ಧಾರವಾಡ: ತಾಲೂಕಿನ ಯಾದವಾಡ ಗ್ರಾಮದ ಸರ್ವೇ ನಂಬರ್ 225ರ ಪೈಕಿ 1 ಎಕರೆ 22 ಗುಂಟೆಯಲ್ಲಿ ನಿರ್ಮಾಣವಾಗಿದ್ದ ಕೆರೆ ಪಾಳು ಬಿದ್ದಿದ್ದು, ಕಳೆದ 30 ವರ್ಷಗಳಿಂದ ಅತಿಕ್ರಮಣವಾಗಿದೆ. ಆದರೆ, ಗ್ರಾಪಂ ಅಭಿವೃದ್ಧಿ ಅಧಿಕಾರಿಯಾಗಲಿ, ಕೆರೆ ಅಭಿವೃದ್ಧಿ ಮಂಡಳಿಯಾಗಲಿ ಒತ್ತುವರಿ ತೆರವುಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ ಒತ್ತುವರಿಯಾಗಿ ಅಳಿದುಳಿದ ಕೆರೆಯ ಸಂರಕ್ಷಣೆ ಕೆಲಸವನ್ನೂ ಮಾಡದಿರುವುದು ದುರಂತವೇ ಸರಿ.
ಸದ್ಯ ಕೆರೆಯ ಜಾಗೆ ಅತಿಕ್ರಮಣವಾಗಿದ್ದರಿಂದ ಕೆರೆಗೆ ನೀರಿನ ಮೂಲವೇ ಇಲ್ಲದಂತಾಗಿದೆ. 1 ಎಕರೆ 22 ಗುಂಟೆಯಲ್ಲಿ ನಿರ್ಮಾಣವಾಗಿದ್ದ ಈ ಕೆರೆ ಸದ್ಯ 1ಎಕರೆಯಷ್ಟೆ ಉಳಿದಿದೆ. ಕಳೆದ ಹತ್ತು ವರ್ಷಗಳ ಹಿಂದೆ ಸಮೃದ್ಧವಾಗಿದ್ದ ಈ ಕೆರೆ ಸದ್ಯ ಪಾಳು ಬಿದ್ದಿದೆ. ಕೆರೆಯ ತುಂಬೆಲ್ಲ ಗಿಡ ಗಂಟೆಗಳು ಬೆಳೆದಿದ್ದು, ಗ್ರಾಮದಲ್ಲಿನ ಕಸದ ರಾಶಿ, ಚರಂಡಿ ನೀರೆಲ್ಲ ಇದಕ್ಕೆ ಜಮಾವಣೆ ಆಗುತ್ತಿದೆ. ಬಹುತೇಕ ಗ್ರಾಮಸ್ಥರು ಕೆರೆಯ ಸುತ್ತಮುತ್ತ ಮಲ-ಮೂತ್ರ ವಿಸರ್ಜಿಸುತ್ತಿರುವುದರಿಂದ ಕೆರೆ ಕಲುಷಿತಗೊಂಡು ದುರ್ನಾತ ಬೀರುತ್ತಿದೆ.
