Advertisement

ಸಾಧಕರಿಗೆ ವಿವೇಕಾನಂದರು ಪ್ರೇರಣೆ

12:27 PM Jan 13, 2020 | Naveen |

ಯಾದಗಿರಿ: ಪ್ರತಿಯೊಬ್ಬರಲ್ಲೂ ಸಾಮರ್ಥ್ಯ ಇರುತ್ತದೆ. ನಮ್ಮಲ್ಲಿರುವ ದುರ್ಬಲತೆಯನ್ನು ವಿಶ್ಲೇಷಣೆ ಮಾಡಿಕೊಂಡು ಕ್ರಿಯಾಶೀಲತೆಯಿಂದ ಸಾಮರ್ಥ್ಯ ಪ್ರದರ್ಶಿಸಬೇಕು. ಮನಸ್ಸಿನಲ್ಲಿ ದೃಢ ಸಂಕಲ್ಪ ಮಾಡಿದರೆ ಸಾಧನೆ ಸಾಧ್ಯ ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಹೇಳಿದರು.

Advertisement

ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯ ಆವರಣದಲ್ಲಿ ರವಿವಾರ ಜಿಲ್ಲಾಡಳಿತ, ಕಾಲೇಜು ಶಿಕ್ಷಣ ಇಲಾಖೆ ಬೆಂಗಳೂರು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ 158ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಿಸಿ ಅವರು ಮಾತನಾಡಿದರು.

ಸಾಧಕರಿಗೆ ಸ್ವಾಮಿ ವಿವೇಕಾನಂದರು ಪ್ರೇರಣೆಯಾಗಿದ್ದಾರೆ. ಐಎಎಸ್‌, ಐಪಿಎಸ್‌ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ಅಥವಾ ಇನ್ನಿತರ ಮಹತ್ವದ ಸಾಧನೆ ಮಾಡುವಾಗ ಅವರ ಭಾಷಣ, ಹೇಳಿಕೆಗಳು ಹುಮ್ಮಸ್ಸು ನೀಡುತ್ತವೆ. ವಿವೇಕಾನಂದರ ತತ್ವಗಳನ್ನು ಪಾಲಿಸುತ್ತಾ ಸಾಮಾಜಿಕ ಕಳಕಳಿ, ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಈ ನಿಟ್ಟಿನಲ್ಲಿ ಸ್ವಚ್ಛತೆ ಕಾಪಾಡುವುದು ಅಗತ್ಯವಾಗಿದೆ. ನಿಷೇಧಿತ ಪ್ಲಾಸ್ಟಿಕ್‌ ಬಳಸುವುದಿಲ್ಲ ಎಂಬುದಾಗಿ ಪ್ರತಿಯೊಬ್ಬರೂ ಪ್ರತಿಜ್ಞೆ ಮಾಡಬೇಕಿದೆ. ಸಂಚಾರ ನಿಮಯಗಳನ್ನು ಪಾಲಿಸುವುದು ಯುವಕರ ಕರ್ತವ್ಯ ಮತ್ತು 18 ವರ್ಷ ಪೂರೈಸಿದ ಯುವಕ-ಯುವತಿಯರು ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಈ ಸಂದರ್ಭದಲ್ಲಿ ಸಲಹೆ ನೀಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ್‌ ಭಗವಾನ್‌ ಸೋನಾವಣೆ ಮಾತನಾಡಿ, ಓದಿನಲ್ಲಿ ಉನ್ನತ ಸಾಧನೆ ಮಾಡಲು ಮೊಬೈಲ್‌, ಲ್ಯಾಪ್‌ ಟಾಪ್‌, ಟ್ಯಾಬ್‌ ಸೇರಿದಂತೆ ಸಾಕಷ್ಟು ಸಾಧನಗಳಿವೆ. ಈ ಸಾಧನಗಳನ್ನು ಸದ್ಬಳಕೆ ಮಾಡಿಕೊಂಡರೆ ಅಂದುಕೊಂಡಿರುವುದನ್ನು ಸಾಧಿಸಬಹುದು. ಮನಸ್ಸಿನ ದುರ್ಬಲತೆ ಮೆಟ್ಟಿ ನಿಂತಾಗ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದು ಹೇಳಿದರು.

Advertisement

ಇಂಗ್ಲಿಷ್‌ ಮತ್ತು ಗಣಿತ ಪರೀಕ್ಷೆಗಳನ್ನು ನಕಲು ಮಾಡದೆ ವಿದ್ಯಾರ್ಥಿಗಳು ಉತ್ತೀರ್ಣರಾಗುವುದಿಲ್ಲ ಎಂದು ಕೆಲವರು ಹೇಳುತ್ತಾರೆ. ಇದು ಶುದ್ಧ ಸುಳ್ಳು. ವಿದ್ಯಾರ್ಥಿಗಳಿಗೆ ಓದುವುದೇ ಒಂದು ಕೆಲಸ. ಈ ಸಮಯವನ್ನು ಹಾಳು ಮಾಡಿಕೊಳ್ಳಬಾರದು. ಸತತ ಪ್ರಯತ್ನ ಇದ್ದರೆ ಏನನ್ನಾದರೂ ಕಲಿಯಬಹುದು ಮತ್ತು ಸಾ ಧಿಸಬಹುದು. ಭಾಷೆ ಕಲಿಕೆಗೆ ಸಾಮಾನ್ಯ ಜ್ಞಾನ ಇರಬೇಕು. ನನ್ನದು ಮರಾಠಿ ಮಾತೃ ಭಾಷೆಯಾಗಿದ್ದರೂ ಕರ್ನಾಟಕಕ್ಕೆ ಬಂದ ಮೇಲೆ ಕನ್ನಡವನ್ನು ಓದಲು ಮತ್ತು ಬರೆಯಲು ಕಲಿತಿರುವೆ ಎಂಬುದಾಗಿ ತಿಳಿಸಿದರು.

ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಸಂಚಾಲಕ ಪಿ. ವೇಣುಗೋಪಾಲ ಸ್ವಾಮಿ ವಿಶೇಷ ಉಪನ್ಯಾಸ ನೀಡಿ, ರಾಮಕೃಷ್ಣ ಪರಮಹಂಸ ಗುರುಗಳಿಂದ ಪ್ರಭಾವಿತರಾದ ಸ್ವಾಮಿ ವಿವೇಕಾನಂದರು ದೇಶದ ಉದ್ದಗಲಕ್ಕೂ ಸಂಚರಿಸಿ ಭಾರತವನ್ನು ಸಮಗ್ರ ಅಧ್ಯಯನ ಮಾಡಿದ್ದಾರೆ. ಚೈತನ್ಯ ಯೋಗಿಯಾದ ವಿವೇಕಾನಂದರ ಪುಸ್ತಕ ಓದಿದವರು ಯೋಧರಾಗುತ್ತಾರೆ ಎಂದರು.

ಜಾಗತಿಕ ಯುಗದಲ್ಲಿ ಇಂಗ್ಲಿಷ್‌ ಕಲಿಕೆ ಅಗತ್ಯವಾಗಿದೆ. ಯುವ ಸಮುದಾಯ ವಿದ್ಯಾವಂತರಾಗಿ ವಿವೇಕಾನಂದರ ತತ್ವಾದರ್ಶಗಳನ್ನು ಪಾಲಿಸಿದರೆ ಹಿಂದುಳಿದ ಜಿಲ್ಲೆಯನ್ನು ಮುಂದೆ ತೆಗೆದುಕೊಂಡು ಹೋಗಬಹುದು ಎಂದು ಸಲಹೆ ನೀಡಿದರು. ಲೀಡ್‌ ಕಾಲೇಜು ಪ್ರಾಂಶುಪಾಲ ಡಾ| ಸುಭಾಶ್ಚಂದ್ರ ಕೌಲಗಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತವಾಗಿ ನೀಡಿದ ಲ್ಯಾಪ್‌ಟಾಪ್‌ಗ್ಳನ್ನು ಶೈಕ್ಷಣಿಕ ಪ್ರಗತಿಗೆ ಮಾತ್ರ ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಇದಕ್ಕೂ ಮೊದಲು ಯುವ ಸಬಲೀಕರಣ ಕೇಂದ್ರವನ್ನು ಜಿಲ್ಲಾಧಿಕಾರಿಗಳು ಉದ್ಘಾಟಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಚನ್ನಬಸಪ್ಪ ಕುಳಗೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯರಾದ ಅಯ್ಯಣ್ಣ ಹುಂಡೇಕಾರ್‌, ಸಿ.ಎಂ. ಪಟ್ಟೇದಾರ, ಸ್ನೇಹಾ ರಸಾಳಕರ್‌, ಪ್ರಾಂಶುಪಾಲ ಡಾ| ಅಶೋಕಕುಮಾರ ಮಟ್ಟಿ, ಡಾ| ಶ್ರೀನಿವಾಸರಾವ್‌ ದೊಡ್ಡಮನಿ, ಅಶೋಕ ವಾಟ್ಕರ್‌ ಉಪಸ್ಥಿತರಿದ್ದರು.

ಪ್ರಾಧ್ಯಾಪಕ ಡಾ| ಸರ್ವೋದಯ ಶಿವಪುತ್ರ, ಶರಣಬಸಪ್ಪ ರಾಯಕೋಟಿ, ಡಾ| ದೇವಿಂದ್ರಪ್ಪ ಹಳಿಮನಿ, ಉಮೇಶ ತೇಜಪ್ಪ, ಡಾ| ಬಿ.ಎಸ್‌. ಸಿಂಗೆ, ಡಾ| ಭೀಮರಾಯ ಲಿಂಗೇರಿ, ಚನ್ನಬಸಪ್ಪ
ವೋಡ್ಕರ್‌, ಡಾ| ಜಟ್ಟೆಪ್ಪ, ಗುಂಡುರಾವ್‌, ಡಾ|
ಮೋನಯ್ಯ ಕಲಾಲ್‌, ಈರಮ್ಮ ಭಾವಿಕಟ್ಟಿ, ಶಹನಾಜ್‌ ಬೇಗಂ, ಸಂತೋಷ ಹಾಗೂ ವಿದ್ಯಾರ್ಥಿಗಳ ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಲಿಂಗೇರಿ ಸ್ಟೇಷನ್‌ ಮೊರಾರ್ಜಿ ದೇಸಾಯಿ
ವಸತಿ ಶಾಲೆಯ ಸಂಗೀತ ಶಿಕ್ಷಕ ಚಂದ್ರಶೇಖರ ಗೋಗಿ ಮತ್ತು ತಂಡದವರು ಪ್ರಾರ್ಥನಾ ಗೀತೆ ಹಾಗೂ ನಾಡಗೀತೆ ಹಾಡಿದರು. ಉಪನ್ಯಾಸಕಿ ಡಾ| ಜ್ಯೋತಿಲತಾ ತಡಿಬಿಡಿಮಠ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next