Advertisement

ಯಾದವ್‌, ಸ್ಪಿನ್ನರ್  ಭಾರೀ ಶಾರ್ಪ್‌ ಕಾಂಗರೂ ಬಾಲ ಬೆಳೆಸಿದ ಸ್ಟಾರ್ಕ್‌

03:50 AM Feb 24, 2017 | Team Udayavani |

ಪುಣೆ: ಎಂದಿನಂತೆ ಸ್ಪಿನ್ನರ್‌ಗಳ ಮಾಯಾಜಾಲ… ಇವರನ್ನು ಮೀರಿಸಿದ ಉಮೇಶ್‌ ಯಾದವ್‌ ಅವರ ಅಮೋಘ ರಿವರ್ಸ್‌ ಸ್ವಿಂಗ್‌ ಪರಾಕ್ರಮ… ಭರವಸೆಯ ಆರಂಭದ ಬಳಿಕ ಕುಸಿದು, ಕೊನೆಯ ಹಂತದಲ್ಲಿ ಚೇತರಿಸಿ ದಿನದ ಗೌರವದಲ್ಲಿ ಸಮಪಾಲು ಪಡೆದ ಆಸ್ಟ್ರೇಲಿಯ… ಇದು ಪುಣೆಯಲ್ಲಿ ಗುರುವಾರ ಮೊದಲ್ಗೊಂಡ ಬಹು ನಿರೀಕ್ಷೆಯ “ಬೋರ್ಡರ್‌-ಗಾವಸ್ಕರ್‌ ಟ್ರೋಫಿ’ ಸರಣಿಯ ಟೆಸ್ಟ್‌ ಪಂದ್ಯದ ಚುಟುಕು-ಚೂರು. 

Advertisement

ಕಾಂಗರೂ ಸ್ಕೋರ್‌ 9ಕ್ಕೆ 256
ಜವಾಬ್ದಾರಿಯುತ ಆಟದ ಮೂಲಕ 68 ರನ್‌ ಮಾಡಿದ ಆರಂಭಕಾರ ಮ್ಯಾಟ್‌ ರೆನ್‌ಶಾ, 8ನೇ ಕ್ರಮಾಂಕದಲ್ಲಿ ಕ್ರೀಸ್‌ ಇಳಿದು ಬಿಂದಾಸ್‌ ಬ್ಯಾಟಿಂಗ್‌ ಮೂಲಕ 57 ರನ್‌ ಮಾಡಿ ಅಜೇಯವಾಗಿ ಉಳಿದಿರುವ ವೇಗಿ ಮಿಚೆಲ್‌ ಸ್ಟಾರ್ಕ್‌ ಆಸ್ಟ್ರೇಲಿಯದ ಮಾನ ಕಾಪಾಡಿದ್ದಾರೆ. ದಿನದಾಟ ಮುಗಿಯಲು ಇನ್ನೂ 8 ಓವರ್‌ಗಳಿರುವಾಗ 205ಕ್ಕೆ 9ನೇ ವಿಕೆಟ್‌ ಉದುರಿಸಿಕೊಂಡ ಆಸ್ಟ್ರೇಲಿಯ, ಸ್ಟಾರ್ಕ್‌ ಸಾಹಸದಿಂದ ತನ್ನ ಮೊತ್ತವನ್ನು 256ಕ್ಕೆ ಏರಿಸಿದೆ. ಕೊನೆಯ ವಿಕೆಟ್‌ ಪತನವನ್ನು ತಡೆಹಿಡಿದಿದೆ. 

