ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ಹೊತ್‌ಪೇಟ್ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸೋಮವಾರದಿಂದ ಗ್ರಾಮದ ಜನರು ನಿರಂತರವಾಗಿ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ಬುಧವಾರ ಅಧಿಕಾರಿಗಳ ವರದಿ ತಿಳಿಸಿದೆ.
ಇಡೀ ಗ್ರಾಮದಲ್ಲಿ ಭಯ ಆವರಿಸಿದ್ದು, ಸ್ಥಳೀಯರಲ್ಲಿ ಹೆಚ್ಚಿನವರು ವಾಂತಿ ಮತ್ತು ಬೇಧಿ ಲಕ್ಷಣಗಳನ್ನು ಹೊಂದಿದ್ದಾರೆ. ಆರೋಗ್ಯ ಅಧಿಕಾರಿಗಳು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಶಿಬಿರವನ್ನು ಸ್ಥಾಪಿಸಿದ್ದಾರೆ.
ಕಾಲರಾ ಹರಡುವ ಭೀತಿ ಸ್ಥಳೀಯರಲ್ಲಿದೆ. ಹಳೆ ಬಾವಿಯ ನೀರನ್ನು ನಲ್ಲಿಯ ಸಂಪರ್ಕದ ಮೂಲಕ ಮನೆಗಳಿಗೆ ಸರಬರಾಜು ಮಾಡಿದ ನಂತರ ಈ ದುರಂತ ಸಂಭವಿಸಿದೆ. ಬಾವಿಯಲ್ಲಿನ ನೀರು ಕಲುಷಿತವಾಗಿರುವ ಶಂಕೆ ವ್ಯಕ್ತವಾಗಿದೆ.
ಮೃತರನ್ನು ಹೊನ್ನಪ್ಪ ಗೌಡ ಮತ್ತು ಈರಮ್ಮ ಎಂದು ಗುರುತಿಸಲಾಗಿದೆ. ಹಳೆ ಬಾವಿಯಿಂದ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಸ್ಥಳೀಯರು ಹಲವು ಬಾರಿ ದೂರು ಸಲ್ಲಿಸಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ನೀರಿನ ಮಾದರಿ ಪಡೆದು ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಸುವಂತಿಲ್ಲ ಎಂದು ವರದಿಗಳು ತಿಳಿಸಿವೆ. ಕೊಳವೆಬಾವಿ ನೀರು ಹಾಗೂ ಓವರ್‌ಹೆಡ್ ಟ್ಯಾಂಕ್‌ನ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇವುಗಳನ್ನು ಕುಡಿಯುವ ಉದ್ದೇಶಕ್ಕೆ ಬಳಸಬಹುದೆಂದು ಫಲಿತಾಂಶ ಬಂದಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ರಮೇಶ ಗುತ್ತೇದಾರ ಶಹಾಪುರ ತಿಳಿಸಿದ್ದಾರೆ.