Advertisement
ಕೋಟ: ಯಡ್ತಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರೇ ಪ್ರಮುಖ ಸಮಸ್ಯೆ. ಇಲ್ಲಿನ ಸಾೖಬ್ರಕಟ್ಟೆ, ಜನತಾ ಕಾಲನಿ, ರಂಗನಕೆರೆ ಜನತಾ ಕಾಲನಿಯ ಸುಮಾರು 350 ಮನೆಗಳು ಸೇರಿದಂತೆ, ಕಾಜ್ರಲ್ಲಿ, ಅಲ್ತಾರು ಕ್ಯಾದಿಕೆರೆ, ಬಳೆಗಾರ್‌ಬೆಟ್ಟು, ಗರಿಕೆಮಠ ಮುಂತಾದ ಕಡೆ ಕಪ್ಪು ಕಲ್ಲೇ ಹೆಚ್ಚಾಗಿರುವುದರಿಂದ ನೀರಿನ ಲಭ್ಯತೆ ಕಡಿಮೆ. ಹೀಗಾಗಿ ಸಾವಿರಕ್ಕೂ ಹೆಚ್ಚು ಮನೆಗಳಲ್ಲಿ ಪ್ರತಿ ವರ್ಷ ಮಾರ್ಚ್ ಆರಂಭದಿಂದಲೇ ನೀರಿನ ಸಮಸ್ಯೆ ಎದುರಾಗುತ್ತದೆ.
ಕಳೆದ ಬಾರಿ ಮಾರ್ಚ್ ಆರಂಭದಿಂದಲೇ ನೀರಿನ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗಿತ್ತು. ಹೀಗಾಗಿ ಈ ಬಾರಿ 14ನೇ ಹಣಕಾಸು ನಿಧಿಯ ಅನುದಾನದ 15 ಲಕ್ಷ ರೂ ಕ್ರಿಯಾ ಯೋಜನೆಯಲ್ಲಿ ಸುಮಾರು 13 ಲಕ್ಷ ರೂ. ಕುಡಿಯುವ ನೀರಿಗಾಗಿ ಮೀಸಲಿರಿಸಿ ಹೇರಾಡಿಯಲ್ಲಿ 7.5 ಲಕ್ಷ ರೂ.ನಲ್ಲಿ ಹೊಸ ಟ್ಯಾಂಕ್, ಪೈಪ್‌ಲೈನ್ ಕಾಮಗಾರಿ ಕೈಗೊಳ್ಳಲು ಟೆಂಡರ್‌ಗೆ ಜಿ.ಪಂ.ಗೆ ಬೇಡಿಕೆ ಸಲ್ಲಿಸಲಾಗಿದೆ. ರಂಗನಕೆರೆ, ಕಾಜ್ರಲ್ಲಿ, ಅಲ್ತಾರು ಮುಂತಾದ ಕಡೆಗಳಲ್ಲಿ ಪೈಪ್‌ಲೈನ್ ಕಾಮಗಾರಿಗೆ ಯೋಜನೆ ರೂಪಿಸಲಾಗಿದೆ.
Related Articles
ಕಳೆದ ಋತುವಿನಲ್ಲಿ ರಂಗನಕೆರೆಯಲ್ಲಿ ಹೊಸ ಬೋರ್‌ವೆಲ್ ನಿರ್ಮಾಣ, ಅಲ್ತಾರು ನೂಜಿ ಮದಗಕ್ಕೆ ಬೋರ್‌ವೆಲ್, ಪೈಪ್‌ಲೈನ್ ಅಳವಡಿಕೆ, ಕಾಜ್ರಲ್ಲಿಯಲ್ಲಿ ಪೈಪ್‌ಲೈನ್ ಕೈಗೊಳ್ಳಲಾಗಿದೆ. ಆದರೆ ಇಲ್ಲಿನ ಸಾೖಬ್ರಕಟ್ಟೆ ಬಾಲಕರ ಹಾಸ್ಟೆಲ್ ಸಮೀಪ ಎರಡು ವರ್ಷದ ಹಿಂದೆ ನಿರ್ಮಿಸಲಾದ ಶುದ್ಧ ನೀರಿನ ಘಟಕವೊಂದು ಸಂಪೂರ್ಣ ನಿರುಪಯುಕ್ತವಾಗಿದೆ.