ಸ್ಟಾರ್ಕ್‌: ಕೊನೆಯ ಕ್ಷಣದ ಸ್ಟಾರ್‌
ಆಸ್ಟ್ರೇಲಿಯದ ಆರಂಭ ಕಂಡಾಗ ಅದು ದೊಡ್ಡ ಮೊತ್ತ ಪೇರಿಸುವ ಎಲ್ಲ ಲಕ್ಷಣ ತೋರಿಬಂದಿತ್ತು. ಆದರೆ 205ಕ್ಕೆ 9ನೇ ವಿಕೆಟ್‌ ಬಿದ್ದಾಗ 220-225ರ ಗಡಿಯಲ್ಲಿ ಆಲೌಟ್‌ ಆಗುವ ಸೂಚನೆ ಲಭಿಸಿತು. ಆದರೆ ಸ್ಟಾರ್ಕ್‌- ಹ್ಯಾಝಲ್‌ವುಡ್‌ ಜೋಡಿ ಫೆವಿಕಾಲ್‌ ಹಾಕಿ ಕೊಂಡು ನಿಂತಿದೆ. ದಿನದಾಟದ 90 ಓವರ್‌ಗಳ ಕೋಟಾ ಬೇಗನೇ ಮುಗಿದು, ಹೆಚ್ಚುವರಿ 4 ಓವರ್‌ಗಳ ಆಟ ಸಾಗಿದರೂ ಆಸ್ಟ್ರೇಲಿಯವನ್ನು ಆಲೌಟ್‌ ಮಾಡುವ ಭಾರತದ ಪ್ರಯತ್ನ ವಿಫ‌ಲಗೊಂಡಿದೆ. 

ಸ್ಟಾರ್ಕ್‌-ಹ್ಯಾಝಲ್‌ವುಡ್‌ 12.1 ಓವರ್‌ ನಿಭಾಯಿಸಿ ಮುರಿಯದ ಅಂತಿಮ ವಿಕೆಟಿಗೆ 51 ರನ್‌ ಪೇರಿಸಿದ್ದಾರೆ. ಸ್ಟಾರ್ಕ್‌ 58 ಎಸೆತಗಳಿಂದ 57 ರನ್‌ ಬಾರಿಸಿದರೆ, ಅವರಿಗೆ ಬೆಂಬಲ ನೀಡುವುದರಲ್ಲೇ ಹೆಚ್ಚಿನ ಕಾಲ ವ್ಯಯಿಸಿದ ಹ್ಯಾಝಲ್‌ವುಡ್‌ 31 ಎಸೆತ ಎದುರಿಸಿ ಒಂದೇ ರನ್‌ ಮಾಡಿ ಕ್ರೀಸಿಗೆ ಅಂಟಿಕೊಂಡಿದ್ದಾರೆ. ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದ ಸ್ಟಾರ್ಕ್‌ 5 ಬೌಂಡರಿ ಜತೆಗೆ 3 ಸಿಕ್ಸರ್‌ಗಳನ್ನೂ ಸಿಡಿಸಿದ್ದಾರೆ. 

ಭಾರತದ ಬೌಲಿಂಗ್‌ ಹೀರೋ ಆಗಿ ಗೋಚ
ರಿಸಿದವರು ಉಮೇಶ್‌ ಯಾದವ್‌. 5ನೆಯ ವರಾಗಿ ದಾಳಿಗಿಳಿದು ಮೊದಲ ಓವರಿನಲ್ಲೇ ವಾರ್ನರ್‌ ವಿಕೆಟ್‌ ಕಿತ್ತ ಯಾದವ್‌ ಸಾಧನೆ 32ಕ್ಕೆ 4 ವಿಕೆಟ್‌. ಕೊನೆಯಲ್ಲಿ ಓ’ಕೀಫ್ ಮತ್ತು ಲಿಯೋನ್‌ ಅವರನ್ನು ಸತತ ಎಸೆತಗಳಲ್ಲಿ ಕೆಡವಿದ ಯಾದವ್‌, ಹ್ಯಾಟ್ರಿಕ್‌ ಸಾಧಿಸಿದ್ದರೆ ಆಸ್ಟ್ರೇಲಿಯದ ಕತೆ 205ಕ್ಕೆ ಫಿನಿಶ್‌ ಆಗುತ್ತಿತ್ತು! ಅಶ್ವಿ‌ನ್‌ 59ಕ್ಕೆ 2, ಜಡೇಜ 74ಕ್ಕೆ 2, ಜಯಂತ್‌ ಯಾದವ್‌ 58ಕ್ಕೆ 1 ವಿಕೆಟ್‌ ಉರುಳಿಸಿದರು.

