Advertisement

ಕಾಮಗಾರಿ ವಿಳಂಬಕ್ಕೆ ಯಾದವ್‌ ಅಸಮಾಧಾನ

08:45 AM Jan 05, 2019 | Team Udayavani |

ಬೀದರ: ಕೆಲಸ ಬೇಗ ಪೂರ್ಣಗೊಳ್ಳಲಿ ಎಂಬ ಉದ್ದೇಶದಿಂದ ಅಲ್ಪಾವಧಿ ಟೆಂಡರ್‌ ಕರೆಯಲಾಗುತ್ತದೆ. ಆದರೆ, ಕೆಲವು ಅಧಿಕಾರಿಗಳು ಅಲ್ಪಾವಧಿ ಟೆಂಡರ್‌ ಕರೆದ ನಂತರವೂ ಕೆಲಸ ಆರಂಭಿಸಲು ವಿಳಂಬ ಮಾಡುತ್ತಿರುವುದು ಬೇಸರ ತಂದಿದೆ ಎಂದು ಹೈದ್ರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಸುಬೋಧ್‌ ಯಾದವ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎಚ್‌ಕೆಆರ್‌ ಡಿಬಿ ಕಾಮಗಾರಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಚ್‌ಕೆಆರ್‌ಡಿಬಿ ಅನುದಾನದಡಿ ಜಿಲ್ಲೆಯಲ್ಲಿ ಕೈಗೊಳ್ಳಲಾಗುತ್ತಿರುವ ಹಳೆಯ ಕಾಮಗಾರಿ ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಬೇಕು.

ನಿಗಮದಿಂದ ಆಯಾ ವರ್ಷ ನೀಡಿರುವ ಕೆಲಸಗಳನ್ನು ಅದೇ ವರ್ಷ ಪೂರ್ಣಗೊಳಿಸಬೇಕು. ಒಂದು ವರ್ಷದಲ್ಲಿ ಪೂರ್ಣಗೊಳಿಸಲು ಸಾಧ್ಯವಾದಷ್ಟು ಕೆಲಸಗಳನ್ನು ಮಾತ್ರ ಕೈಗೆತ್ತಿಕೊಳ್ಳಬೇಕು. ಕೆಲಸ ಇನ್ನೂ ಉಳಿದಲ್ಲಿ ಮುಂದಿನ ಹಣಕಾಸು ವರ್ಷದಲ್ಲಿ ಹಣ ಪಡೆಯಬೇಕು. ಅನುದಾನ ಬಿಡುಗಡೆಯಾದ ಮೇಲೆ ವಿಳಂಬ ಮಾಡುವುದು ಸರಿಯಲ್ಲ ಎಂದ ಅವರು, ಇಂತಹ ನಿರ್ಲಕ್ಷ್ಯತನ ಮುಂದುವರೆಸಬಾರದು ಎಂದು ಎಚ್ಚರಿಸಿದರು.

ಕಟ್ಟಡ ಕಾಮಗಾರಿ ಆರಂಭಿಸಲು ನಿವೇಶನದ ಸಮಸ್ಯೆ ಇದೆ ಎಂದು ಕೆಲವು ಅಧಿಕಾರಿಗಳು ತಿಳಿಸಿದಾಗ, ನಿವೇಶನ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಸಣ್ಣ ಪುಟ್ಟ ಸಮಸ್ಯೆ ತಮ್ಮ ಹಂತದಲ್ಲಿಯೇ ಪರಿಹರಿಸಿಕೊಂಡು ಕೆಲಸ ಬೇಗ ಆರಂಭಿಸಿ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕೆಂದು ಸಲಹೆ ನೀಡಿದರು.

ಅಂತಿಮ ಬಿಲ್‌ಗ‌ಳನ್ನು ಸಲ್ಲಿಸುವ ವೇಳೆ ಕಾಮಗಾರಿ ಪೂರ್ಣಗೊಳಿಸಿರುವುದು, ಸಂಬಂಧಿಸಿದ ಇಲಾಖೆಗೆ ಹಸ್ತಾಂತರಿಸಿರುವುದು ಹಾಗೂ ಅಂತಿಮ ಪರಿಶೀಲನೆ ಪ್ರಮಾಣಪತ್ರ ತಪ್ಪದೇ ಸಲ್ಲಿಸಬೇಕು. ಇಲ್ಲವಾದಲ್ಲಿ ಹಣ ಬಿಡುಗಡೆ ಮಾಡಲಾಗುವುದಿಲ್ಲ ಎಂದು ತಿಳಿಸಿದರು.

Advertisement

ಜಂಟಿ ನಿರ್ದೇಶಕ ಬಸವರಾಜ ಮಾತನಾಡಿ, ಆಯಾ ಇಲಾಖೆಗಳ ಅಧಿಕಾರಿಗಳು ಕಾಮಗಾರಿ ಪ್ರಗತಿ ವಿವರಗಳನ್ನು ಕಾಲಕಾಲಕ್ಕೆ ವೆಬ್‌ಸೈಟ್‌ನಲ್ಲಿ ದಾಖಲಿಸಬೇಕು. ಒಂದು ಬಾರಿ ಮಾಹಿತಿ ದಾಖಲಿಸಿದ ನಂತರ ತಿದ್ದುಪಡಿಗೆ ಅವಕಾಶ ಇರುವುದಿಲ್ಲ. ಹಾಗಾಗಿ
ಮಾಹಿತಿ ಸೇರಿಸುವ ವೇಳೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

ಕಾಮಗಾರಿ ಪೂರ್ಣಗೊಂಡರೂ ಸಂಬಂಧಿಸಿದ ಇಲಾಖೆಗೆ ಕಟ್ಟಡ ಒಪ್ಪಿಸದಿರುವುದರಿಂದ ಆ ಕಟ್ಟಡಗಳ ಬಳಕೆಯಾಗುತ್ತಿಲ್ಲ. ಅಧಿಕಾರಿಗಳು ಕಾಮಗಾರಿ ಪೂರ್ಣಗೊಂಡ ತಕ್ಷಣ ಷರತ್ತುಗಳಿಗೆ ಅನುಗುಣವಾಗಿ ಕಟ್ಟಡ ನಿರ್ಮಿಸಲಾಗಿದೆಯೇ ಎನ್ನುವುದನ್ನು ಪರಿಶೀಲಿಸಿ ಬೇಗ ತಮ್ಮ ವಶಕ್ಕೆ ಪಡೆಯಬೇಕು ಎಂದು ನಿರ್ದೇಶನ ನೀಡಿದರು.

ಸಭೆಯಲ್ಲಿ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ನಿರ್ಮಿತಿ ಕೇಂದ್ರ, ಕೆಆರ್‌ಐಡಿಎಲ್‌ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು. ಜಿಲ್ಲಾಧಿಕಾರಿ ಡಾ| ಎಚ್‌.ಆರ್‌. ಮಹಾದೇವ, ಜಿಪಂ ಸಿಇಒ ಮಹಾಂತೇಶ ಬೀಳಗಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next