Advertisement
ಶಿಗ್ಗಾವಿ ಕ್ಷೇತ್ರದಲ್ಲಿ ಸತತವಾಗಿ ಎರಡು ಬಾರಿ ಗೆಲುವು ಸಾಧಿಸಿರುವ ಬಸವರಾಜ ಬೊಮ್ಮಾಯಿ ಮುಂದಿನ ಬಾರಿಯೂ ತಾವೇ ಬಿಜೆಪಿ ಅಭ್ಯರ್ಥಿ ಎಂದುಕೊಂಡಿದ್ದಾರೆ. ಆದರೆ ಈ ಹಿಂದೆ ಬೊಮ್ಮಾಯಿಗೆ ಕ್ಷೇತ್ರ ಬಿಟ್ಟು ಕೊಟ್ಟ ತಮಗೆ ಈ ಬಾರಿ ಟಿಕೆಟ್ ಬೇಕೆ ಬೇಕು ಎಂದು ಸೋಮಣ್ಣ ಬೇವಿನಮರದ ಪಟ್ಟು ಹಿಡಿದಿರುವುದು ಬಿಕ್ಕಟ್ಟು ಸೃಷ್ಟಿಸುತ್ತಿದೆ.
Related Articles
Advertisement
ನಾನು ಸಿಎಂ ಆಗೋದು ಇಷ್ಟವಿಲ್ಲವೇ?: ಬಸವರಾಜ ಬೊಮ್ಮಾಯಿ ಶಿಗ್ಗಾವಿ ಕ್ಷೇತ್ರದಿಂದ ಸ್ಪರ್ಧೆಗೆ ಮುಂದಾದ ಸಂದರ್ಭದಲ್ಲಿ ಸೋಮಣ್ಣ ಬೇವಿನಮರದ ಆ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಬೊಮ್ಮಾಯಿಗೆ ಟಿಕೆಟ್ ನೀಡುವ ಉದ್ದೇಶದಿಂದ ಬೇವಿನಮರದ ಮೇಲೆ ಟಿಕೆಟ್ ತ್ಯಾಗದ ಒತ್ತಡ ತರಲಾಗಿತ್ತು.
ಕೆಲ ಮೂಲಗಳ ಪ್ರಕಾರ 2008ರ ಚುನಾವಣೆ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ ಅವರೇ “ಏನಪ್ಪಾ ಬೇವಿನಮರದ ನಾನು ಮುಖ್ಯಮಂತ್ರಿ ಆಗುವುದು ನಿನಗೆ ಇಷ್ಟ ಇಲ್ಲವೇ, ಪಕ್ಷದ ಹಿತ ಹಾಗೂ ನಾನು ಸಿಎಂ ಆಗುವ ದೃಷ್ಟಿಯಿಂದಲಾದರೂ ಟಿಕೆಟ್ ತ್ಯಾಗ ಮಾಡು’ ಎಂದು ಹೇಳಿದ್ದರು ಎನ್ನಲಾಗಿದೆ.
ಸ್ವತಃ ಬಸವರಾಜ ಬೊಮ್ಮಾಯಿ ಅವರು ಬೇವಿನಮರದಗೆ ಮನವಿ ಮಾಡಿ ನಾನು-ನೀವು ಅಣ್ಣ-ತಮ್ಮರಂತಿದ್ದೇವೆ. ಶಿಗ್ಗಾವಿ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಬೇಕು. ಎರಡು ಅವಧಿಗೆ ಮಾತ್ರ ಸ್ಪರ್ಧಿಸುತ್ತೇನೆ ನಂತರ ಕ್ಷೇತ್ರ ಬಿಟ್ಟು ಕೊಡುವುದಾಗಿಯೂ ಭರವಸೆ ನೀಡಿದ್ದರಲ್ಲದೆ, ಕೊನೆವರೆಗೂ ಅಣ್ಣ-ತಮ್ಮರಾಗಿರೋಣ ಎಂದು ಹೇಳಿದ್ದರೆನ್ನಲಾಗಿದೆ.
ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಸೂಚನೆ, ಬೊಮ್ಮಾಯಿ ಅವರೊಂದಿಗಾದ ಅಲಿಖೀತ ಒಪ್ಪಂದದಂತೆ ಎರಡು ಅವಧಿವರೆಗೆ ಟಿಕೆಟ್ ವಿಚಾರದಲ್ಲಿ ನಾನು ಯಾವುದೇ ಕ್ಯಾತೆ ತೆಗೆದಿಲ್ಲ. ಬೊಮ್ಮಾಯಿವರು ಶಾಸಕರಾದ ನಂತರ ಅವರ ಯಾವುದೇ ಕಾರ್ಯಕ್ಕೆ ಅಡ್ಡಿಯೂ ಪಡಿಸಿಲ್ಲ. ಅಲಿಖೀತ ಒಪ್ಪಂದದಂತೆ ಎರಡು ಅವಧಿ ಮುಗಿದಿದ್ದರಿಂದ ಟಿಕೆಟ್ ಕೇಳುತ್ತಿದ್ದೇನೆ ಎಂಬುದು ಬೇವಿನಮರದ ಬೇಡಿಕೆ ಎನ್ನಲಾಗಿದೆ.
ರಾಣೆಬೆನ್ನೂರು ವಲಸೆ ಸುದ್ದಿ: ಕೆಲ ದಿನಗಳ ಹಿಂದೆ ಬಸವರಾಜ ಬೊಮ್ಮಾಯಿ ಶಿಗ್ಗಾವಿ ತೊರೆದು ರಾಣೆಬೆನ್ನೂರು ಕ್ಷೇತ್ರಕ್ಕೆ ವಲಸೆ ಹೋಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಸ್ವತಃ ಬೊಮ್ಮಾಯಿ ಇದನ್ನು ತಳ್ಳಿ ಹಾಕಿದ್ದು, ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ ನಾನೇಕೆ ಕ್ಷೇತ್ರ ತೊರೆಯಲಿ ಎಂದು ಪಶ್ನಿಸಿದ್ದರೆನ್ನಲಾಗಿದೆ.
ನಂತರದಲ್ಲಿ ರಾಣೆಬೆನ್ನೂರಿನಿಂದ ಬಿ.ಎಸ್.ಯಡಿಯೂರಪ್ಪ ಅಥವಾ ಯಡಿಯೂರಪ್ಪ ಅವರ ಪುತ್ರ ರಾಘವೇಂದ್ರ ಸ್ಪರ್ಧಿಸುತ್ತಾರೆಂಬ ಸುದ್ದಿ ಕೂಡ ಹಬ್ಬಿತ್ತು. ಇಬ್ಬರೂ ಅದನ್ನು ನಿರಾಕರಿಸಿದ್ದಾರೆ. ಶಿಗ್ಗಾವಿ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಬಿಜೆಪಿ ವರಿಷ್ಠರು ಬೊಮ್ಮಾಯಿಯನ್ನೇ ಮುಂದುವರಿಸುತ್ತಾರೋ ಅಥವಾ ಬೇವಿನಮರದಗೆ ಮಣೆ ಹಾಕುತ್ತಾರೋ?
ಟಿಕೆಟ್ ತಪ್ಪಿದರೆ ಬೊಮ್ಮಾಯಿ ರಾಣೆಬೆನ್ನೂರು ಕಡೆ ಮುಖ ಮಾಡುತ್ತಾರೋ ಅಥವಾ ತವರು ಜಿಲ್ಲೆ ಧಾರವಾಡ ಜಿಲ್ಲೆ ಕಡೆ ಮುಖ ಮಾಡುತ್ತಾರೋ, ಟಿಕೆಟ್ ದೊರೆಯದಿದ್ದರೆ ಬೇವಿನಮರದ ಮುಂದಿನ ನಿಲುವೇನು ಎಂಬ ಕುತೂಹಲ ಸೃಷ್ಟಿಸಿದೆ.
* ಅಮರೇಗೌಡ ಗೋನವಾರ