Advertisement

ರೆನ್‌ಶಾಗೆ ಕಾಡಿತು ಹೊಟ್ಟೆನೋವು!
ಎಂದಿನ ಬಿರುಸಿನ ಆಟವನ್ನು ಬದಿಗಿಟ್ಟು ತೀವ್ರ ಎಚ್ಚರಿಕೆಯಿಂದ ಬ್ಯಾಟಿಂಗ್‌ ನಡೆಸಿದ ವಾರ್ನರ್‌ 77 ಎಸೆತಗಳಿಂದ 38 ರನ್‌ ಹೊಡೆದರು (6 ಬೌಂಡರಿ). ವಾರ್ನರ್‌ ಔಟಾದೊಡನೆ ಜತೆಗಾರ ರೆನ್‌ಶಾ ಹೊಟ್ಟೆನೋವಿನಿಂದಾಗಿ ಕ್ರೀಸ್‌ ಬಿಡಬೇಕಾಯಿತು. ಅಭ್ಯಾಸ ಪಂದ್ಯದಲ್ಲಿ ಶತಕ ಬಾರಿಸಿದ ನಾಯಕ ಸ್ಮಿತ್‌ (27) ಮತ್ತು ಶಾನ್‌ ಮಾರ್ಷ್‌ (16) ಇಲ್ಲಿ ಆ ಆಟವನ್ನು ಪುನರಾವರ್ತಿಸುವುದರಲ್ಲಿ ವಿಫ‌ಲರಾದರು. ಹ್ಯಾಂಡ್ಸ್‌ಕಾಂಬ್‌ (22), ಮಿಚೆಲ್‌ ಮಾರ್ಷ್‌ (4), ವೇಡ್‌ (8) ಕೂಡ ಬೇಗನೇ ನಿರ್ಗಮಿಸಿ ದರು. ದ್ವಿತೀಯ ಅವಧಿಯಲ್ಲಿ ಭಾರತದ ಬೌಲಿಂಗ್‌ ಪೂರ್ತಿ ಲಯ ಕಂಡು ಕೊಂಡಿತು. 

ರೆನ್‌ಶಾ ಮರಳಿ ಕ್ರೀಸ್‌ ಇಳಿದು ಜವಾಬ್ದಾರಿಯುತ ಆಟವನ್ನು ಮುಂದುವರಿಸದೇ ಹೋಗಿದ್ದರೆ ಆಸ್ಟ್ರೇಲಿಯ ಭಾರೀ ಸಂಕಟಕ್ಕೆ ಸಿಲುಕುತ್ತಿತ್ತು. ರೆನ್‌ಶಾ ಒಟ್ಟು 156 ಎಸೆತ ಗಳಿಂದ 68 ರನ್‌ (10 ಬೌಂಡರಿ, 1 ಸಿಕ್ಸರ್‌) ಮಾಡಿ ಅಶ್ವಿ‌ನ್‌ ಮೋಡಿಗೆ ಸಿಲುಕಿದರು. ಸದ್ಯ ರೆನ್‌ಶಾ ಅವರದೇ ಆಸೀಸ್‌ ಸರದಿಯ ಗರಿಷ್ಠ ಗಳಿಕೆ. ಆದರೆ ಲಂಚ್‌ಗೆ ಕೇವಲ ಕಾಲು ಗಂಟೆ ಇರುವಾಗ ರೆನ್‌ಶಾ ಡ್ರೆಸ್ಸಿಂಗ್‌ ರೂಮ್‌ನತ್ತ ತೆರಳಿದ್ದು ಆಸೀಸ್‌ ಮಾಜಿಗಳಿಂದ ತೀವ್ರ ಟೀಕೆಗೊಳಗಾಗಿದೆ.

