Advertisement

ಆನ್‌ಲೈನ್‌ನಲ್ಲೇ ಇ-ಫೈಲಿಂಗ್‌ ಮಾಡಿ

06:11 PM Sep 18, 2019 | Naveen |

ಯಾದಗಿರಿ: ಭಾರತ ಸರ್ಕಾರ ತೆರಿಗೆ ಪಾವತಿ ವ್ಯವಸ್ಥೆಯನ್ನೂ ಆನ್‌ಲೈನ್‌ನಲ್ಲಿ ಮಾಡಿದೆ. ತೆರಿಗೆ ಪಾವತಿದಾರರು ಇನ್ನು ಮುಂದೆ ಯಾವುದೇ ಸಮಸ್ಯೆ ಇಲ್ಲದೇ ಸರಳವಾಗಿ ಆನ್‌ಲೈನ್‌ನಲ್ಲಿಯೇ ಇ-ಫೈಲಿಂಗ್‌ ಮಾಡಬಹುದು ಎಂದು ಜಿಲ್ಲಾ (ವಾರ್ಡ್‌-1ರ) ಆದಾಯ ತೆರಿಗೆ ಅಧಿಕಾರಿ ದೇಬಸುಂದರ್‌ ಗೋರ್‌ ಹೇಳಿದರು.

Advertisement

ನಗರದ ಗಂಜ್‌ ಆವರಣದಲ್ಲಿರುವ ಜಿಲ್ಲಾ ವಾಣಿಜ್ಯೋದ್ಯಮಿಗಳ ಸಂಘದ ವತಿಯಿಂದ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಆನ್‌ಲೈನ್‌ ತೆರಿಗೆ ಪಾವತಿ ಮತ್ತು ಟಿಡಿಎಸ್‌ ವ್ಯವಸ್ಥೆ ಕುರಿತು ಏರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಆನ್‌ಲೈನ್‌ ಆಗಿರುವುದರಿಂದ ಪ್ರತಿಯೊಬ್ಬ ನಾಗರಿಕರು ನಮ್ಮ ಇಲಾಖೆ ವೆಬ್‌ಸೈಟ್‌ಗೆ ಭೇಟಿ ನೀಡಿ ನಿಮ್ಮ ವ್ಯವಹಾರ ವ್ಯಾಪಾರ ಇಲ್ಲವೆ ವೈಯಕ್ತಿಕ ಆದಾಯದ ಮೇಲೆ ತೆರಿಗೆ ಪಾವತಿಸಬಹುದಾಗಿದೆ. ಇದರಿಂದ ವ್ಯಾಪಾರ ವ್ಯವಹಾರ ಆರ್ಥಿಕ ಶಿಸ್ತಿಗೆ ಒಳಪಡಲಿದೆ. ಅಲ್ಲದೇ ದೇಶದ ಅರ್ಥ ವ್ಯವಸ್ಥೆಸಹ ಒಂದು ಶಿಸ್ತಿಗೆ ಒಳಪಡಲಿದೆ ಎಂದು ಹೇಳಿದರು.

ಯಾವುದೇ ವ್ಯವಹಾರ ಇಲ್ಲವೇ ಕೊಡುಕೊಳೆ ನಡೆದಾಗ ತೆರಿಗೆ ಕಡಿತ ಮಾಡಿಕೊಳ್ಳಲಾಗುತ್ತದೆ. ನಂತರ ನೀವು ಆದಾಯ ತೆರಿಗೆ ಅರ್ಜಿ ತುಂಬಿದಲ್ಲಿ ನಿಮ್ಮಿಂದ ಕಡಿತಗೊಂಡ ಹೆಚ್ಚುವರಿ ಹಣವನ್ನು ಮರಳಿಸುವ ವ್ಯವಸ್ತೆ ಟಿಡಿಎಸ್‌ನಲ್ಲಿದೆ ಎಂದು ವಿವರಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಾಣಿಜ್ಯೋದ್ಯಮಿಗಳ ಸಂಘದ ಗೌರವ ಕಾರ್ಯದರ್ಶಿ ಚನ್ನಮಲ್ಲಿಕಾರ್ಜುನ ಅಕ್ಕಿ ಮಾತನಾಡಿ, ಈ ಸಲದ ಬಜೆಟ್‌ನಲ್ಲಿ ಒಂದು ಕೋಟಿ ವರೆಗೆ ನಗದು ವ್ಯವಹಾರ ಮಾಡಬಹುದು. ಇದನ್ನು ಮೀರಿದವರಿಗೆ ಶೇ.2ರಷ್ಟು ಟಿಡಿಎಸ್‌ ಕಡಿತ ಮಾಡಲಾಗುತ್ತಿದೆ. ಇದರಿಂದ ನಿತ್ಯ ನಗದು ವ್ಯವಹಾರ ಮಾಡುವವರಿಗೆ ತೊಂದರೆಯಾಗಿದೆ ಎಂದು ಹೇಳಿದರು.

