Advertisement

ವಾಡಿ-ಗದಗ ರೈಲ್ವೇ ಯೋಜನೆಗೆ 41 ಎಕರೆ ಭೂಸ್ವಾಧೀನ

06:38 PM Nov 29, 2019 | Naveen |

ಯಾದಗಿರಿ: ವಾಡಿ-ಗದಗ ರೈಲ್ವೆ ಯೋಜನೆಗಾಗಿ ಜಿಲ್ಲೆಯ ಸುರಪುರ ತಾಲೂಕಿನ ಖಾನಾಪುರ ಎಸ್‌.ಎಚ್‌. ಗ್ರಾಮದಲ್ಲಿ ರೈತರಿಂದ ಒಟ್ಟು 41 ಎಕರೆ 22 ಗುಂಟೆ ಜಮೀನು ಸ್ವಾಧೀನ ಮಾಡಿಕೊಳ್ಳಲಾಗಿದೆ. ಎಕರೆಗೆ 17 ಲಕ್ಷ ರೂ. ಪರಿಹಾರ ವಿತರಿಸಲಾಗುವುದು ಎಂದು ಭೂ-ಬೆಲೆ ನಿರ್ಧರಣಾ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಹೇಳಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ವಾಡಿ-ಗದಗ ರೈಲು ಮಾರ್ಗ ನಿರ್ಮಾಣ ಕಾಮಗಾರಿಗೆ ಸ್ವಾಧೀನಪಡಿಸಿಕೊಂಡ ಜಮೀನು ಮಾಲೀಕರೊಂದಿಗೆ ಗುರುವಾರ ನಡೆದ ಭೂ-ಬೆಲೆ ನಿರ್ಧರಣಾ ಸಲಹಾ ಸಮಿತಿ ಎರಡನೇ ಸುತ್ತಿನ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರೈಲ್ವೆ ಹಾಗೂ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಬಂದಷ್ಟು ಜಿಲ್ಲೆ ಅಭಿವೃದ್ಧಿ ಸಾಧಿಸುತ್ತದೆ. ಜಿಲ್ಲೆಯ ಜನರ ಆರ್ಥಿಕ ಪ್ರಗತಿಗೆ ರೈಲ್ವೆ ಯೋಜನೆ ವರದಾನವಾಗಿದೆ. ಸರಕಾರದ ಭೂಸ್ವಾಧೀನ ಮಾನದಂಡಗಳ ಪ್ರಕಾರ ಈ ರೈಲ್ವೆ ಯೋಜನೆಗಾಗಿ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ನಿಗದಿತ ಬೆಲೆಯಂತೆ ರೈತರ ಬ್ಯಾಂಕ್‌ ಖಾತೆಗೆ ನೇರವಾಗಿ ಮತ್ತು ಶೀಘ್ರವಾಗಿ ಹಣ ವರ್ಗಾವಣೆಯಾಗುತ್ತದೆ ಎಂದು ಹೇಳಿದರು.

ಭೂ-ಬೆಲೆ ನಿರ್ಧರಣಾ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ವಿಶೇಷ ಭೂಸ್ವಾಧೀನಾಧಿಕಾರಿ ಡಾ| ಬಿ. ಶರಣಪ್ಪ ಮಾತನಾಡಿ, ರೈಲ್ವೆ ಯೋಜನೆಗಾಗಿ ಸ್ವಾಧೀನ ಮಾಡಿಕೊಂಡ ಜಮೀನು ಸುತ್ತಲಿನಲ್ಲಿ 50 ಅಡಿ ವರೆಗೆ ಶಾಲೆ, ವಾಣಿಜ್ಯ, ಮನೆ ಅಥವಾ ಇತರೆ ಯಾವುದೇ ರೀತಿಯ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ಇರುವುದಿಲ್ಲ. ಕೃಷಿ ಚಟುವಟಿಕೆ ನಡೆಸಬಹುದು ಎಂದು ಮಾಹಿತಿ ನೀಡಿದರು.

ಖಾನಾಪುರ ಎಸ್‌.ಎಚ್‌. ಗ್ರಾಮದ ರೈತರು ಮಾತನಾಡಿ, ರೈಲ್ವೆ ಯೋಜನೆಗಾಗಿ ಭೂಸ್ವಾಧೀನ ಮಾಡಿಕೊಂಡ ಜಮೀನಿನಲ್ಲಿ ಗುಂಟೆಗಳಷ್ಟು ಉಳಿಯುತ್ತಿದೆ. ಇದರಲ್ಲಿ ಕೃಷಿ ಕಾರ್ಯಕ್ಕೆ ಸಾಧ್ಯವಾಗುವುದಿಲ್ಲ. ಅಲ್ಲದೇ, ಕಟ್ಟಡ ನಿರ್ಮಾಣಕ್ಕೂ ಅವಕಾಶ ಇರುವುದಿಲ್ಲ. ಉಳಿದ ಅಲ್ಪ ಜಮೀನನ್ನೂ ಕೂಡ ಖರೀದಿ ಮಾಡಬೇಕು ಎಂದು ಕೋರಿದರು. ಸಹಾಯಕ ಆಯುಕ್ತ ಶಂಕರಗೌಡ ಎಸ್‌. ಸೋಮನಾಳ, ಕೆಐಎಡಿಬಿ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next