ಸತತ 7ನೇ ಟಾಸ್‌ ಗೆಲುವು
ದಿನದ ಮೊದಲ ಅವಧಿ ಹಾಗೂ ಅಂತಿಮ 12 ಓವರ್‌ಗಳಲ್ಲಿ ಆಸೀಸ್‌ ಬ್ಯಾಟಿಂಗ್‌ ಉತ್ತಮ ಮಟ್ಟದಲ್ಲಿತ್ತು. ದ್ವಿತೀಯ ಅವಧಿ ಹಾಗೂ ಕೊನೆಯ ಅವಧಿಯ ಮೊದಲ ಗಂಟೆ ಯಲ್ಲಿ ಭಾರತದ ಬೌಲಿಂಗ್‌ ಬೊಂಬಾಟ್‌ ಆಗಿತ್ತು. ಒಟ್ಟಾರೆ, ಮೊದಲ ದಿನದ ಪ್ರದರ್ಶನ ಎರಡೂ ತಂಡಗಳ ಪಾಲಿಗೆ “ಹಾವು ಏಣಿಯಾಟ’ದಂತಿತ್ತು.

ಭಾರತದ ನೆಲದಲ್ಲಿ ಸತತ 7ನೇ ಟೆಸ್ಟ್‌ ನಲ್ಲೂ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಆಸ್ಟ್ರೇಲಿಯಕ್ಕೆ ಡೇವಿಡ್‌ ವಾರ್ನರ್‌-ಮ್ಯಾಟ್‌ ರೆನ್‌ಶಾ ನಿರೀಕ್ಷೆಗೂ ಮೀರಿದ ಆರಂಭವಿತ್ತರು. ಇಶಾಂತ್‌ ಶರ್ಮ ಜತೆಗೆ ಆರ್‌. ಅಶ್ವಿ‌ನ್‌ ಬೌಲಿಂಗ್‌ ಆರಂಭಿಸಿದರೂ ಕ್ಯಾಪ್ಟನ್‌ ಕೊಹ್ಲಿಯ ಈ ಟ್ರಿಕ್ಸ್‌ ಆಸೀಸ್‌ ಆರಂಭಿಕರ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. 28ನೇ ಓವರ್‌ ತನಕ ಜತೆಗೂಡಿ ಸಾಗಿದ ವಾರ್ನರ್‌-ರೆನ್‌ಶಾ 82 ರನ್ನುಗಳ ಉತ್ತಮ ತಳಪಾಯವನ್ನೇ ನಿರ್ಮಿಸಿದರು. ಲಂಚ್‌ ವೇಳೆ ಆಸ್ಟ್ರೇಲಿಯ ಕೇವಲ ಒಂದು ವಿಕೆಟಿಗೆ 84 ರನ್‌ ಮಾಡಿತ್ತು.

ಭಾರತದಿಂದ ತ್ರಿವಳಿ ಸ್ಪಿನ್‌ ಕಳೆದ ಬಾಂಗ್ಲಾದೇಶ 
ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಮೂವರು ವೇಗಿಗಳನ್ನು ಕಣಕ್ಕಿಳಿಸಿದ್ದ ಭಾರತ, ಆಸ್ಟ್ರೇಲಿಯ ವಿರುದ್ಧ ನಿರೀಕ್ಷೆಯಂತೆ ತ್ರಿವಳಿ ಸ್ಪಿನ್‌ ದಾಳಿಯನ್ನು ಸಂಘಟಿಸಿತು. ಹೈದರಾಬಾದ್‌ನಲ್ಲಿ ಆಡಿದ್ದ ಭುವನೇಶ್ವರ್‌ ಕುಮಾರ್‌ ಸ್ಥಾನದಲ್ಲಿ ಜಯಂತ್‌ ಯಾದವ್‌ ಅವರನ್ನು ಸೇರಿಸಿಕೊಳ್ಳಲಾಯಿತು.