Advertisement
ಶಿರಿಯಾರದಲ್ಲಿ ಗ್ರಾ.ಪಂ. 11.50 ಲಕ್ಷ ಮೀಸಲುಶಿರಿಯಾರ ಗ್ರಾ.ಪಂ. ವ್ಯಾಪ್ತಿಯ ಕೆದ್ಲಹಕ್ಲು, ಗರಿಕೆಮಠ, ಕಾಜ್ರಲ್ಲಿ ಮುಂತಾದ ಭಾಗಗಳಲ್ಲಿ ನೀರಿನ ಸಮಸ್ಯೆ ಇದೆ. ಹೀಗಾಗಿ ಕಳೆದ ಬೇಸಗೆ ಆರಂಭದಲ್ಲಿ ಎರಡು ದಿನಗಳಿಗೊಮ್ಮೆ ನೀರು ಸರಬರಾಜು ಮಾಡಿ ಕೊರತೆ ಪ್ರಮಾಣವನ್ನು ಹೊಂದಾಣಿಕೆ ಮಾಡಿಕೊಳ್ಳಲಾಗಿತ್ತು. ಈ ಬಾರಿ ಇದುವರೆಗೆ ಯಾವುದೇ ಸಮಸ್ಯೆ ಎದುರಾಗಿಲ್ಲ. ಆದರೆ ಎಪ್ರಿಲ್ ಅಂತ್ಯದಲ್ಲಿ ಇಲ್ಲಿಯೂ ಸಮಸ್ಯೆ ಉಂಟಾಗಬಹುದು. ಹೀಗಾಗಿ 2020ನೇ ಸಾಲಿನ ವರ್ಗ 1ರ ಅನುದಾನದಲ್ಲಿ 5.38 ಲಕ್ಷ ರೂ. ಹಾಗೂ 14ನೇ ಹಣಕಾಸು ಯೋಜನೆಯಲ್ಲಿ 6.17 ಲಕ್ಷ ರೂ. ಕುಡಿಯುವ ನೀರಿಗಾಗಿ ಮೀಸಲಿರಿಸಿದ್ದು ಇದರಲ್ಲಿ ಬಾವಿ ದುರಸ್ತಿ, ಪೈಪ್‌ಲೈನ್ ವಿಸ್ತರಣೆ, ಪೈಪ್‌ಲೈನ್ ದುರಸ್ತಿ ಮುಂತಾದ ಕಾಮಗಾರಿಗಳಿಗೆ ಟೆಂಡರ್ ಹಂತದಲ್ಲಿದೆ. ಕಳೆದ ಬೇಸಗೆಯಲ್ಲಿ ತೀವ್ರವಾಗಿ ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ “ಉದಯವಾಣಿ’ಯು ಭೇಟಿ ಕೊಟ್ಟು, “ಜೀವಜಲ’ ಎನ್ನುವ ಸರಣಿಯಡಿ ಸಾಕ್ಷಾತ್ ವರದಿಗಳನ್ನು ಪ್ರಕಟಿಸಿತ್ತು. ಈ ಬಾರಿಯ ಬೇಸಗೆಯಲ್ಲಿ ನೀರಿನ ಸಮಸ್ಯೆಯ ನಿವಾರಣೆಗೆ ಸ್ಥಳೀಯ ಪಂಚಾಯತ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಯಾವೆಲ್ಲ ಪರಿಹಾರ ಕ್ರಮಗಳನ್ನು ಕೈಗೊಂಡಿದೆ. ಮುಂದೆ ಆಗಬೇಕಾದ ಪ್ರಮುಖ ಕ್ರಮಗಳೆಲ್ಲದರ ಕುರಿತಾದ ಸರಣಿ ಇಂದಿನಿಂದ ಆರಂಭ. ಶಾಶ್ವತ ಪರಿಹಾರದ ನಿರೀಕ್ಷೆಯಲ್ಲಿ
ಯಡ್ತಾಡಿ ಗ್ರಾ.ಪಂ. ವ್ಯಾಪ್ತಿಗೆ ಬಂಡೀಮಠ ಉಪ್ಪುನೀರು ತಡೆ ಅಣೆಕಟ್ಟು ಅಥವಾ ಸ್ಥಳೀಯ ಹೊಳೆಯ ನೀರನ್ನು ಶುದ್ಧೀಕರಿಸಿ ನೀಡುವ ಶಾಶ್ವತ ಯೋಜನೆ ಕಳೆದ ವರ್ಷ ಸಿದ್ಧಪಡಿಸಲಾಗಿತ್ತು. ಆದರೆ ಆಕ್ಷೇಪಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಯೋಜನೆ ಕೈಬಿಡಲಾಗಿತ್ತು. ಇದೀಗ ವಾರಾಹಿ ಎಡದಂಡೆ ಏತ ನೀರಾವರಿ ಕಾಲುವೆ ಬೃಹತ್ ಯೋಜನೆ ಕಾಮಗಾರಿ ಆರಂಭ ವಾಗಿದೆ. ಈ ಕಾಲುವೆ ಸಮರ್ಪಕವಾಗಿ ವಿಸ್ತರಣೆಯಾಗಿ ಈ ಭಾಗದ ಕೆರೆ, ಮದಗಗಳಿಗೆ ಸಂಪರ್ಕವಾದರೆ ಅಂತರ್ಜಲ ಮಟ್ಟ ಎರಿಕೆ ಯಾಗ ಲಿದ್ದು ಯಡ್ತಾಡಿ, ಶಿರಿಯಾರ ಗ್ರಾ.ಪಂ. ವ್ಯಾಪ್ತಿಯ ನೀರಿನ ಸಮಸ್ಯೆ ಬಹುತೇಕ ನೀಗಲಿದೆ. ನಿರ್ವಹಣೆ ಕಷ್ಟ
ಕುಡಿಯುವ ನೀರಿನ ಶುಲ್ಕದಿಂದ ಸಂಗ್ರಹವಾಗುವ ಆದಾಯ ಅತ್ಯಂತ ಚಿಕ್ಕ ಮೊತ್ತದ್ದಾಗಿರುತ್ತದೆ. ಆದರೆ ಪೈಪ್‌ಲೈನ್ ಹಾಗೂ ಮೋಟಾರ್‌ಗಳು ಆಗಾಗ ದುರಸ್ತಿ, ಸಿಬಂದಿಯ ಸಂಬಳ ಸೇರಿದಂತೆ ಹೇರಳ ನಿರ್ವಹಣೆ ಅಗತ್ಯವಿರುತ್ತದೆ. ಹೀಗಾಗಿ ಇದನ್ನು ಸರಿದೂಗಿಸುವುದು ಸ್ಥಳೀಯಾಡಳಿತಕ್ಕೆ ತಲೆನೋವಾಗಿದೆ. ಕುಡಿಯುವ ನೀರಿಗೆ ಒತ್ತು
ನಮ್ಮ ಗ್ರಾ.ಪಂ. ವ್ಯಾಪ್ತಿ ಯಲ್ಲಿ ಕಳೆದ ಬಾರಿ ಭೀಕರವಾದ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಹೀಗಾಗಿ ಕಳೆದ ವರ್ಷವೇ ಹೊಸ ಬೋರ್‌ವೆಲ್ ತೋಡಿ, ಪೈಪ್‌ಲೈನ್ ಕಾಮಗಾರಿ ಮಾಡಲಾಗಿತ್ತು. ಈ ಬಾರಿ ಶೇ. 90ರಷ್ಟು ಅನುದಾನ ಕುಡಿಯುವ ನೀರಿಗಾಗಿ ಮೀಸಲಿಟ್ಟಿದ್ದು ಟೆಂಡರ್ ಹಂತದಲ್ಲಿದೆ. ಹೆಚ್ಚಿನ ಅನುದಾನ ದೊರೆತಲ್ಲಿ ಸಮಸ್ಯೆ ಸಮರ್ಥವಾಗಿ ಎದುರಿಸಲು ಸಹಾಯಕವಾಗಲಿದೆ.
– ವಿನೋದ ಕಾಮತ್, ಪಿ.ಡಿ.ಒ. ಯಡ್ತಾಡಿ ಗ್ರಾ.ಪಂ. ಹೆಚ್ಚಿನ ಅನುದಾನ ಅಗತ್ಯ
ಪಂಚಾಯತ್‌ನಲ್ಲಿ ಲಭ್ಯವಿರುವ ಅನುದಾನವನ್ನು ಸಂಪೂರ್ಣವಾಗಿ ಕುಡಿಯುವ ನೀರಿಗಾಗಿ ಒತ್ತು ನೀಡಲಾಗಿದೆ. ಸ್ಥಳೀಯಾಡಳಿತದಲ್ಲಿ ಅಪರೂಪ ವೆಂಬಂತೆ ಗ್ರಾ.ಪಂ. ಅನುದಾನದಲ್ಲಿ 7. 5 ಲಕ್ಷದ ರೂ.ನ ಹೊಸ ಟ್ಯಾಂಕ್ ನಿರ್ಮಿಸ ಲಾಗಿದೆ. ಶಾಶ್ವತ ಪರಿಹಾರಕ್ಕೆ ಹೆಚ್ಚಿನ ಅನುದಾನ ಅಗತ್ಯವಿದೆ.
– ಎಚ್. ಪ್ರಕಾಶ್ ಶೆಟ್ಟಿ, ಅಧ್ಯಕ್ಷರು ಯಡ್ತಾಡಿ ಗ್ರಾ.ಪಂ. ಅನುದಾನ ಮೀಸಲಿರಿಸಲಾಗಿದೆ
ಗ್ರಾ.ಪಂ. ವ್ಯಾಪ್ತಿಯ ಎರಡು-ಮೂರು ಕಡೆ ನೀರಿನ ಸಮಸ್ಯೆ ಇದೆ. ಹೀಗಾಗಿ ಪೈಪ್‌ಲೈನ್ ವಿಸ್ತರಣೆ, ಬಾವಿ ದುರಸ್ತಿ ಸೇರಿದಂತೆ ಕುಡಿಯುವ ನೀರಿನ ಕಾಮಗಾರಿಗೆ ಸಂಬಂಧಿಸಿ ಸುಮಾರು 15 ಲಕ್ಷ ರೂ. ಮೀಸಲಿರಿಸಲಾಗಿದೆ.
– ಸತೀಶ್, ಪಿ.ಡಿ.ಒ. ಶಿರಿಯಾರ - ರಾಜೇಶ ಗಾಣಿಗ ಅಚ್ಲಾಡಿ