ಯಾದಗಿರಿ: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ತಾಯಿ ಎದೆ ಹಾಲು ಅವಶ್ಯಕವಾಗಿದೆ. ತಾಯಂದಿರು ಎದೆ ಹಾಲು ಉಣಿಸಿದರೆ ಅವರ ಸೌಂದರ್ಯ ಹಾಳಾಗುತ್ತದೆ ಎಂಬ ಮೂಢನಂಬಿಕೆಯಿಂದ ಹೊರಬರಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಂಕರ ಬಿರಾದರ ಹೇಳಿದರು.
ಸುರಪುರ ತಾಲೂಕಿನ ಲಕ್ಷ್ಮೀಪೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಶುವಿಗೆ ಹುಟ್ಟಿನಿಂದ 6 ತಿಂಗಳಗಳವರೆಗೆ ಎದೆ ಹಾಲು ಕುಡಿಸುವುದರಿಂದ ಶಿಶು ದೈಹಿಕವಾಗಿ ಮತ್ತು ಬೌದ್ಧಿಕವಾಗಿ ಬೆಳವಣಿಗೆ ಹೊಂದುತ್ತದೆ. ಅಲ್ಲದೇ, ಶಿಶುವು ಸಂಪೂರ್ಣ ವಿಕಾಸ ಹೊಂದಿ ನ್ಯೂಮೋನಿಯಾ, ಅತಿಸಾರ ಭೇದಿ, ಇತ್ಯಾದಿ ತೊಂದರೆಗಳಿಂದ ರಕ್ಷಣೆ ಪಡೆಯುತ್ತದೆ ಎಂದು ಹೇಳಿದರು.
ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ನಂದಣ್ಣ ಪಾಟೀಲ ಮಾತನಾಡಿ, ತಾಯಿಯ ಎದೆ ಹಾಲು ಮಗುವಿಗೆ ಅತ್ಯಂತ ಶ್ರೇಷ್ಠವಾಗಿದ್ದು, ತಾಯಿಯ ಮೊದಲ ಹಾಲು (ಗಿಣ್ಣು ಹಾಲು) ಉಣಿಸುವುದರಿಂದ ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಮಗುವಿಗೆ ಕಾಯಿಲೆ ಬರದಂತೆ ತಡೆಗಟ್ಟುವ ಶಕ್ತಿ ತಾಯಿಯ ಎದೆ ಹಾಲಿನಲ್ಲಿದೆ. 6 ತಿಂಗಳವರೆಗೂ ತಾಯಿಯ ಎದೆ ಹಾಲು ಜೊತೆಗೆ 6 ತಿಂಗಳ ನಂತರ ಪೂರಕ ಪೌಷ್ಟಿಕ ಆಹಾರದ ಜೊತೆಗೆ 2 ವರ್ಷಗಳವರೆಗೆ ಎದೆ ಹಾಲು ಮುಂದುವರಿಸಬೇಕು ಎಂದು ತಿಳಿಸಿದರು.
ಆರೋಗ್ಯ ಮೇಲ್ವಿಚಾರಕ ಸತ್ಯನಾರಾಯಣ ಮಾತನಾಡಿ, 10 ಮಾರಕ ರೋಗಗಳಾದ ಬಾಲ್ಯ ಕ್ಷಯ, ಪೋಲಿಯೋ, ಗಂಟಲು ಮಾರಿ, ನಾಯಿ ಕೆಮ್ಮು, ಕಾಮಾಲೆ, ನ್ಯೂಮೋನಿಯ, ರೋಟಾ ವೈರಸ್ ವಿರೋಧ ಲಸಿಕೆ ತಪ್ಪದೇ ನೀಡುವಂತೆ ತಾಯಂದಿರಿಗೆ ಸಲಗೆ ನೀಡಿದರು.
ತಾಯಿ ಎದೆ ಹಾಲು ಅಮೃತಕ್ಕೆ ಸಮಾನ. ಆದ್ದರಿಂದ ಹೆರಿಗೆಯಾದ ನಂತರ ಬಾಣಂತಿಯರು ಅರ್ಧ ಗಂಟೆಯೊಳಗಾಗಿ ಶಿಶುವಿಗೆ ಹಾಲು ಉಣಿಸುವಂತೆ ಲಕ್ಷ್ಮೀಪೂರ ಗ್ರಾಮ ಪಂಚಾಯಿತಿ ಸದಸ್ಯೆ ಶಿವಮ್ಮ ತಿಳಿಸಿದರು. ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗರ್ಭಿಣಿ ಹಾಗೂ ತಾಯಂದಿರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.