ಇಂಗ್ಲೆಂಡ್‌ ವಿರುದ್ಧ ಮುಂಬಯಿ
ಯಲ್ಲಿ ನಡೆದ 4ನೇ ಟೆಸ್ಟ್‌ ಪಂದ್ಯದ ಬಳಿಕ ಜಯಂತ್‌ ಯಾದವ್‌ ಆಡುತ್ತಿರುವ ಮೊದಲ ಟೆಸ್ಟ್‌ ಇದಾಗಿದೆ. ಆ ಪಂದ್ಯದಲ್ಲಿ ಜಯಂತ್‌ ಶತಕ ಬಾರಿಸಿ ಮೆರೆದಿದ್ದರು (104). ಬಳಿಕ ಗಾಯಾಳಾಗಿ ತಂಡದಿಂದ ಬೇರ್ಪಡಬೇಕಾಯಿತು.
ಪುಣೆ ಟೆಸ್ಟ್‌ಗಾಗಿ ಭಾರತ ಐವರು ಸ್ಪೆಷಲಿಸ್ಟ್‌ ಬೌಲರ್‌ಗಳನ್ನು ದಾಳಿಗಿಳಿಸಿದರೆ, ಆಸ್ಟ್ರೇಲಿಯ 4 ಮಂದಿ ಬೌಲರ್‌ಗಳನ್ನು ನೆಚ್ಚಿಕೊಂಡಿತು. ಇವರಲ್ಲಿ ಇಬ್ಬರು ವೇಗಿಗಳು, ಇಬ್ಬರು ಸ್ಪಿನ್ನರ್‌ಗಳು. ಆಲ್‌ರೌಂಡರ್‌ ಶಾನ್‌ ಮಾರ್ಷ್‌ ಪಾರ್ಟ್‌ಟೈಮ್‌ ಸ್ಪಿನ್ನರ್‌ ಪಾತ್ರ ನಿಭಾಯಿಸಬೇಕಿದೆ.

ಪುಣೆ: ಭಾರತದ 25ನೇ ಟೆಸ್ಟ್‌ ಕೇಂದ್ರ
ಪುಣೆ ಸಮೀಪದ ಗಹುಂಜೆ ಯಲ್ಲಿರುವ “ಸುಬ್ರತ್‌ ರಾಯ್‌ ಸಹಾರಾ ಸ್ಟೇಡಿಯಂ’ ಎಂದೂ ಕರೆಯಲ್ಪಡುವ “ಮಹಾರಾಷ್ಟ್ರ ಕ್ರಿಕೆಟ್‌ ಅಸೋಸಿಯೇಶನ್‌ ಸ್ಟೇಡಿಯಂ’ (ಎಂಸಿಎ) ಭಾರತದ 25ನೇ ಟೆಸ್ಟ್‌ ಕೇಂದ್ರವಾಗಿ ದಾಖಲಾಯಿತು. ಗುರುವಾರ ಇಲ್ಲಿ ಭಾರತ-ಆಸ್ಟ್ರೇಲಿಯ ನಡುವಿನ “ಬೋರ್ಡರ್‌-ಗಾವಸ್ಕರ್‌ ಟ್ರೋಫಿ’ ಸರಣಿಯ ಮೊದಲ ಟೆಸ್ಟ್‌ ಆರಂಭಗೊಂಡಿತು.

ಬಿಸಿಸಿಐ ಕಳೆದ ವರ್ಷ ಭಾರತದ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೇಂದ್ರಗಳನ್ನು ಹೆಚ್ಚಿಸುವ ಯೋಜನೆ ಹಾಕಿಕೊಂಡಾಗ ಪುಣೆಗೂ ಸ್ಥಾನ ಲಭಿಸಿತ್ತು. ಕಳೆದ ಇಂಗ್ಲೆಂಡ್‌ ಸರಣಿ ವೇಳೆ ರಾಜ್‌ಕೋಟ್‌ ಮತ್ತು ಇಂದೋರ್‌ಗೆ ಮೊದಲ ಸಲ ಟೆಸ್ಟ್‌ ಆತಿಥ್ಯ ನೀಡಲಾಗಿತ್ತು.

