ಯಡ್ರಾಮಿ: ತಾಲೂಕಿನಿಂದ ಕೇವಲ 12 ಕಿ.ಮೀ. ದೂರದ ಮಳ್ಳಿ-ನಾಗರಹಳ್ಳಿಗೆ ಸಂಪರ್ಕಿಸುವ ಮುಖ್ಯ ರಸ್ತೆ ಪೂರ್ಣವಾಗಿ ಡಾಂಬರ್ ಕಾಣದ ನತದೃಷ್ಟ ರಸ್ತೆಯಾಗಿದೆ.
ರಸ್ತೆ ಆರಂಭದಿಂದಲೂ ಇಲ್ಲಿಯವರೆಗೂ ಸಂಪೂರ್ಣ ಡಾಂಬರ ಭಾಗ್ಯದಿಂದ ವಂಚಿತವಾಗಿದೆ. ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಸುಂಬಡದ ವರೆಗೆ 3.8 ಕಿ.ಮೀ ಡಾಂಬರು ಹಾಕಿದ್ದು, ನಾಗರಹಳ್ಳಿ ಅಂಬೇಡ್ಕರ್ ವೃತ್ತದಿಂದ 2.6 ಕಿ.ಮೀ ಡಾಂಬರೀಕರಣ ಆಗಿದೆ. ನಡುವೆ ಐದಾರು ಕಿ.ಮೀ ರಸ್ತೆ ತಗ್ಗು ದಿನ್ನೆಗಳಿಂದ ಕೂಡಿದೆ. ಇದರಿಂದ ನಿತ್ಯ ಸಂಚಾರಕ್ಕೆ ಆಗುತ್ತಿರುವ ತೊಂದರೆ ತಪ್ಪದಂತಾಗಿದೆ.
ಒಮ್ಮೆಲೆ ಎದುರು-ಬದುರು ದೊಡ್ಡ ವಾಹನಗಳು ಬಂದಾಗ ಚಾಲಕರ ಮಧ್ಯೆ ಘರ್ಷಣೆಗಳಾದ ಅನೇಕ ಘಟನೆಗಳು ನಡೆದಿವೆ. ತಾಲೂಕಿನ ಗ್ರಾಮಗಳಾದ ಅಲ್ಲಾಪುರ, ಕಣಮೇಶ್ವರ, ಕೊಂಡಗೂಳಿ, ಬಿರಾಳ, ಐನಾಪುರ, ಮಾಗಣಗೇರಾ, ಕುರುಳಗೇರಾ, ನಾಗರಹಳ್ಳಿ, ಮಳ್ಳಿ, ಕಾಚಾಪುರ, ದುಮ್ಮದ್ರಿ ಹಳ್ಳಿಗಳಿಂದ ನಿತ್ಯ ಕೆಲಸದ ನಿಮಿತ್ತ ತಿರುಗುವ ಜನರು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಚುನಾವಣೆ ಕರ್ತವ್ಯದಲ್ಲಿ ನಿರತರಾಗಿದ್ದ ಅಧಿಕಾರಿಗಳಾಗಲಿ, ಸೋಲು, ಗೆಲುವಿನ ಬಿಗುವು ಮತ್ತು ಆತಂಕದಲ್ಲಿರುವ ಜನಪ್ರತಿನಿಧಿಗಳಾಗಲಿ ಇನ್ನಾದರೂ ರಸ್ತೆಯ ಕಡೆ ಗಮನಹರಿಸುವರೇ ಎನ್ನುವ ದೊಡ್ಡ ಪ್ರಶ್ನೆಯಾಗಿದೆ. ಪೂರ್ಣ ಪ್ರಮಾಣದ ಡಾಂಬರೀಕರಣ ಆದದ್ದಾದರೆ ಈ ಭಾಗದ ಜನತೆ ತಾಲೂಕಿಗೆ ಕೇವಲ 15 ನಿಮಿಷಗಳಲ್ಲಿ ಪ್ರಯಾಣಿಸಬಹುದಾಗಿದೆ. ಈ ರಸ್ತೆಗೆ ಹಿಡಿದ ಗ್ರಹಣ ಎಂದು ತಪ್ಪವುದೋ ಕಾಯ್ದು ನೋಡಬೇಕಾಗಿದೆ.
ಮುಖ್ಯಮಂತ್ರಿಗಳಾಗಿದ್ದ ಧರ್ಮಸಿಂಗ್ ಅವರು ಇದ್ದಾಗಲೇ ಈ ರಸ್ತೆ ಡಾಂಬರೂ ಕಂಡಿಲ್ಲ. ಈಗ ದುರಸ್ತಿ ಆಗುವ ಭರವಸೆ ನಮಗಿಲ್ಲ. ಅರಳಗುಂಡಗಿಯಿಂದ ಯಾಳಗಿತನಕ ಟೆಂಡರ್ ಆಗಿದೆ ಎಂದು ಹೇಳುವುದೇ ನಡೆದಿದೆ ಹೊರತು ಡಾಂಬರನ್ನು ರಸ್ತೆ ಕಾಣುತ್ತಿಲ್ಲ. 30 ವರ್ಷದಿಂದ ನಾನು ನೋಡಿದ್ದೇನೆ.
• ಜಗದೀಶ ತಳವಾರ,
ತಾಲೂಕಾ ಆಧ್ಯಕ್ಷ, ಬಿಜೆಪಿ ಹಿಂದುಳಿದ ವರ್ಗಗಳ ಘಟಕ ಜೇವರ್ಗಿ
ಸಂತೋಷ ನವಲಗುಂದ