Advertisement

ರೈತರು ಹೆಚ್ಚಾಗಿ ನಗದು ವ್ಯವಹಾರ ಮಾಡುತ್ತಾರೆ. ಅವರು ಹಣ ತಂದು ಕೊಡುವುದರಿಂದ ಅವರ ಜತೆ ಆನ್‌ಲೈನ್‌ ವ್ಯವಹಾರ ಸಾಧ್ಯವಾಗುತ್ತಿಲ್ಲ. ಗಂಜ್‌ ಒಂದರಲ್ಲಿಯೇ ನಿತ್ಯ ಒಂದು ಕೋಟಿ ನಗದು ಸಂಗ್ರಹವಾದರೆ ಇದಕ್ಕೆ 2 ಲಕ್ಷ ರೂ. ಸರ್ಕಾರ ಕಡಿತ ಮಾಡಿಕೊಂಡು ಹಣ ಇಟ್ಟುಕೊಂಡರೆ ವ್ಯಾಪಾರಸ್ಥರಿಗೆ ತೀವ್ರ ತೊಂದರೆಯಾಗುತ್ತದೆ. ಇದು ಒಂದು ರೀತಿ ರೈತರು ಆನ್‌ಲೈನ್‌ ವ್ಯವಹಾರ ಮಾಡದಿದ್ದರೆ ವರ್ತಕರಿಗೆ ಬರೆ ಎಳೆದಂತೆ ಸರಿ. ಆದ್ದರಿಂದ ಇದಕ್ಕೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ಎಲ್ಲ ವ್ಯವಹಾರಸ್ಥರಿಗೆ ಅನುಕೂಲವಾಗುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.

ಯಾದಗಿರಿ ನಗರದ ಹಿರಿಯ ಲೆಕ್ಕ ಪರಿಶೋಧಕ (ಚಾರ್ಟೆಡ್‌ ಅಕೌಂಟೆಂಟ್) ಸಂತೋಷ ಪಾಟೀಲ ಟಿಡಿಎಸ್‌ ಕುರಿತು ವಿವರವಾಗಿ ಮಾತನಾಡಿ, ತೆರಿಗೆ ಕಡಿತವಾದರೂ ನಂತರ ಶಿಸ್ತುಬದ್ಧವಾಗಿ ಆದಾಯ ತೆರಿಗೆ ಪಾವತಿ ಮಾಡಿದಾಗ ನಿಮ್ಮ ಹೆಚ್ಚುವರಿ ಹಣ ಮರಳಿ ಪಡೆಯಲು ಇದರಲ್ಲಿ ಅವಕಾಶ ವಿದೆ. ಆದರೆ ದೊಡ್ಡ ವ್ಯವಹಾರಸ್ಥರಿಗೆ ಟಿಡಿಎಸ್‌ನಿಂದ ಆರ್ಥಿಕ ಸಮಸ್ಯೆಯಾಗುತ್ತದೆ. ಇದು ಸರ್ಕಾರ ಮಟ್ಟದಲ್ಲಿ ಆಗಿರುವ ತೀರ್ಮಾನವಾಗಿದೆ. ಆದ್ದರಿಂದ ಸರ್ಕಾರ ಮಟ್ಟದಲ್ಲಿಯೇ ಪರಿಹಾರ ಸಾಧ್ಯ ಎಂದು ಹೇಳಿದರು.

ಉಪಾಧ್ಯಕ್ಷ ವಿಷ್ಣುಕುಮಾರ ವ್ಯಾಸ್‌ ಕಾಂತಿಲಾಲ್ ದೋಕಾ, ದಿನೇಶ ಜೈನ್‌, ಭರತ ಭಾನುಷಾಲಿ, ಸೋಮನಾಥ ಜೈನ್‌, ರಾಜೇಂದ್ರ ಗಾಂದಿ, ಪರಮಾನಂದರೆಡ್ಡಿ ಕೊಲ್ಲೂರು, ಲಾಯಿಕ್‌ ಹುಸೇನ ಬಾದಲ್, ಸುರೇಶ ಬಾಣಾ, ವೀರೇಶಗೌಡ ಗೋನಾಲ ಸೇರಿದಂತೆ ವ್ಯಾಪಾರಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next