ಆಸ್ಟ್ರೇಲಿಯ ವಿರುದ್ಧದ ಸರಣಿಯ ವೇಳಾಪಟ್ಟಿ ಪ್ರಕಟಗೊಳ್ಳುವಾಗ ಭಾರತದ ನೂತನ ಟೆಸ್ಟ್‌ ಕೇಂದ್ರಗಳ ಸಂಖ್ಯೆಯನ್ನು ಒಮ್ಮೆಲೇ ಮೂರಕ್ಕೆ ಹೆಚ್ಚಿಸಲಾಯಿತು. ಪುಣೆ ಜತೆಗೆ ರಾಂಚಿ ಮತ್ತು ಧರ್ಮಶಾಲಾ ಕೂಡ ಈ ಸರಣಿ ವೇಳೆ ಮೊದಲ ಸಲ ಟೆಸ್ಟ್‌ ಪಂದ್ಯಗಳ ಆತಿಥ್ಯ ವಹಿಸಲಿವೆ. ಅಲ್ಲಿಗೆ ಭಾರತದ ಒಟ್ಟು ಟೆಸ್ಟ್‌ ತಾಣಗಳ ಸಂಖ್ಯೆ 27ಕ್ಕೆ ಏರಿದಂತಾಗುತ್ತದೆ.

ಮುಂಬಯಿಯ “ಬಾಂಬೆ ಜಿಮಾನಾ ಸ್ಟೇಡಿಯಂ’ ಭಾರತದ ಮೊದಲ ಟೆಸ್ಟ್‌ ಕೇಂದ್ರವೆನಿಸಿದೆ. 1933ರಲ್ಲಿ ಇಲ್ಲಿ ಕರ್ನಲ್‌ ಸಿ.ಕೆ. ನಾಯ್ಡು ನಾಯಕತ್ವದ ಭಾರತ ತಂಡ ಪ್ರವಾಸಿ ಇಂಗ್ಲೆಂಡನ್ನು ಎದುರಿಸಿತ್ತು.

ಎಕ್ಸ್‌ಟ್ರಾ ಇನ್ನಿಂಗ್ಸ್‌
ಭಾರತದ ಸತತ 7 ಟೆಸ್ಟ್‌ಗಳಲ್ಲಿ ಆಸ್ಟ್ರೇಲಿಯ ಟಾಸ್‌ ಗೆದ್ದಿತು. ಎಲ್ಲದರಲ್ಲೂ ಮೊದಲು ಬ್ಯಾಟಿಂಗನ್ನೇ ಆಯ್ದುಕೊಂಡಿದೆ. ಆದರೆ ಹಿಂದಿನ ಆರೂ ಟೆಸ್ಟ್‌ಗಳಲ್ಲಿ ಸೋಲನುಭವಿಸಿದೆ.

ಮ್ಯಾಟ್‌ ರೆನ್‌ಶಾ 5ನೇ ಟೆಸ್ಟ್‌ನಲ್ಲಿ 2ನೇ ಅರ್ಧ ಶತಕ ಹೊಡೆದರು. ಅವರು ಭಾರತದಲ್ಲಿ ಆಡಿದ ಮೊದಲ ಟೆಸ್ಟ್‌ ನಲ್ಲೇ “50 ಪ್ಲಸ್‌’ ರನ್‌ ಬಾರಿಸಿದ ಆಸ್ಟ್ರೇಲಿಯದ ಅತೀ ಕಿರಿಯ ಬ್ಯಾಟ್ಸ್‌ಮನ್‌ ಎನಿಸಿದರು (20 ವರ್ಷ, 332 ದಿನ). 1979-80ರ ಕಾನ್ಪುರ ಟೆಸ್ಟ್‌ನಲ್ಲಿ ರಿಕ್‌ ಡಾರ್ಲಿಂಗ್‌ 59 ರನ್‌ ಮಾಡಿದ್ದು ದಾಖಲೆಯಾಗಿತ್ತು (22 ವರ್ಷ, 154 ದಿನ).

ಉಮೇಶ್‌ ಯಾದವ್‌ 5 ಸಲ ಡೇವಿಡ್‌ ವಾರ್ನರ್‌ ವಿಕೆಟ್‌ ಉರುಳಿಸಿದರು. ಯಾದವ್‌ ನಿರ್ದಿಷ್ಟ ಆಟಗಾರ ನೊಬ್ಬನನ್ನು ಅತ್ಯಧಿಕ ಸಲ ಔಟ್‌ ಮಾಡಿದ ಜಂಟಿ ಸಾಧನೆ ಇದಾಗಿದೆ. ಶಾರ್ನ್ ಮಾರ್ಷ್‌ ಅವರನ್ನೂ ಯಾದವ್‌ 5 ಸಲ ಔಟ್‌ ಮಾಡಿದ್ದಾರೆ. 

