Advertisement

ಡೆಂಘೀ-ಚಿಕೂನ್‌ಗುನ್ಯಾ ರೋಗ ಬರದಂತೆ ಎಚ್ಚರ ವಹಿಸಿ

05:12 PM May 17, 2019 | Team Udayavani |

ಯಾದಗಿರಿ: ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಡೆಂಘೀ ಮತ್ತು ಚಿಕೂನ್‌ಗುನ್ಯಾ ರೋಗಗಳು ಬರದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಹಬೀಬ್‌ ಉಸ್ಮಾನ್‌ ಪಟೇಲ ಸಲಹೆ ನೀಡಿದರು.

Advertisement

ನಗರದ ಹೊಸ ಬಸ್‌ ನಿಲ್ದಾಣದಲ್ಲಿ ಗುರುವಾರ ವಿಶ್ವ ಡೆಂಘೀ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತೀವ್ರ ಜ್ವರ, ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಮಾಂಸಖಂಡ ಹಾಗೂ ಕೀಲುಗಳಲ್ಲಿ ನೋವಾಗುವುದು. ಬಾಯಿ, ಮೂಗು ಮತ್ತು ವಸಡುಗಳಿಂದ ರಕ್ತಸ್ರಾವ ಆಗುವುದು. ಚರ್ಮದ ಮೇಲೆ ರಕ್ತಸ್ರಾವದ ಗುರುತು ಕಾಣಿಸಿಕೊಳ್ಳುವುದು ಡೆಂಘೀ ರೋಗದ ಲಕ್ಷಣಗಳಾಗಿವೆ. ಡೆಂಘೀ ರೋಗಕ್ಕೆ ಕೇವಲ ಪ್ಯಾರಾಸಿಟಮಲ್ ಮಾತ್ರೆಗಳನ್ನು ಉಪಯೋಗಿಸಬೇಕು. ಯಾವುದೇ ಕಾರಣಕ್ಕೂ ಅಸಪ್ರಿನ್‌, ಬ್ರೊಪ್ರೀನ್‌ ಮಾತ್ರೆಗಳನ್ನು ಬಳಸಬಾರದು ಎಂದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ| ಸೂರ್ಯಪ್ರಕಾಶ ಎಂ. ಕಂದಕೂರ ಮಾತನಾಡಿ, ಡೆಂಘೀ ಹಾಗೂ ಚಿಕೂನ್‌ಗುನ್ಯಾ ವೈರಾಣುವಿನಿಂದ ಬರುವ ರೋಗಗಳಾಗಿವೆ. ಇಂತಹ ಕಾಯಿಲೆಗಳು ಬರದಂತೆ ನೋಡಿಕೊಳ್ಳುವುದು ನಮ್ಮ ಕೈಯಲ್ಲಿದೆ. ಡೆಂಘೀ ರೋಗಕ್ಕೆ ನಿರ್ದಿಷ್ಟ ಚಿಕಿತ್ಸೆ ಅಥವಾ ಲಸಿಕೆ ಇಲ್ಲ. ಹಾಗಾಗಿ ತೀವ್ರ ಜ್ವರ ಕಂಡು ಬಂದಲ್ಲಿ ಕೂಡಲೇ ಚಿಕಿತ್ಸೆ ನೀಡಿದಲ್ಲಿ ರೋಗದಿಂದಾಗುವ ಅನಾಹುತವನ್ನು ತಪ್ಪಿಸಬಹುದು ಎಂದು ಹೇಳಿದರು.

