Advertisement

ತ್ಯಾಜ್ಯ ನಿರ್ವಹಣೆ ಮಾಡದ ಆಸ್ಪತ್ರೆಗೆ ನೋಟಿಸ್‌

04:12 PM May 04, 2019 | Naveen |

ಯಾದಗಿರಿ: ಜಿಲ್ಲೆಯಲ್ಲಿರುವ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಂದ ಉತ್ಪತ್ತಿಯಾಗುವ ಜೈವಿಕ ವೈದ್ಯಕೀಯ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ತ್ಯಾಜ್ಯವನ್ನು ಸರಿಯಾಗಿ ನಿರ್ವಹಣೆ ಮಾಡುವುದಿಲ್ಲ ಎಂಬ ಆರೋಪ ಇದೆ. ಹಾಗಾಗಿ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಈ ಬಗ್ಗೆ ಸಂಬಂಧಪಟ್ಟ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್‌ ನೀಡುವಂತೆ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಸೂಚಿಸಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಜಿಲ್ಲಾ ಮೇಲ್ವಿಚಾರಣೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಸ್ಪತ್ರೆಯಲ್ಲಿ ನಿಗದಿತ ಬಾಕ್ಸ್‌ಗಳಲ್ಲಿ ಮಾತ್ರ ತ್ಯಾಜ್ಯಗಳನ್ನು ಹಾಕಬೇಕು. ಬಾಕ್ಸ್‌ನಲ್ಲಿ ಹಾಕುವಾಗಲೇ ಸ್ವಲ್ಪ ಯೋಚಿಸಿದರೆ ತ್ಯಾಜ್ಯ ವಿಲೇವಾರಿ ಸರಳವಾಗುತ್ತದೆ. ಈ ನಿಟ್ಟಿನಲ್ಲಿ ಆಸ್ಪತ್ರೆಗಳ ಆಡಳಿತ ಮಂಡಳಿ ಹಾಗೂ ವೈದ್ಯರು ಸೂಕ್ತ ಕ್ರಮ ವಹಿಸಬೇಕು. ತದನಂತರ ನಿಯೋಜಿತ ತ್ಯಾಜ್ಯ ವಿಲೇವಾರಿ ವಾಹನ ಬಂದಾಗ ಅದನ್ನು ನೀಡಬೇಕು. ನಗರಸಭೆ ಮತ್ತು ಪುರಸಭೆಯವರು ಯಾವುದೇ ಕಾರಣಕ್ಕೂ ಜೈವಿಕ ವೈದ್ಯಕೀಯ ತ್ಯಾಜ್ಯವನ್ನು ಸಂಗ್ರಹಿಸಬಾರದು ಎಂದು ನಿರ್ದೇಶಿಸಿದರು.

ಆರೋಗ್ಯ ಇಲಾಖೆಯೊಂದಿಗೆ ಆಸ್ಪತ್ರೆ ತ್ಯಾಜ್ಯ ವಿಂಗಡಣೆ ಬಗ್ಗೆ ತಾಲೂಕುವಾರು ಒಂದು ದಿನದ ತರಬೇತಿ ಆಯೋಜಿಸಬೇಕು. ತರಬೇತಿಯಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿಗಳು ಕೂಡ ಪಾಲ್ಗೊಳ್ಳಲಿ ಎಂದರು.

ಜಿಲ್ಲಾ ಆಸ್ಪತ್ರೆಯಲ್ಲಿ ಜೈವಿಕ ತ್ಯಾಜ್ಯ ಹೆಚ್ಚು ಉತ್ಪತ್ತಿಯಾಗುತ್ತದೆ. ಹಾಗಾಗಿ, ಜಿಲ್ಲಾಸ್ಪತ್ರೆಯಿಂದ ಪ್ರತಿದಿನ ತ್ಯಾಜ್ಯ ಸಂಗ್ರಹಿಸಬೇಕು. ಜಿಲ್ಲೆಯ ಪಶು ಆಸ್ಪತ್ರೆಗಳಲ್ಲಿನ ತ್ಯಾಜ್ಯವನ್ನೂ ಸಹ ಸೂಕ್ತ ವಿಲೇವಾರಿಗೆ ಕ್ರಮ ವಹಿಸಬೇಕು ಎಂದು ಹೇಳಿದರು.