ವಾರ್ನರ್‌-ರೆನ್‌ಶಾ 7 ಇನ್ನಿಂಗ್ಸ್‌ಗಳಲ್ಲಿ 4 ಅರ್ಧ ಶತಕದ ಜತೆಯಾಟ ದಾಖಲಿಸಿದರು.

ಮಿಚೆಲ್‌ ಸ್ಟಾರ್ಕ್‌ 35ನೇ ಟೆಸ್ಟ್‌ನಲ್ಲಿ 9ನೇ ಅರ್ಧ ಶತಕ ಹೊಡೆದರು.

ಸ್ಟಾರ್ಕ್‌ ಕಳೆದ 5 ಇನ್ನಿಂಗ್ಸ್‌ಗಳಲ್ಲಿ ಹೊಡೆದ 3ನೇ ಅರ್ಧ ಶತಕ ಇದು. ಇವೆಲ್ಲವೂ 8ನೇ ಕ್ರಮಾಂಕದಲ್ಲೇ ಬಂದಿವೆ.

ಸ್ಕೋರ್‌ ಪಟ್ಟಿ
ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್‌
ಸಿ ವಿಜಯ್‌ ಬಿ ಅಶ್ವಿ‌ನ್‌    68
ಡೇವಿಡ್‌ ವಾರ್ನರ್‌    ಬಿ ಯು.ಯಾದವ್‌    38
ಸ್ಟೀವನ್‌ ಸ್ಮಿತ್‌    ಸಿ ಕೊಹ್ಲಿ ಬಿ ಅಶ್ವಿ‌ನ್‌    27
ಶಾನ್‌ ಮಾರ್ಷ್‌    ಸಿ ಕೊಹ್ಲಿ ಬಿ ಜೆ.ಯಾದವ್‌    16
ಪೀಟರ್‌ ಹ್ಯಾಂಡ್ಸ್‌ಕಾಂಬ್‌    ಎಲ್‌ಬಿಡಬ್ಲ್ಯು ಜಡೇಜ    22
ಮಿಚೆಲ್‌ ಮಾರ್ಷ್‌    ಎಲ್‌ಬಿಡಬ್ಲ್ಯು ಜಡೇಜ    4
ಮ್ಯಾಥ್ಯೂ ವೇಡ್‌    ಎಲ್‌ಬಿಡಬ್ಲ್ಯು ಯು.ಯಾದವ್‌    8
ಮಿಚೆಲ್‌ ಸ್ಟಾರ್ಕ್‌    ಬ್ಯಾಟಿಂಗ್‌    57
ಸ್ಟೀವ್‌ ಓ’ಕೀಫ್    ಸಿ ಸಾಹಾ ಬಿ ಯು.ಯಾದವ್‌    0
ನಥನ್‌ ಲಿಯೋನ್‌    ಎಲ್‌ಬಿಡಬ್ಲ್ಯು ಯು.ಯಾದವ್‌    0
ಜೋಶ್‌ ಹ್ಯಾಝಲ್‌ವುಡ್‌    ಬ್ಯಾಟಿಂಗ್‌    1

ಇತರ        15
ಒಟ್ಟು  (9 ವಿಕೆಟಿಗೆ)        256
ವಿಕೆಟ್‌ ಪತನ: 1-82, 2-119, 3-149, 4-149, 5-166, 6-190, 7-196, 8-205, 9-205.

ಬೌಲಿಂಗ್‌:
ಇಶಾಂತ್‌ ಶರ್ಮ        11-0-27-0
ಆರ್‌. ಅಶ್ವಿ‌ನ್‌        34-10-59-2
ಜಯಂತ್‌ ಯಾದವ್‌        13-1-58-1
ರವೀಂದ್ರ ಜಡೇಜ        24-4-74-2
ಉಮೇಶ್‌ ಯಾದವ್‌        12-3-32-4

Advertisement

Udayavani is now on Telegram. Click here to join our channel and stay updated with the latest news.

Next