ಸಿದ್ದಾಪುರ: ಯಡಮೊಗೆ ಗ್ರಾಮದ ಕುಮಿಬೇರುವಿನಲ್ಲಿ 1 ವರ್ಷ 3 ತಿಂಗಳು ಪ್ರಾಯದ ಹೆಣ್ಣು ಮಗು ಸಾನ್ವಿಕಾ ನದಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ತಾಯಿ ರೇಖಾ ನಾಯ್ಕ ವಿರುದ್ಧ ಶಂಕರನಾರಾಯಣ ಠಾಣೆಯಲ್ಲಿ ಕೊಲೆ ಕೇಸು ದಾಖಲಾಗಿದೆ.
ವಿಚಾರಣೆ ಸಂದರ್ಭ ಮನೋ ವೈದ್ಯರ ಸಮ್ಮುಖದಲ್ಲಿ ಆಕೆ ನೀಡಿದ ಹೇಳಿಕೆಯಂತೆ ಕಲಂ 302, 307 ಮತ್ತು 307 ಐಪಿಸಿ ಅಡಿಯಲ್ಲಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
“ಜು. 11ರಂದು ಬೆಳಗ್ಗೆ 4 ಗಂಟೆ ಸುಮಾರಿಗೆ ಸಾಯಬೇಕು ಎನ್ನುವ ಉದ್ದೇಶದಿಂದಲೇ 5 ವರ್ಷದ ಮಗ ಸಾತ್ವಿಕ್ ಹಾಗೂ ಪುತ್ರಿ ಸಾನ್ವಿಕಾಳನ್ನು ಎತ್ತಿಕೊಂಡು ಮನೆಯ ಪಕ್ಕದ ಕುಬಾj ನದಿಗೆ ಇಳಿದಿದ್ದು, ಆ ಸಮಯ ಬಲಕೈಯಲ್ಲಿದ್ದ ಮಗು ಸಾನ್ವಿಕಾಳು ಕೈಯಿಂದ ಜಾರಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾಳೆ. ಆ ಮಗುವನ್ನು ಹಿಡಿಯಲು ಹೋದಾಗ ಇನ್ನೊಂದು ಕೈಯಲ್ಲಿದ್ದ ಗಂಡು ಮಗ ಸಾತ್ವಿಕ್‌ನೊಂದಿಗೆ ಹೊಳೆಯ ನೀರಿನಲ್ಲಿ ಸುಮಾರು ದೂರ ಕೊಚ್ಚಿ ಹೋಗಿದ್ದು, ಕಷ್ಟ ಪಟ್ಟು ಗಂಡು ಮಗುವಿನೊಂದಿಗೆ ನಾನು ದಡ ಸೇರಿದೆ. ಆದರೆ ಹೆಣ್ಣು ಮಗು ಸಾನ್ವಿಕಾ ಹೊಳೆಯ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿರುತ್ತಾಳೆ. ಇದರಿಂದ ಭಯಗೊಂಡ ನಾನು ಮಗು ಅಪಹರಣದ ನಾಟಕ ಆಡಿದ್ದೆ’ ಎಂದು ರೇಖಾ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಆರೋಪಿ ರೇಖಾ ಮಾನಸಿಕ ಖನ್ನತೆ ಒಳಗಾಗಿರುವುದಾಗಿ ಶುಕ್ರವಾರವೇ ವೈದ್ಯರು ತಿಳಿಸಿದ್ದು, ವೈದ್ಯರ ಸೂಚನೆ ಮೇರೆಗೆ ಸೂಕ್ತ ಚಿಕಿತ್ಸೆಗಾಗಿ ಜು.13ರಂದು ಬೆಳಗ್ಗೆ ಉಡುಪಿ ಡಾ| ಎ.ವಿ. ಬಾಳಿಗ ಮೆಮೋರಿಯಲ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲಾಗಿದೆ.
ಆಕೆ ಮಾನಸಿಕ ಖನ್ನತೆಯಿಂದ ಚೇತರಿಸಿ ಕೊಂಡ ಬಳಿಕ ಪ್ರಕರಣದ ಸಮಗ್ರ ತನಿಖೆಯನ್ನು ಮುಂದುವರಿಸಲಾಗುವುದು. ಪ್ರಕರಣದ ನಿಷ್ಪಕ್ಷಪಾತ ಮತ್ತು ಪ್ರಾಮಾಣಿಕ ತನಿಖೆಯನ್ನು ನಡೆಸುವ ಆವಶ್ಯಕತೆ ಇದೆ.ಈ ಕುರಿತಂತೆ ತನಿಖಾಧಿಕಾರಿಯಾಗಿ ಈಗಾಗಲೇ ಕುಂದಾಪುರ ಡಿವೈಎಸ್ಪಿ ಬಿ. ಪಿ. ದಿನೇಶ ಕುಮಾರ್ ಅವರನ್ನು ನೇಮಿಸಲಾಗಿದ್ದು, ಅವರ ನೇತೃತ್ವದ ತಂಡದಿಂದ ತನಿಖೆ ನಡೆಯಲಿದೆ ಎಂದು ಎಸ್ಪಿ ನಿಶಾ ಜೇಮ್ಸ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮಗುವಿನ ಅಂತ್ಯ ಸಂಸ್ಕಾರ
ಸಂತೋಷ್ ನಾಯ್ಕ ಹಾಗೂ ರೇಖಾ ನಾಯ್ಕ ದಂಪತಿಯ ಪುತ್ರಿ ಸಾನ್ವಿಕಾಳ ಮೃತದೇಹವನ್ನು ಪೊಲೀಸರು ಮೊದಲು ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದಿದ್ದರು. ಅಲ್ಲಿನ ವೈದ್ಯರ ಸೂಚನೆ ಮೇರೆಗೆ ಮಣಿಪಾಲ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಶುಕ್ರವಾರ ರಾತ್ರಿಯೇ ಯಡಮೊಗೆಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು