Advertisement

ಪ್ರವಾಸೋದ್ಯಮ ಅಭಿವೃದ್ಧಿ ಕುಂಠಿತ

02:41 PM Nov 06, 2019 | Naveen |

„ಅನೀಲ ಬಸೂದೆ

Advertisement

ಯಾದಗಿರಿ: ಜಿಲ್ಲೆಯಲ್ಲಿ ಹಲವಾರು ಪ್ರವಾಸಿ ತಾಣಗಳಿದ್ದರೂ ಅಭಿವೃದ್ಧಿಯಿಂದ ವಂಚಿತವಾಗಿವೆ. ಅಲ್ಲದೇ ಪ್ರವಾಸೋದ್ಯಮ ಅಭಿವೃದ್ಧಿಗೆ ನಿರ್ಲಕ್ಷ್ಯ ಭಾವನೆ ಎದ್ದು ಕಾಣುತ್ತಿದೆ.

ಸಾಕಷ್ಟು ಉದ್ಯೋಗ ಸೃಷ್ಟಿಯಾಗುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರ ಒತ್ತು ನೀಡುತ್ತಿದ್ದರೆ, ಇತ್ತ ಬಿಜೆಪಿ ಸರ್ಕಾರವೇ ಇರುವ ರಾಜ್ಯದ ಮಹಾತ್ವಾಕಾಂಕ್ಷಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ನಿಂತ ನೀರಿನಂತಾಗಿದೆ.

ಜಿಲ್ಲಾ ಕೇಂದ್ರದಲ್ಲಿ ಯಾದಗಿರಿ ಕೋಟೆ, ಗುರುಮಠಕಲ್‌ ಸಮೀಪದ ದಬಧಬಿ ಜಲಪಾತ, ಹತ್ತಿಕುಣಿ ಜಲಾಶಯ, ಚಿಂತನಹಳ್ಳಿ ಗವಿಸಿದ್ದಲಿಂಗೇಶ್ವರ, ಬೋನ್ಹಾಳ ಪಕ್ಷಿಧಾಮ, ರಾಜನಕೌಳೂರು ಬುಡ್ಡರ ಮನೆಗಳು, ವಾಗಣಗೇರಾ ಕೋಟೆ, ಶಿಲ್ಪಕಲೆ ತವರೂರಾದ ಏವೂರು, ಬಸವಸಾಗರ ಜಲಾಶಯ, ಸುರಪುರದ ವೇಣುಗೋಪಾಲಸ್ವಾಮಿ ದೇವಸ್ಥಾನ, ಟೇಲರ್‌ ಮಂಜಿಲ್‌, ಮುದನೂರಿನ ದೇವರ ದಾಸಿಮಯ್ಯ, ತಿಂಥಣಿ ಮೌನೇಶ್ವರ, ಹೊಸಕೇರಾ ಬೇಟೆ ಅರಮನೆ, ಶಹಾಪುರ ಬುದ್ಧ ಮಲಗಿದ ಬೆಟ್ಟ, ವನದುರ್ಗ ಕೋಟೆ, ಮೈಲಾಪುರ ಮೈಲಾರಲಿಂಗೇಶ್ವರ ದೇವಸ್ಥಾನ ಸೇರಿದಂತೆ ಮುಂತಾದ ಪ್ರವಾಸಿ ತಾಣಗಳಿದ್ದರೂ ಅಭಿವೃದ್ಧಿಯಿಂದ ವಂಚಿತವಾಗಿವೆ.

ಮೇಲಾಗಿ ಪ್ರವಾಸೋದ್ಯಮ ಇಲಾಖೆ ಸರ್ಕಾರದ ಕಾರ್ಯದರ್ಶಿಯೇ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿ ಟಿ.ಕೆ. ಅನೀಲಕುಮಾರ ಹಲವು ವರ್ಷಗಳಿಂದ ಇದ್ದರೂ ಪ್ರವಾಸೋದ್ಯಮದ ಅಭಿವೃದ್ಧಿ ಮಾತ್ರ ಆಮೆಗತಿಯಲ್ಲಿದೆ. ಸರ್ಕಾರದ ಕಾರ್ಯದರ್ಶಿಗೇ ಅಭಿವೃದ್ಧಿ ಕಾಳಜಿಯಿಲ್ಲವೇ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಸರ್ಕಾರ, ಆಡಳಿತ ವರ್ಗ ಹಾಗೂ ಜನಪ್ರತಿನಿಧಿ ಗಳ ನಿಷ್ಕಾಳಜಿಯಿಂದ ಅಭಿವೃದ್ಧಿಗಾಗಿ ಬಿಡುಗಡೆಯಾಗಿದ್ದ ಕೋಟ್ಯಂತರ ಅನುದಾನ ಖಜಾನೆಯಲ್ಲಿ ಕೊಳೆಯುವಂತಾಗಿದೆ.

Advertisement

ಜಿಲ್ಲೆಯ ಶಹಾಪುರ ನಗರದ ಸಗರಾದ್ರಿ ಬೆಟ್ಟದಲ್ಲಿ ಹಲವು ಬೆಟ್ಟಗಳನ್ನೊಳಗೊಂಡು ಕಂಡು ಬರುವ ಬುದ್ಧ ಮಲಗಿದ ದೃಶ್ಯ ವಿಶ್ವ ಪ್ರಸಿದ್ಧವಾಗಿದೆ. ಬುದ್ಧ ಮಲಗಿದ ಬೆಟ್ಟದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹಲವಾರು ಯೋಜನೆ ರೂಪಿಸಿದ್ದರೂ ಯಾವುದು ಕೂಡ ಕಾರ್ಯರೂಪಕ್ಕೆ ಬಂದಿಲ್ಲ. 2014ರಲ್ಲಿ ಕಾಂಗ್ರೆಸ್‌ ಸರ್ಕಾರ ಬುದ್ಧ ಮಲಗಿದ ದೃಶ್ಯ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿತ್ತು.

ಆಗಿನ ಪ್ರವಾಸೋದ್ಯಮ ಖಾತೆ ಮಂತ್ರಿ ಬುದ್ಧ ಮಲಗಿದ ದೃಶ್ಯದ ತಾಣವನ್ನು ಸಹ ಇಲಾಖೆ ಸರ್ಕಾರದ ಮಟ್ಟದ ಅ ಧಿಕಾರಿಗಳ ತಂಡದೊಂದಿಗೆ ವೀಕ್ಷಿಸಿದ್ದರು. ಇದೊಂದು ಪ್ರೇಕ್ಷಣಿಯ ಸ್ಥಳವಾಗಿ ರೂಪಗೊಳಿಸುವ ಎಲ್ಲ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು.

ಹತ್ತಾರು ಬಾರಿ ಬುದ್ಧ ಮಲಗಿದ ದೃಶ್ಯದ ತಾಣ ಸಹ ವೀಕ್ಷಿಸಲಾಗಿದೆ. ನಗರದ ಕೆಇಬಿ ಹತ್ತಿರ ಬುದ್ಧನ ದೃಶ್ಯ ವೀಕ್ಷಿಸಲು ಸ್ಥಳ ಪರಿಶೀಲಿಸಲಾಗಿತ್ತು. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಬೇಸರದ ಸಂಗತಿ. 2014-15ರಲ್ಲಿ ಬಿಸಿಲ ನಾಡಿನ ಪ್ರಸಿದ್ಧ ನಜರಾಪುರ ಪಾಲ್ಸ್‌ ಮತ್ತು ಗವಿ ಸಿದ್ಧಲಿಂಗೇಶ್ವರ ಪ್ರವಾಸಿ ತಾಣದ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ 1.97 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಕಾಮಗಾರಿಗೆ ಅನುಮೋದನೆ ದೊರೆತು 5 ವರ್ಷಗತಿಸಿದರೂ ಈವರೆಗೂ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳದಿರುವುದು ಅಧಿಕಾರಿಗಳ ಅಭಿವೃದ್ಧಿ ಪರ ಕಾಳಜಿಗೆ ಕನ್ನಡಿಯಂತಿದೆ.

ಜಿಲ್ಲೆಯ ಗುರುಮಠಕಲ್‌ ತಾಲೂಕು ಕೇಂದ್ರದಿಂದ
4 ಕಿಮೀ ದೂರದಲ್ಲಿರುವ ಪ್ರವಾಸಿ ತಾಣ ನಜರಾಪುರ ದಬಧಬಿ ಜಲಪಾತದ ಸಮಗ್ರ ಅಭಿವೃದ್ಧಿಗೆ ಈ ಹಿಂದೆ ಪ್ರವಾಸೋದ್ಯಮ ಖಾತೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಪ್ರಿಯಾಂಕ್‌ ಖರ್ಗೆ, ಕಾಮಗಾರಿ ಸಂಪೂರ್ಣ ವ್ಯವಸ್ಥಿತ ರೀತಿಯಲ್ಲಿ ನಡೆಯಬೇಕು ಎನ್ನುವ ಕಾರಣದಿಂದ ಜಿಲ್ಲೆಯ 2 ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು.

