ಕೆಟ್ಟ ರಸ್ತೆ ಮೂಲಕವೇ ಶಾಲೆಗೆ ಹೋಗುತ್ತಾರೆ. ಈ ಸಮಸ್ಯೆ ಕೂಡಲೇ ಬಗೆಹರಿಸಿ, ಡಾಂಬರ್‌ ರಸ್ತೆಯಾದರೆ ಜನರಿಗೆ ಅನುಕೂಲವಾಗುತ್ತದೆ. -ವಿರೂಪಾಕ್ಷಿ ಪಾಟೀಲ, ಗ್ರಾಮಸ್ಥ, ಬಿರಾಳ (ಹಿಸ್ಸಾ)

-ಸಂತೋಷ ಬಿ. ನವಲಗುಂದ

Advertisement

Udayavani is now on Telegram. Click here to join our channel and stay updated with the latest news.

Next