ಯಾದಗಿರಿ : ಕೊರೊನಾ ಎರಡನೇ ಅಲೆ ಜಿಲ್ಲೆಗೆ ವ್ಯಾಪಕವಾಗಿ ಕಾಡುತ್ತಿದ್ದು ನಿತ್ಯ ಎರಡಂಕಿಯಲ್ಲಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ.
ನೆರೆಯ ಕಲಬುರಗಿ, ಬೀದರ ಹಾಗೂ ಹೈದರಾಬಾದ್‌ಗೆ ಪ್ರಯಾಣಿಸಿದವರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದು ಕಲಬುರಗಿಯಿಂದ ನಿತ್ಯ ಅಲೆದಾಡುವವರಲ್ಲಿಯೇ ಸೋಂಕು ಪತ್ತೆಯಾಗುವ ಮೂಲಕ ಜಿಲ್ಲೆಗೆ ಕಂಟಕ ಕಾಡುತ್ತಿದೆ. 2021ರ ಫೆಬ್ರವರಿ ಕೊನೆ ವಾರದಿಂದ ಸೋಂಕು ಒಂದಂಕಿಯಲ್ಲಿ ಪತ್ತೆಯಾಗಿ ಮಾ.6ರಂದು 16 ಜನರಲ್ಲಿ ಸೋಂಕು ಪತ್ತೆಯಾಗಿತ್ತು.
ಜಿಲ್ಲೆಯಲ್ಲಿ 120 ಸಕ್ರಿಯ ಪ್ರಕರಣಗಳಿದ್ದು, 13 ಜನರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 9 ಜನರು ಗುಣಮುಖರಾಗಿದ್ದಾರೆ. 107 ಜನರು ಮನೆಯಲ್ಲಿ ಪ್ರತ್ಯೇಕವಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಮೊದಲನೇ ಅಲೆಯಲ್ಲಿ ಜಿಲ್ಲೆಗೆ ಮಹಾರಾಷ್ಟ್ರ, ಗುಜರಾತ ಹಾಗೂ ತೆಲಂಗಾಣಕ್ಕೆ ಪ್ರಯಾಣಿಸಿದವರಿಂದ ಸೋಂಕು ಹರಡಲು ಆರಂಭಿಸಿತ್ತು. ಕಳೆದ ವರ್ಷ ಮಾರ್ಚ್ ವೇಳೆ ಜಿಲ್ಲೆಯಲ್ಲಿ ಸೋಂಕಿತರು ಪತ್ತೆಯಾಗಿರಲಿಲ್ಲ. ಸುಮಾರು 70 ಜನರು ವಿದೇಶಗಳಿಂದ ಹಿಂತಿರುಗಿದ್ದರಿಂದ ಅವರಿಗೆ ಎರಡು ಅವಧಿಗೆ ಮನೆಯಲ್ಲಿಯೇ ಇರಿಸಲಾಗಿತ್ತು.
ಆದರೆ ಸೋಂಕು ದೃಢಪಟ್ಟಿರಲಿಲ್ಲ. 2020ರ ಮೇ 12ರಂದು ಮೊದಲು ಗುಜರಾತ್ ಮೂಲದಿಂದ ಆಗಮಿಸಿದ್ದ ಸುರಪುರ ಮೂಲದ ಪಿ-867, ಪಿ-868ರಲ್ಲಿ ಸೋಂಕು ದೃಢಪಟ್ಟಿತ್ತು. ಆಗಿನ ಜಿಲ್ಲಾ ಧಿಕಾರಿ ಎಂ. ಕೂರ್ಮಾರಾವ್ ಸೇರಿದಂತೆ ಅಧಿ ಕಾರಿಗಳು ಕೊರೊನಾ ನಿಯಂತ್ರಣಕ್ಕೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ವಹಿಸಿ ಜ್ವರ ತಪಾಸಣೆ ಕೇಂದ್ರ, ಕ್ವಾರಂಟೈನ್ ಕೇಂದ್ರ ಆರಂಭಿಸಿ ಹೊರಗಿನಿಂದ ಬಂದ ಜನರನ್ನು ಪ್ರತ್ಯೇಕವಾಗಿರಿಸುವ ಕಾರ್ಯ ಮಾಡಿ ಕೊರೊನಾ ಕಟ್ಟಿ ಹಾಕಲು ಸಾಕಷ್ಟು ಶ್ರಮಿಸಿದ್ದರು.
ಪ್ರಸ್ತುತ ಆರೋಗ್ಯ ಇಲಾಖೆ ಅಧಿ ಕಾರಿಗಳ ಪ್ರಕಾರ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ಯಾವುದೇ ಅಡೆತಡೆಗಳಿಲ್ಲ. ಸಮರ್ಪಕ ಹಾಸಿಗೆ ವ್ಯವಸ್ಥೆ, ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 17 ವೆಂಟಿಲೇಟರ್, 15 ಐಸಿಯು ಸೇರಿದಂತೆ 300 ಹಾಸಿಗೆ ಸಾಮರ್ಥ್ಯದ ಜಿಲ್ಲಾಸ್ಪತ್ರೆಯಿದ್ದು, ಇದರಲ್ಲಿ 150 ಬೆಡ್ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಮೀಸಲಿರಿಸಲಾಗಿದೆ.
ಜಿಲ್ಲೆಯ ಕೇವಲ ಒಂದೇ ಒಂದು ಶಹಾಪುರದ ಸ್ಪಂದನಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ 15 ಬೆಡ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಹೆಚ್ಚಿನ ಸೋಂಕು ಪತ್ತೆಯಾದರೆ ಕಲಬುರಗಿಯಿಂದ ನೆರವು ಪಡೆಯಲು ಆರೋಗ್ಯ ಇಲಾಖೆ ಚಿಂತನೆಯಲ್ಲಿದೆ. ಕೊರೊನಾ ಎರಡನೇ ಅಲೆ ನಿಯಂತ್ರಿಸಲು ಜಿಲ್ಲೆಯಲ್ಲಿ ಮಾಸ್ಕ್ ಧರಿಸದವವರಿಗೆ ದಂಡ ವಿ ಧಿಸಿ ಜಾಗೃತಿ ಮೂಡಿಸಲಾಗುತ್ತಿದ್ದು, ಆರೋಗ್ಯ ಇಲಾಖೆ ಈಗಾಗಲೇ ನೆರೆ ಜಿಲ್ಲೆ ಮತ್ತು ರಾಜ್ಯಗಳಿಂದ ಆಗಮಿಸುವವರಿಗೆ ಕಡ್ಡಾಯವಾಗಿ ಬಸ್ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಕೊರೊನಾ ಪರೀಕ್ಷೆಗೆ ಗಂಟಲು ದ್ರವ ಮಾದರಿ ಪಡೆದು ವಿವಿರವಾದ ಮಾಹಿತಿ ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಡಾ| ಇಂದುಮತಿ ಕಾಮಶೆಟ್ಟಿ ಮಾಹಿತಿ ನೀಡಿದ್ದಾರೆ.