Advertisement

ಮಹರ್ಷಿ ವಾಲ್ಮೀಕಿ ಆದರ್ಶ ಪಾಲಿಸಿ

12:03 PM Oct 14, 2019 | Team Udayavani |

ಯಾದಗಿರಿ: ಆದಿಕವಿ ಮಹರ್ಷಿ ವಾಲ್ಮೀಕಿಯವರು ಒಂದು ಜಾತಿಗೆ ಸೀಮಿತವಲ್ಲ. ಅವರು ಇಡೀ ದೇಶದ ಎಲ್ಲಾ ಜನಾಂಗಕ್ಕೆ ಬೇಕಾದವರು. ವಾಲ್ಮೀಕಿ ಜೀವನ ಪ್ರತಿಯೊಬ್ಬರಿಗೂ ಆದರ್ಶವಾಗಿದೆ ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಹೇಳಿದರು.

Advertisement

ನಗರದ ಮಹರ್ಷಿ ವಾಲ್ಮೀಕಿ ಭವನದಲ್ಲಿ ರವಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಚೀನ ಸಂಸ್ಕೃತಿ ಹೊಂದಿರುವ ನಮ್ಮ ದೇಶದಲ್ಲಿ ಅನೇಕ ಋಷಿಗಳು, ಶರಣರು, ಸಂತರು ಜನಿಸಿದ್ದಾರೆ. ಅವರಲ್ಲಿ ಮಾನವ ಜನಾಂಗಕ್ಕೆ ಮಾರ್ಗದರ್ಶನ ನೀಡುವ ರಾಮಾಯಣ ಮಹಾಕಾವ್ಯ ರಚಿಸಿದ ಆದಿಕವಿ ವಾಲ್ಮೀಕಿ ಪ್ರಮುಖರಾಗಿ ಕಾಣಿಸಿಕೊಳ್ಳುತ್ತಾರೆ. ಈ ಕಾರಣಕ್ಕಾಗಿ ಮಹರ್ಷಿಗಳು ಎಂದು ಕರೆಸಿಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಮಾತನಾಡಿ, ಮಹರ್ಷಿ ವಾಲ್ಮೀಕಿಯವರು ಪರಿಶ್ರಮದ ಮೂಲಕ ಸಾಧನೆ ಮಾಡಿದವರು. ಅವರ ಜೀವನದಲ್ಲಿನ ಸ್ಫೂರ್ತಿದಾಯಕವಾದ ಅಂಶಗಳನ್ನು ತಪ್ಪದೇ ಪಾಲಿಸಬೇಕು ಎಂದು ಹೇಳಿದರು.

ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸೇರಿದಂತೆ ಎಲ್ಲಾ ಸಮುದಾಯದವರಿಗೆ ಸರ್ಕಾರದ ವತಿಯಿಂದ ಅನೇಕ ಯೋಜನೆಗಳಿವೆ. ಅವುಗಳನ್ನು ಉದ್ದೇಶಿತ ಕಾರ್ಯಕ್ಕೆ ಬಳಸಿಕೊಳ್ಳುವ ಮೂಲಕ ಸದುಪಯೋಗ ಮಾಡಿಕೊಳ್ಳಬೇಕು. ವಿದ್ಯಾರ್ಥಿ ವೇತನ, ವಸತಿ ನಿಲಯ ಸೌಲಭ್ಯಗಳನ್ನು ಬಳಸಿಕೊಂಡು ಶೈಕ್ಷಣಿಕವಾಗಿ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.

Advertisement

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್‌ ಸೋನಾವಣೆ ಮಾತನಾಡಿದರು. ಕರ್ನಾಟಕ ರಾಜ್ಯ ಪರಿಶಿಷ್ಟ ವರ್ಗಗಳ ಪತ್ರಕರ್ತರ ಸಂಘದ ಅಧ್ಯಕ್ಷರಾದ ಭೀಮರಾಯ ಹದ್ದಿನಾಳ ಉಪನ್ಯಾಸ ನೀಡಿದರು.

ಮುಖಂಡರಿಗೆ ಸನ್ಮಾನ: ಸಮಾಜಕ್ಕಾಗಿ ಗಣನೀಯ ಸೇವೆ ಸಲ್ಲಿಸಿದ ವಾಲ್ಮೀಕಿ ಸಮಾಜದ ಮುಖಂಡರಾದ ಪರಮಣ್ಣ ವಡಿಕೇರಿ ಕಕ್ಕೇರಾ, ಬಸವರಾಜಪ್ಪ ಕವಲ್ದಾರ ಬಾಚವಾರ, ಬಸವರಾಜಪ್ಪ ಬುಡಯ್ಯನೋರ್‌ ಯಾದಗಿರಿ, ಬಸವರಾಜ ಯಕ್ಷಿಂತಿ ಹಳಿಸಗರ, ಅಯ್ಯಪ್ಪ ನಾಯಕ ಠಾಣಗುಂದಿ ಅವರನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾಯಿತು.

ನಗರಸಭೆ ಪೌರಾಯುಕ್ತ ರಮೇಶ ಎಸ್‌. ಸುಣಗಾರ, ವಾಲ್ಮೀಕಿ ನಾಯಕ ಸಂಘದ ಜಿಲ್ಲಾಧ್ಯಕ್ಷ ಮರೆಪ್ಪ ನಾಯಕ ಮಗದಂಪುರ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅಧಿಕಾರಿಗಳು, ವಾಲ್ಮೀಕಿ ನಾಯಕ ಸಮಾಜದ ಮುಖಂಡರು, ಮಹಿಳೆಯರು, ಯುವಕರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next