ಈ ಹಿಂದಿನ ಜಿಲ್ಲಾಧಿಕಾರಿ ಜೆ. ಮಂಜುನಾಥ ಕಾರ್ಯ ಯೋಜನೆ ರೂಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದರು.

ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿ ಹೊಣೆ ವಹಿಸಲಾಗಿತ್ತು. ಯಾವುದೇ ಕಾಮಗಾರಿ ಪ್ರಗತಿಯಲ್ಲಿಲ್ಲ. ದುರದೃಷ್ಟ ಎಂದರೆ 2 ಸರ್ಕಾರಗಳು ಬದಲಾದರೂ ಕಾಮಗಾರಿ ಆರಂಭವಾಗಿಲ್ಲ. ನಜರಾಪುರ ಜಲಪಾತ ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಕಡ್ಡಾಯವಾಗಿ ಅರಣ್ಯ ಇಲಾಖೆ ಅನುಮತಿ ಪಡೆಯಬೇಕು ಎನ್ನಲಾಗಿದ್ದು, ಈ ಕುರಿತು ಪ್ರವಾಸೋದ್ಯಮ ಇಲಾಖೆಯಿಂದ ಪತ್ರ ಬರೆಯಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು,
ಅರಣ್ಯ ಇಲಾಖೆಯಿಂದ ಈವರೆಗೆ ಯಾವುದೇ ಸ್ಪಂದನೆ ಸಿಗದಿರುವುದರಿಂದ ಅಭಿವೃದ್ಧಿ ಕಾಣಬೇಕಿದ್ದ ಜಲಾಶಯ ನಿರ್ಲಕ್ಷಕ್ಕೊಳಪಟ್ಟಿದೆ.

ಜಿಲ್ಲೆಯ ಗುರುಮಠಕಲ್‌ ಹತ್ತಿರದ ನಜರಾಪುರ ಫಾಲ್ಸ್‌ ಅಭಿವೃದ್ಧಿಗೆ ಈ ಹಿಂದೆ ಬಿಡುಗಡೆಯಾಗಿರುವ ಅನುದಾನವೇ ಖರ್ಚಾಗಿ ಅಭಿವೃದ್ಧಿ ಕಂಡಿಲ್ಲ. ಪುನಃ
2018-19ರಲ್ಲಿಯೂ ಸರ್ಕಾರ ಫಾಲ್ಸ್‌ ಅಭಿವೃದ್ದಿಗೆ ಹೆಚ್ಚುವರಿ 50 ಲಕ್ಷ ರೂ. ಅನುದಾನ ಒದಗಿಸಿದ್ದು, ಪ್ರವಾಸೋದ್ಯಮ ಅಭಿವೃದ್ದಿಗೆ ಸಂಬಂಧಿಸಿದ ಕೋಟ್ಯಂತರ ರೂ. ಅನುದಾನ ಖಜಾನೆಯಲ್ಲಿ ಕೊಳೆಯುವಂತಾಗಿದೆ.

ಪ್ರವಾಸೋದ್ಯಮ ಇಲಾಖೆಗೆ ಬಿಡುಗಡೆಯಾದ ಅನುದಾನದಲ್ಲಿ 2014-15ರಿಂದ 2017-18 ನೇ ಸಾಲಿನಲ್ಲಿ ಹೆಚ್ಚಿನ ಕಾಮಗಾರಿಗಳು ಆಮೆಗತಿಯಲ್ಲಿ ಸಾಗಿದ್ದು, 4.75 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೈಗೊಂಡ 17 ಕಾಮಗಾರಿಗಳಲ್ಲಿ ಒಂದು ಕಾಮಗಾರಿಯೂ ಪೂರ್ಣಗೊಂಡಿಲ್ಲ. 2018-19ರಲ್ಲಿ
3 ಕೋಟಿ ರೂ. ಅಂದಾಜು ವೆಚ್ಚದ 3 ಕಾಮಗಾರಿಗಳಲ್ಲಿ ಒಂದು ಕಾಮಗಾರಿಯೂ ಪೂರ್ಣಗೊಂಡಿಲ್ಲ.

ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಬಸವಸಾಗರ ಜಲಾಶಯಕ್ಕೆ 1964ರ ಮೇ 22ರಂದು ಮಾಜಿ
ಪ್ರಧಾನಿ ಲಾಲ ಬಹಾದ್ಧುರ ಶಾಸ್ತ್ರಿ ಕೇಂದ್ರ ಸಚಿವರಿದ್ದ ಸಂದರ್ಭದಲ್ಲಿ ಮೈಸೂರು ರಾಜ್ಯದಲ್ಲಿ ಎಸ್‌ .ನಿಜಲಿಂಗಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಶಂಕು ಸ್ಥಾಪನೆ ಮಾಡಿದ್ದರು. 1982ರ ಸೆ.22ರಂದು ಆರ್‌. ಗುಂಡೂರಾವ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಲೋಕಾರ್ಪಣೆಯಾದ ಜಿಲ್ಲೆಯ ಪ್ರಮುಖ ಜಲಾಶಯ ಅಭಿವೃದ್ಧಿಯಿಂದ ವಂಚಿತವಾಗಿದೆ. 2009ರಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಉದ್ಯಾನವನ ಅಭಿವೃದ್ಧಿಗೆ 1 ಕೋಟಿ ರೂ. ಮಂಜೂರಾಗಿದ್ದು, ಕೆಲವು ಮೂಲಭೂತ ಸೌಕರ್ಯ ಒದಗಿಸಲಾಗಿದೆ. ಆದರೆ  ಸಮರ್ಪಕ ಸೌಕರ್ಯ ಒದಗಿಸಿದರೆ ಪ್ರವಾಸಿಗರನ್ನು ಆಕರ್ಷಿಸುವ ತಾಣವಾಗಲಿದೆ.

ಅಣೆಕಟ್ಟು ಪುನಶ್ಚೇತನ ಕಾಮಗಾರಿ ಯೋಜನೆಯಡಿ
100 ಕೋಟಿ ರೂ. ವೆಚ್ಚದಲ್ಲಿ ಜಲಾಶಯದ ಆಕರ್ಷಣೀಯ ತಾಣವಾಗಿ ಪ್ರವಾಸಿಗರನ್ನು ಸೆಳೆಯಲು ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಲಾಶಯದ ಅಧಿ ಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಕಾಶಿ ಎಂದೇ ಹೆಸರಾದ ಸುಕ್ಷೇತ್ರ ತಿಂಥಣಿ ಮೌನೇಶ್ವರ ದೇವಾಲಯವೂ ಅಭಿವೃದ್ಧಿಯಿಂದ ದೂರ ಉಳಿದಿದೆ. ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ದೇವಸ್ಥಾನ ಒಳಪಟ್ಟರೂ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿದ್ದು, ಪ್ರವಾಸಕ್ಕೆ ಬರುವ ಸಾಕಷ್ಟು ಪ್ರೇಕ್ಷಕರು ಇಲ್ಲಿ ಭೇಟಿ ನೀಡಿ ದರ್ಶನ ಪಡೆಯುತ್ತಾರೆ.

ಇದರ ಅಭಿವೃದ್ಧಿಯಿಂದ ಪ್ರವಾಸೋದ್ಯಮಕ್ಕೆ ಸಾಕಷ್ಟು ಉತ್ತೇಜನೆಯೂ ಸಿಗಲಿದೆ. ಪ್ರತಿವರ್ಷ ಫೆಬ್ರವರಿ ತಿಂಗಳಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತದೆ. 2015-16ನೇ ಸಾಲಿನಲ್ಲಿ ಮೌನೇಶ್ವರ ದೇವಾಲಯಕ್ಕೆ ಸಂಬಂ ಧಿಸಿದ ಸಮರ್ಪಕ ಅಭಿವೃದ್ಧಿ ದೃಷ್ಟಿಯಿಂದ ನಿರ್ಮಿತ ಕೇಂದ್ರಕ್ಕೆ 3.50 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿತ್ತು ಎನ್ನಲಾಗಿದೆ.

ಆದರೆ ಇವರೆಗೂ ನಿರ್ಮಿತ ಕೇಂದ್ರದವರು ಅಭಿವೃದ್ಧಿಗೆ ಮುಂದಾಗದಿರುವುದು ದುರದೃಷ್ಟ ಎನ್ನುತ್ತಾರೆ ಕರ್ನಾಟಕ ಸಂರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಮೌನೇಶ ಆರ್‌.ಬೋಯಿ.

Advertisement

Udayavani is now on Telegram. Click here to join our channel and stay updated with the latest news.

Next