ತ್ಯಾಜ್ಯ ವಿಲೇವಾರಿ ಗುತ್ತಿಗೆ ಪಡೆದ ಪರಿಸರ ಅಸೋಸಿಯೇಟ್ಸ್‌ನ ಸುರೇಶ ಮಾತನಾಡಿ, ಜೈವಿಕ ವೈದ್ಯಕೀಯ ತ್ಯಾಜ್ಯ ಸಂಗ್ರಹಣೆಗೆ 2 ವಾಹನಗಳಿವೆ. ವಾರದಲ್ಲಿ ಎರಡು ಬಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಜಿಲ್ಲೆಯಲ್ಲಿ 162 ಖಾಸಗಿ ಆಸ್ಪತ್ರೆಗಳಿದ್ದು, ಕೆಲವೊಂದರಲ್ಲಿ ಸರಿಯಾಗಿ ತ್ಯಾಜ್ಯ ವಿಂಗಡಣೆ ಮಾಡುವುದಿಲ್ಲ. ಶಹಾಪುರದ 8 ಖಾಸಗಿ ಆಸ್ಪತ್ರೆಗಳಲ್ಲಿ ಈ ಬಗ್ಗೆ ನಿರ್ಲಕ್ಷ್ಯ ಭಾವನೆ ಇದೆ ಎಂದು ಸಭೆಯ ಗಮನಕ್ಕೆ ತಂದರು.

Advertisement

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಹಬೀಬ ಉಸ್ಮಾನ್‌ ಪಟೇಲ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಸಂಜೀವಕುಮಾರ್‌ ರಾಯಚೂರಕರ್‌, ಜಿಲ್ಲಾ ನಗರಾಭಿವೃದ್ಧಿ ಕೋಶದ ಪ್ರಭಾರ ಯೋಜನಾ ನಿರ್ದೇಶಕ ಎಂ.ಎಸ್‌. ಅಲ್ಲಾಭಕ್ಷ, ಯಾದಗಿರಿ ನಗರಸಭೆ ಪೌರಾಯುಕ್ತ ರಮೇಶ ಸುಣಗಾರ, ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಅಧಿಕಾರಿ ವೆಂಕಟೇಶ್‌, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಗುರುನಾಥ ಗೌಡಪ್ಪನೋರ್‌, ಜಿಲ್ಲಾ ಆರ್‌ಸಿಎಚ್ ಅಧಿಕಾರಿಗಳಾದ ಡಾ| ಲಕ್ಷ್ಮೀಕಾಂತ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ| ಎಸ್‌.ಬಿ. ಪಾಟೀಲ್, ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣ ಅಧಿಕಾರಿಗಳಾದ ಡಾ| ಸೂರ್ಯಪ್ರಕಾಶ ಎಂ. ಕಂದಕೂರ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕರಾದ ಡಾ| ಶರಣಭೂಪಾಲರೆಡ್ಡಿ, ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ| ಹಣಮಂತರೆಡ್ಡಿ, ಡಾ| ರಮೇಶ್‌, ಸಹಾಯಕ ಪರಿಸರ ಅಧಿಕಾರಿ ಬಸವರಾಜ ಮಮದಾಪುರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಮುಂಜಾಗ್ರತೆಗೆ ಸೂಚನೆ
ಮೇ ತಿಂಗಳಲ್ಲಿ ಸುರಿವ ಮಳೆಯಲ್ಲಿ ಸಾಕಷ್ಟು ಅಂತರ ಇರುತ್ತದೆ. ಈ ಅವಧಿಯಲ್ಲಿ ಮಳೆ ನೀರು ಅಲ್ಲಲ್ಲಿ ಬಿದ್ದಿರುವ ತೆಂಗಿನ ಚಿಪ್ಪು, ಹಳೆ ಟೈರ್‌, ಪ್ಲಾಸ್ಟಿಕ್‌ ವಸ್ತುಗಳಲ್ಲಿ ನಿಂತು ಸೊಳ್ಳೆ ಉತ್ಪತ್ತಿಯಾಗುವ ಅವಕಾಶ ಇರುತ್ತದೆ. ಇದರಿಂದ ಡೆಂಘೀ, ಚಿಕನ್‌ಗುನ್ಯಾ ರೋಗ ಹರಡುವ ಸಾಧ್ಯತೆ ಹೆಚ್ಚು. ಹಾಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ರೋಗಗಳ ತಡೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್‌ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next