ಡೆಂಘೀ ರೋಗದ ನಿಯಂತ್ರಣವು ಎಲ್ಲರ ಜವಾಬ್ದಾರಿಯಾಗಿದೆ. ಸಂಬಂಧಪಟ್ಟ ಇಲಾಖೆಗಳಾದ ನಗರಸಭೆ, ಪುರಸಭೆೆ, ಪಟ್ಟಣ ಪಂಚಾಯಿತಿ, ಪಂಚಾಯತ್‌ ರಾಜ್‌, ಶಿಕ್ಷಣ ಇಲಾಖೆ, ಸಾರಿಗೆ ಸಂಸ್ಥೆ ಹಾಗೂ ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಸಹಕಾರ ನೀಡಿದಲ್ಲಿ ಡೆಂಘೀ ರೋಗವನ್ನು ನಿಯಂತ್ರಿಸಬಹುದು ಎಂದು ತಿಳಿಸಿದರು.

ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ| ಭಗವಂತ ಅನವಾರ ಮಾತನಾಡಿ, ಡೆಂಘೀ ರೋಗವನ್ನು ಹಬ್ಬಿಸುವ ಈಡೀಸ್‌ ಸೊಳ್ಳೆ ಹಗಲು ಹೊತ್ತಿನಲ್ಲಿ ಕಚ್ಚುವುದರಿಂದ ಗರ್ಭಿಣಿ, ವೃದ್ಧರು, ಬಾಣಂತಿಯರು ಹಾಗೂ ಮಕ್ಕಳು ಹಗಲು ಹೊತ್ತು ವಿಶ್ರಾಂತಿ ಪಡೆಯುವಾಗ ಸೊಳ್ಳೆ ಪರದೆಗಳನ್ನು ತಪ್ಪದೇ ಬಳಸಬೇಕು ಎಂದು ಸಲಹೆ ನೀಡಿದರು.

Advertisement

ನೀರು ಶೇಖರಣಾ ತೊಟ್ಟಿಗಳನ್ನು ವಾರಕ್ಕೆ ಎರಡು ಬಾರಿ ಉಜ್ಜಿ ತೊಳೆದು ಒಣಗಿಸಿ ಪುನಃ ತುಂಬಬೇಕು. ತ್ಯಾಜ್ಯ ವಸ್ತುಗಳಾದ ಒಡೆದ ಬಾಟಲಿ, ಪ್ಲಾಸ್ಟಿಕ್‌ ಕಪ್‌, ಪ್ಲಾಸ್ಟಿಕ್‌ ಗ್ಲಾಸ್‌, ಎಳೆ ನೀರು ಹಾಗೂ ಟೆಂಗಿನಕಾಯಿ ಚಿಪ್ಪುಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಅದೇ ರೀತಿ ಅನುಪಯುಕ್ತ ಟೈರ್‌ಗಳನ್ನು ಮನೆಯ ಮೇಲ್ಚಾವಣಿ ಸೇರಿದಂತೆ ಎಲ್ಲೆಂದರಲ್ಲಿ ಎಸೆಯದೆ ಅವುಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು ಎಂದು ತಿಳಿಸಿದರು.

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ಸಂಚಾರಿ ನಿಯಂತ್ರಣಾಧಿಕಾರಿ ಮಹಿಪಾಲ ಬೇಗಾರ ಮಾತನಾಡಿ, ಸ್ವಚ್ಛತೆ ಎಲ್ಲರ ಜವಾಬ್ದಾರಿಯಾಗಿದೆ. ಮನೆಯ ಸುತ್ತಲೂ ನೀರು ನಿಲ್ಲದಂತೆ ಎಚ್ಚರ ವಹಿಸಿ ಪರಿಸರವನ್ನು ಸ್ವಚ್ಛವಾಗಿಡಬೇಕು ಎಂದು ಹೇಳಿದರು.

ಬಸ್‌ ನಿಲ್ದಾಣ ಘಟಕ ವ್ಯವಸ್ಥಾಪಕ ರವಿಶಂಕರ, ತಾಲೂಕು ಆರೋಗ್ಯ ಅಧಿಕಾರಿ ಹಣಮಂತ ರೆಡ್ಡಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ| ಮೊಹ್ಮದ್‌ ನೂಮಾನ್‌, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿರಾದಾರ ಶಂಕರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next