Advertisement

14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಹಚ್ಚಬೇಡಿ: ನ್ಯಾ|ಸಾಲಮಂಟಪಿ

11:30 AM Jun 13, 2019 | Naveen |

ಯಾದಗಿರಿ: ವಿವಿಧ ಇಲಾಖೆಗಳ ಪ್ರಾಮಾಣಿಕ ಪ್ರಯತ್ನದಿಂದ ಬಾಲ ಕಾರ್ಮಿಕ ಪದ್ಧತಿ ಮುಕ್ತ ಜಿಲ್ಲೆಯನ್ನಾಗಿಸುವಂತೆ ಹಿರಿಯ ಸಿವಿಲ್ ನ್ಯಾಯಾಧಿಧೀಶ ನಾಮದೇವ ಕೆ. ಸಾಲಮಂಟಪಿ ಕರೆ ನೀಡಿದರು.

Advertisement

ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್‌ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಕಚೇರಿ ಹಾಗೂ ಜಿಲ್ಲಾ ವಕೀಲರ ಸಂಘ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಸಂವಿಧಾನದಲ್ಲಿ ಮಕ್ಕಳ ಹಕ್ಕುಗಳನ್ನು ನೀಡಲಾಗಿದೆ. 14 ವರ್ಷದೊಳಗಿನ ಮಕ್ಕಳನ್ನು ಯಾವುದೇ ಅಂಗಡಿ, ಸಂಸ್ಥೆ, ಗ್ಯಾರೇಜ್‌, ಕಾರ್ಖಾನೆ, ಹೋಟೆಲ್, ರೆಸ್ಟೊರೆಂಟ್, ಡಾಬಾ, ಮನೆಗೆಲಸ ಇತರೆ ಯಾವುದೇ ಉದ್ಯೋಗದಲ್ಲಿ ದುಡಿಸಿಕೊಳ್ಳುವಂತಿಲ್ಲ. 14ರಿಂದ 18 ವರ್ಷದೊಳಗಿನ ಕಿಶೋರಾವಸ್ಥೆಯ ಮಕ್ಕಳನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದರು.

ಮಕ್ಕಳು ದೇಶದ ಆಸ್ತಿಯಾಗಿದ್ದಾರೆ. ಅವರನ್ನು ದುಡಿಮೆಗೆ ಹಚ್ಚದೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಶಾಲೆಯಲ್ಲಿ ಶುಲ್ಕ ಭರಿಸದ ಕಾರಣ ಮಕ್ಕಳನ್ನು ಬಿಸಿಲಿನಲ್ಲಿ ನಿಲ್ಲಿಸುವುದು ಕೂಡ ಅಪರಾಧವಾಗಿದೆ. 14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಹಚ್ಚುವುದು ಕಂಡು ಬಂದರೆ ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ, ಪೊಲೀಸ್‌ ಇಲಾಖೆಗೆ ಅಥವಾ ಮಕ್ಕಳ ಸಹಾಯವಾಣಿ 1098 ಸಂಖ್ಯೆಗೆ ಕರೆ ಮಾಡುವಂತೆ ಸಲಹೆ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಕಾಶ ಅರ್ಜುನ ಬನಸೊಡೆ ಮಾತನಾಡಿ, ಬಾಲ ಕಾರ್ಮಿಕ ಪದ್ಧತಿ ಇನ್ನೂ ಜಾರಿಯಲ್ಲಿರುವುದು ಕಳವಳಕಾರಿ ಸಂಗತಿಯಾಗಿದೆ. ಬಡತನ ನಿವಾರಣೆ, ಉದ್ಯೋಗ ಸೃಷ್ಟಿಯಾದರೆ ಈ ಪದ್ಧತಿಯನ್ನು ತೊಲಗಿಸಬಹುದು ಎಂದು ಹೇಳಿದರು.

