ಯಾದಗಿರಿ: ಜಾನಪದ ಕಲೆ, ಪರಂಪರೆ, ಸಾಹಿತ್ಯ ಸಂಸ್ಕೃತಿ ಮೌಖೀಕ ಪರಂಪರೆಯ ಮೂಲ ಸ್ವರೂಪದಿಂದ ಬಂದಿದ್ದು, ಇದು ಮೌಖೀಕ ಪರಂಪರೆಯ ತವನಿಧಿಯಾಗಿದೆ ಎಂದು ಜಾನಪದ ಸಾಹಿತಿ ನರಸಪ್ಪ ಚಿನ್ನಾಕಟ್ಟಿ ಹೇಳಿದರು.
ನಗರದ ಸರ್ವಜ್ಞ ಕಾಲೇಜಿನಲ್ಲಿ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಳ್ಳಿಯ ಹಾಡುಗಳು, ಸಂಪ್ರದಾಯದ ಪದಗಳು, ಕೃಷಿ ಗೀತೆಗಳು, ಗ್ರಾಮೀಣ ಗೀತೆಗೆಳು ಇಂದು ಬಳಕೆ ಕಡಿಮೆಯಾಗಿ ಅಳಿವಿನ ಅಂಚಿನಲ್ಲಿವೆ. ಜಾಗತೀಕರಣ ಬೆಳೆದು ಜಾನಪದಕ್ಕೆ ಧಕ್ಕೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ| ಸಿದ್ದಪ್ಪ ಹೊಟ್ಟಿ, ಇಂದಿನ ಯುವ ಜನ ಮತ್ತು ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ ವಹಿಸಬೇಕು, ಜೊತೆಗೆ ಜಾನಪದ ಕಲೆ ಮತ್ತು ಕ್ರೀಡೆ ಉಳಿಯುವ ನಿಟ್ಟಿನಲ್ಲಿ ಆಸಕ್ತಿ ವಹಿಸಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಅಯ್ಯಣ್ಣ ಹುಂಡೆಕಾರ, ವೀರಶೈವ ಸಮಾಜದ ತಾಲೂಕಾಧ್ಯಕ್ಷ ಆರ್. ಮಹಾದೇವಪ್ಪಗೌಡ ಅಬ್ಬೆತುಮಕೂರ, ಸಾಹಿತಿ ಗುರು ಪ್ರಸಾದ ವೈದ್ಯ, ಕಾಲೇಜಿನ ಪ್ರಾಚಾರ್ಯ ಗಂಗಾಧರ ಬಡಿಗೇರ ಮಾತನಾಡಿದರು.
ಕರ್ನಾಟಕ ಜಾನಪದ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಪ್ರೊ| ಚೆನ್ನಾರಡ್ಡಿ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶ್ರೀಶೈಲ ಹಿರೇಮಠ ನಿರೂಪಿಸಿದರು. ಸಿದ್ರಾಮಪ್ಪ ನಿರಡಗಿ ಸ್ವಾಗತಿಸಿ, ವಂದಿಸಿದರು.