ಯಡ್ರಾಮಿ: ತಾಲೂಕಿನ ಮಳ್ಳಿ ಗ್ರಾಮದ ಕ್ವಾರಂಟೈನ್ ಕೇಂದ್ರದಲ್ಲಿದ್ದ ಇಬ್ಬರು ತಮ್ಮ ಅವಧಿ ಮುಗಿಸಿ ಮನೆಗೆ ಹೋದ 12 ದಿನಗಳ ನಂತರ ಕೋವಿಡ್ ಸೋಂಕು ದೃಢಪಟ್ಟ ಫಲಿತಾಂಶ ಬಂದಿದೆ.
ಮುಂಬೈನಿಂದ ಬಂದಿದ್ದ ಈ ಇಬ್ಬರನ್ನು ಗ್ರಾಮದ ಕ್ವಾರಂಟೈನ್ ಕೇಂದ್ರದಲ್ಲಿ ಇಡಲಾಗಿತ್ತು. ನಂತರ ಕ್ವಾರಂಟೈನ್ ಅವಧಿ ಮುಗಿದ ಹಿನ್ನೆಲೆಯಲ್ಲಿ ಸೋಂಕಿನ ಫಲಿತಾಂಶ ಬರದಿದ್ದರೂ ಅವರನ್ನು ಮೇ 28ರಂದು ಬಿಡುಗಡೆ ಮಾಡಲಾಗಿತ್ತು. ಬಿಡುಗಡೆ ಹೊಂದಿ 12 ದಿನಗಳ ನಂತರ ಸೋಮವಾರದ ಬುಲೆಟಿನ್‌ದಲ್ಲಿ ಬಂದ ಮಾಹಿತಿ ಪ್ರಕಾರ ಮಳ್ಳಿ ಗ್ರಾಮದ ಇಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಗ್ರಾಮದ ವಾರ್ಡ್ 3ರಲ್ಲಿನ 32 ವರ್ಷದ ಮಹಿಳೆ ಹಾಗೂ ವಾರ್ಡ್ 5ರಲ್ಲಿನ 18 ವರ್ಷದ ಯುವಕನಿಗೆ ಸೋಂಕು ಇರುವುದು ದೃಢವಾದ ಹಿನ್ನೆಲೆಯಲ್ಲಿ ಅವರನ್ನು ಸೋಮವಾರ ಕಲಬುರಗಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿದೆ.
ಗ್ರಾಮದಲ್ಲೇ ಇದ್ದ ಸೋಂಕಿತರು: ಕಳೆದ 12 ದಿನಗಳ ಕಾಲ ಸೋಂಕಿತರು ತಮ್ಮ ಕುಟುಂಬದ ಸದಸ್ಯರಲ್ಲದೇ ಗ್ರಾಮದ ನಿವಾಸಿಗಳ ಸಂಪರ್ಕಕ್ಕೆ ಬಂದ ಕಾರಣ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಗ್ರಾಮಸ್ಥರು ಭಯಪಡುವ ಅಗತ್ಯವಿಲ್ಲ. ಎಚ್ಚರಿಕೆಯಿಂದ ಇರಿ. ಸೋಂಕಿತರನ್ನು ಜಿಲ್ಲೆಯ ಎಸ್‌ಆಯ್‌ಸಿಯು ಕೇಂದ್ರಕ್ಕೆ ಕಳುಹಿಸಿ, ತಪಾಸಣೆಗೊಳಪಡಿಸಿ ಮೂರು ದಿನಗಳ ನಂತರ ನೆಗೆಟಿವ್ ವರದಿ ಬಂದರೆ ಬಿಡುಗಡೆ ಮಾಡಲಾಗುವುದು. ಸಾಮಾಜಿಕ ಅಂತರ, ಮಾಸ್ಕ್ ಧರಿಸಿ ಜೀವನ ಮಾಡುವುದು ಸದ್ಯದ ಮಟ್ಟಿಗೆ ಒಳ್ಳೆಯದು.
ಡಾ| ಚನ್ನವೀರ,
ಮಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ
ಸೋಂಕಿತರ ಮನೆ ಹಾಗೂ ಮನೆಯ 100 ಮೀಟರ್ ಸುತ್ತಲೂ ಸೀಲ್ ಡೌನ್ ಮಾಡಲಾಗಿದೆ. ಈ ವ್ಯಾಪ್ತಿಯ ಒಳಗಿನ ಅಂಗಡಿ-ಮುಂಗಟ್ಟು ಮುಚ್ಚಿಸಲಾಗಿದೆ. ಸೋಂಕು ಕಂಡು ಬಂದ ಎರಡು ವಾರ್ಡ್‌ಗಳಲ್ಲಿ ಬಂದೋಬಸ್ತ್ ಮಾಡಲಾಗಿದೆ.
ಗಜಾನಂದ ಬಿರಾದಾರ,
ಪಿಎಸ್‌ಐ, ಯಡ್ರಾಮಿ