Advertisement

ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಂಡಲ್ಲಿ ತಪ್ಪಿತಸ್ಥ ಮಾಲೀಕರಿಗೆ 6 ತಿಂಗಳಿಂದ 2 ವರ್ಷ ಜೈಲು ಶಿಕ್ಷೆ ಅಥವಾ 20 ಸಾವಿರ ರೂ.ಗಳಿಂದ 50 ಸಾವಿರ ರೂ.ಗಳವರೆಗೆ ದಂಡ ಅಥವಾ ಎರಡನ್ನೂ ಸಹ ನ್ಯಾಯಾಲಯವು ವಿಧಿಸಬಹುದಾಗಿದೆ. ತಪ್ಪಿತಸ್ಥರ ವಿರುದ್ಧ ಎಫ್‌ಐಆರ್‌ ಸಹ ದಾಖಲಿಸಲಾಗುವುದು. ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳಲು ನಿರಾಕರಿಸಿದರೂ ಅಪರಾಧವಾಗುತ್ತದೆ. ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕ ಪದ್ಧತಿ ಕಂಡು ಬಂದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ದೂರು ಸಲ್ಲಿಸಿ, ಪರಿಹಾರ ಪಡೆಯಬಹುದಾಗಿದೆ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್‌ ಸೋನವಣೆ ಮಾತನಾಡಿ, ಮಕ್ಕಳಿಗೆ ಎಲ್ಲಾದರೂ ಬಾಲ ಕಾರ್ಮಿಕರು, ಲೈಂಗಿಕ ಕಿರುಕುಳ, ಬಾಲ್ಯ ವಿವಾಹ ಕಂಡು ಬಂದರೆ ಪೋಷಕರ ಬಳಿ ಇಲ್ಲವೆ ಶಿಕ್ಷಕರು, ಪೊಲೀಸರು ಅಥವಾ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ವಿಷಯ ಮುಟ್ಟಿಸಬೇಕು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಪ್ರಕಾಶ್‌ ಜಿ.ರಜಪೂತ ಮಾತನಾಡಿ, ಸಾಮಾಜಿಕ ಪಿಡುಗು ಆಗಿರುವ ಬಾಲ ಕಾರ್ಮಿಕ ಪದ್ಧತಿಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ನಾನಾ ವೃತ್ತಿಗಳಲ್ಲಿ ತೊಡಗಿರುವ ಬಾಲ ಕಾರ್ಮಿಕರನ್ನು ದುಡಿಮೆಯಿಂದ ಬಿಡುಗಡೆಗೊಳಿಸಿ, ಉತ್ತಮ ಶಿಕ್ಷಣ ನೀಡಬೇಕು. ಈ ಮೂಲಕ ಅವರ ಬಾಲ್ಯದಲ್ಲಿ ಕಳೆದು ಹೋಗಿರುವ ಸುವರ್ಣ ಕಾಲವನ್ನು ಮರಳಿ ಕೊಡಿಸಿ ಬಾಲ ಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸಲು ಶ್ರಮಿಸೋಣ ಎಂದು ಕರೆ ನೀಡಿದರು.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ| ಹಣಮಂತ್ರಾಯ ಕರಡಿ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ರಘುವೀರಸಿಂಗ್‌ ಠಾಕೂರ್‌ ಮಾತನಾಡಿದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಬಸವರಾಜ ಪಾಟೀಲ ಉಪನ್ಯಾಸ ನೀಡಿದರು. ಸಿವಿಲ್ ನ್ಯಾಯಾಧೀಶ ಲೋಕೇಶ್‌ ಧನಪಾಲ ಹವಲೆ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಸ್ಮೀತಾ ಮಾಲಗಾಂವೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರಭಾಕರ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಸದಸ್ಯ ಚಂದ್ರಶೇಖರ ಅಲ್ಲಿಪುರ, ರಾಜ್ಯ ಬಾಲ ಭವನ ಸೊಸೈಟಿ ಸದಸ್ಯೆ ಮಲ್ಲಮ್ಮ ಕೋಮರ್‌, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶ್ರೀನಿವಾಸರಾವ್‌ ಕುಲಕರ್ಣಿ, ಸರ್ವ ಶಿಕ್ಷಣ ಅಭಿಯಾನದ ನಾಗಪ್ಪ ಪೋತಲ್, ಡಾನ್‌ ಬೋಸ್ಕೋ ಸಮಾಜ ಸೇವಾ ಕೇಂದ್ರ ಹಾಗೂ ಮಕ್ಕಳ ಸಹಾಯವಾಣಿ ಕೇಂದ್ರದ ನಿರ್ದೇಶಕ ಫಾದರ್‌ ಜಿ. ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ| ಗಿರೀಶ್‌ ಕಾರ್ನಾಡ್‌ ನಿಧನಕ್ಕೆ ಮೌನಾಚರಣೆ ಮಾಡಲಾಯಿತು. ಆರ್‌.ವಿ. ಶಾಲೆಯ ಗುರುಕಿರಣ ಮತ್ತು ರವಿಕಿರಣ ಪ್ರಾರ್ಥಿಸಿದರು. ಮಕ್ಕಳ ಸಹಾಯವಾಣಿ ಸಂಯೋಜಕ ಶರಬಯ್ಯ ಎಸ್‌.ಕಲಾಲ್ ನಿರೂಪಿಸಿದರು. ಕ್ರೀಮ್‌ ಮಕ್ಕಳ ಹಕ್ಕುಗಳ ಸಂಯೋಜಕ ಶರಣಪ್ಪ ಸಿ.ಅಮರಾಪುರ ವಂದಿಸಿದರು.

ಕಾರ್ಯಕ್ರಮಕ್ಕೂ ಮೊದಲು ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಜಾಗೃತಿ ಜಾಥಾಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶ ನಾಮದೇವ ಕೆ. ಸಾಲಮಂಟಪಿ ಚಾಲನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next