ಸುತ್ತಲಿನ ನಿವಾಸಿಗಳು, ಗ್ರಾಮಸ್ಥರು, ಯುವಕರು ಕೆರೆಯ ಈ ಸ್ಥಿತಿಯ ಕುರಿತು ಸಾಕಷ್ಟು ಬಾರಿ ಗ್ರಾಪಂ ಹಾಗೂ ಸಂಬಂಧಿಸಿದ ಅಧಿ ಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಗ್ರಾಪಂ ಅಧ್ಯಕ್ಷರು, ಸದಸ್ಯರುಗಳು ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಇದಕ್ಕೆ ಸೊಪ್ಪು ಹಾಕಿಲ್ಲ. ಕೆರೆ ಸಮೃದ್ಧವಾಗಿದ್ದಾಗ ಗ್ರಾಮದ ದನಕರುಗಳಿಗೆ ನೀರು ಸಿಗುತ್ತಿತ್ತು. ಕೆರೆಯ ಸುತ್ತಲಿನ ಹಲವಾರು ರೈತರಿಗೆ ಅನೂಕೂಲವಾಗಿತ್ತು. ಬೇಸಿಗೆ ಸಂದರ್ಭದಲ್ಲೂ ಈ ಕೆರೆಯಲ್ಲಿ ನೀರಿರುತ್ತಿತ್ತು. ಇದೇ ನೀರನ್ನು ಬಳಸಿಕೊಂಡು ಸುತ್ತಲಿನ ರೈತರು ತರಕಾರಿ ಬೆಳೆಯುವ ಮೂಲಕ ಆರ್ಥಿಕವಾಗಿ ಸಬಲರಾಗಿದ್ದರು. ಆದರೀಗ ನೀರಿಲ್ಲದೆ ಕೆರೆ ಅವಲಂಬಿತ ರೈತರು ಕಂಗಾಲಾಗಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ರಾಪಂ ಮತ್ತು ಸಂಬಂಧಿ ಸಿದ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಕೆರೆ ಮತ್ತು ಗ್ರಾಮದಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕೆಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
ಊರಲ್ಲಿರುವುದು ಇದೊಂದೇ ಕೆರೆ. ಆದರೆ, ಕೆಲ ಗ್ರಾಮಸ್ಥರು, ಪಂಚಾಯತನ ಕೆಲವು ಸದಸ್ಯರು ಹಾಗೂ ಪಿಡಿಒ ಅವರ ಇಚ್ಛಾಶಕ್ತಿ ಕೊರತೆ ಹಾಗೂ ಸ್ವಹಿತಾಸಕ್ತಿಯಿಂದ ಕೆರೆ ಅವನತಿಯ ಹಾದಿ ಹಿಡಿದಿದೆ. ಇನ್ನಾದರೂ ಗ್ರಾಪಂ ಈ ಬಗ್ಗೆ ಗಮನ ಹರಿಸಿ ಕೆರೆಯ ಸಂರಕ್ಷಣೆ ಜತೆಗೆ ಮೊದಲಿನ ಸೌಂದರ್ಯ ನೀಡುವ ಕೆಲಸ ಮಾಡಬೇಕು. ಅಲ್ಲದೇ ಗ್ರಾಮಸ್ಥರ ಹಿತದೃಷ್ಟಿಯಿಂದ ಅಭಿವೃದ್ಧಿ ಕಾರ್ಯಕೈಗೊಳ್ಳಬೇಕು.-
ಬುರಾನ್‌ಸಾಬ ತಹಸೀಲ್ದಾರ್, ಗ್ರಾಮಸ್ಥ.
ಕೆರೆ ಜಾಗೆ ಒತ್ತುವರಿಯಾಗಿರುವುದು ನಿಜ. 2019ರಲ್ಲೇ ಸರ್ವೇ ಮಾಡಲಾಗಿದೆ. ಜಾಗೆ ಅತಿಕ್ರಮಣ ಮಾಡಿದವರಿಗೆ ನೋಟಿಸ್ ಕೊಡಲಾಗಿದೆ. ಸರಕಾರ ಕೆರೆ ಅಭಿವೃದ್ಧಿಗೆಂದು ಪ್ರತ್ಯೇಕವಾಗಿ ಅನುದಾನ ನೀಡಲ್ಲ. ನಾವು ಪಂಚಾಯತನಿಂದ 6 ಲಕ್ಷ ರೂ. ಪ್ರತ್ಯೇಕವಾಗಿ ತೆಗೆದಿಟ್ಟಿದ್ದೇವೆ. ಕೊರೊನಾ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾರ್ಯದಲ್ಲಿ ವಿಳಂಬವಾಗಿದೆ.ಶೀಘ್ರವೇ ಒತ್ತುವರಿ ತೆರವು ಮತ್ತು ಕೆರೆ ಹೂಳೆತ್ತುವ ಕಾರ್ಯ ಕೈಗೊಳ್ಳಲಾಗುವುದು. –
ಪಿ.ಆರ್. ವಾಲಿಕಾರ್, ಪಿಡಿಒ ಯಾದವಾಡ.