Advertisement

ಸದಸ್ಯರ ಆವೇಶಕ್ಕೆ ಜಿಪಂ ಸಭೆ ಬಲಿ

12:08 PM Jan 19, 2020 | |

ಯಾದಗಿರಿ: ಜಿಲ್ಲೆಯ ಅಭಿವೃದ್ಧಿಗೆ ಬೇಕಿರುವ ಅಗತ್ಯ ಕಾಮಗಾರಿಗಳ ಕುರಿತು ಚರ್ಚೆ ನಡೆಯಬೇಕಿದ್ದ ಜಿಪಂ ಸಾಮಾನ್ಯ ಸಭೆ ಅಧಿಕಾರಿಗಳ ಮೇಲಿದ್ದ ‌ ಜನಪ್ರತಿನಿಧಿಗಳ ಆವೇಶಕ್ಕೆ ಬಲಿಯಾಯಿತು.

Advertisement

ಜನಪ್ರತಿನಿಧಿಗಳಿಗೆ ಅಧಿಕಾರಿಗಳು ಅಗೌರವ ತೋರಿದ್ದು, ಅವರ ವಿರುದ್ಧ ಕ್ರಮಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸಿ ಎಂದು ಸದಸ್ಯರು ಒತ್ತಾಯಿಸಿ ಸಭೆಯಿಂದ ಹೊರನಡೆದ ಪ್ರಸಂಗ ನಡೆಯಿತು.

ನಗರದ ಜಿಪಂ ಸಭಾಂಗಣದಲ್ಲಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಭೆ ಆರಂಭವಾಗುತ್ತಿದ್ದಂತೆ ಸದಸ್ಯ ವಿನೋದ ಪಾಟೀಲ, ಜಿಪಂ ಉಪ ಕಾರ್ಯದರ್ಶಿ ಮುಕ್ಕಣ್ಣ ಕಾರಿಗಾರ ಅವರನ್ನು ತರಾಟೆಗೆ ತೆಗೆದುಕೊಂಡರು.

ಯಾವುದೋ ಟೆಂಡರ್‌ ವಿಚಾರಕ್ಕೆ ಸಂಬಂಧಿಸಿದಂತೆ ಸದಸ್ಯರು ಅಧಿಕಾರಿಗೆ ದೂರವಾಣಿ ಕರೆ ಮಾಡಿದ್ದರ ಬಗ್ಗೆ ಗೊತ್ತಿಲ್ಲ ಎಂದು ಅಧಿಕಾರಿ ಹಾರಿಕೆ ಉತ್ತರ ನೀಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅದಕ್ಕೆ ಸಭೆಗೆ ಪ್ರತಿಕ್ರಿಯಿಸಿದ ಜಿಪಂ ಉಪಕಾರ್ಯದರ್ಶಿ, ನೀವೇನು ಅಧಿಕಾರಿಯೇ? ಎಂದು ಮಾತನಾಡಿದ್ದಾರೆ. ಅಧಿಕಾರಿಗಳಿಗೆ ಗೌರವಯಿಲ್ಲವೇ? ಏನು ಹೇಳಿದ್ದನ್ನು ಹೇಳಿಸಿಕೊಳ್ಳಬೇಕೇ? ಎಂದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಮರಿಲಿಂಗಪ್ಪ ಕಾರ್ನಾಳ, ಅಮರದೀಪ, ರಾಜಶ್ರೀ ಪಾಟೀಲ, ಬಸಣ್ಣಗೌಡ ಯಡಿಯಾಪುರ ಮಾತನಾಡಿ, ಸಭೆ ಸೂಚನಾ ಪತ್ರ ಕೆಲ ಸದಸ್ಯರಿಗೆ ಗುರುವಾರ ಸಂಜೆ ತಲುಪಿದೆ. ಸಭೆಯಲ್ಲಿ ಚರ್ಚೆಯಾಗಬೇಕಿರುವ ವಿಷಯಗಳ ಕುರಿತು ಸದಸ್ಯರಿಗೆ ಸರಿಯಾಗಿ ಮಾಹಿತಿಯೇ ನೀಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ನೀವು ನಮ್ಮ ಸೇವಕರು.

Advertisement

ಸರ್ಕಾರದ ಅನ್ನ ತಿನ್ನುತ್ತಿದ್ದೀರಿ. ಜನಪ್ರತಿನಿಧಿಗಳೊಂದಿಗೆ ಹೇಗೆ
ವರ್ತಿಸಬೇಕು ಎನ್ನುವುದು ತಿಳಿದಿಲ್ಲವೇ ಎಂದು ಮರಿಲಿಂಗಪ್ಪ ಕಾರ್ನಳ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಪಂ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ್‌ ಮಾತನಾಡಿ, ಸಾಮಾನ್ಯ ಸಭೆ ದಿನಾಂಕ 20 ದಿನದ ಹಿಂದೆ ನಿಗದಿಯಾಗಿದೆ. ಈವರೆಗೆ ಸದಸ್ಯರಿಗೆ ಏಕೆ ಮಾಹಿತಿ ತಲುಪಿಸಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಬಳಿಕ ಜಿಪಂ ಸದಸ್ಯ ಬಸರೆಡ್ಡಿ ಅನಪೂರ ಮಾತನಾಡಿ, ತಮ್ಮ ಪತ್ರದ ಸುಳ್ಳು ಉಲ್ಲೇಖ ನಮೂದಿಸಿ ಜಿಲ್ಲಾ ಆರೋಗ್ಯ ಅಧಿಕಾರಿ ಎಂ.ಎಸ್‌. ಪಾಟೀಲ ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದಾರೆ. ತಾವು ಯಾರಿಗೂ ಯಾವುದೇ ಪತ್ರ ನೀಡಿಲ್ಲ. ಆದರೂ ತಮ್ಮ ಹೆಸರು ಹೇಗೆ ಉಲ್ಲೇಖವಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಸಾಕಷ್ಟು ಅವ್ಯವಹಾರ ನಡೆಯುತ್ತಿದೆ. ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದ ಪ್ರಸಂಗ ನಡೆಯಿತು. ಕಾಮಗಾರಿಯೊಂದರ ಟೆಂಡರ್‌ ಕರೆದು ಆರು ತಿಂಗಳು ಕಳೆದರೂ ಇನ್ನೂ ತೆರೆದಿಲ್ಲ ಎಂದು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಪರಿಸ್ಥಿತಿ ತಿಳಿಗೊಳಿಸಲು ಜಿಪಂ ಅಧ್ಯಕ್ಷರು 12:45ಕ್ಕೆ ಸಭೆಯನ್ನು ಅರ್ಧಗಂಟೆ ಮುಂದೂಡಿದರು.

ಪುನಃ 1:30ಕ್ಕೆ ಸಭೆ ಸೇರಿ ಸದಸ್ಯರಿಗೆ ಸರಿಯಾದ ಮಾಹಿತಿಯಿಲ್ಲದಿರುವುದು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆ ಹಿನ್ನೆಲೆಯಲ್ಲಿ ಕೆಲ ಅಧಿಕಾರಿಗಳು ಗೈರಾಗಿದ್ದರಿಂದ ಸಭೆಯನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ ಮುಂದಿನ
ದಿನಾಂಕವನ್ನು ತಿಳಿಸಲಾಗುವುದು ಎಂದು ಘೋಷಿಸಲಾಯಿತು. ಸಭೆಯಲ್ಲಿ ಯಾವುದೇ ವಿಷಯಗಳು ಚರ್ಚೆಯಾಗದೇ ಸಮಯ
ವ್ಯರ್ಥವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next