ಯಾದಗಿರಿ: ರಾಜ್ಯದ ಗಡಿ ಜಿಲ್ಲೆ ಯಾದಗಿರಿಯಲ್ಲಿ ತೆಲಂಗಾಣ ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಅಧಿಕೃತ ಚಾಲಕ ಮತ್ತು ನಿರ್ವಾಹಕರಿಲ್ಲದ ಬಸ್ ಸಂಚಾರ ನಡೆಯುತ್ತಿದ್ದು, ಅದರಲ್ಲಿ ಪ್ರಯಾಣಿಕರಿಂದ ಹಣ ಪಡೆಯಲಾಗುತ್ತಿದೆ ವಿನಃ ಟಿಕೆಟ್ ಮಾತ್ರ ನೀಡಲಾಗುತ್ತಿಲ್ಲ.
Advertisement
ನೆರೆಯ ತೆಲಂಗಾಣದ ಸಾರಿಗೆ ಸಂಸ್ಥೆಯ ಚಾಲಕರು ಮತ್ತು ನಿರ್ವಾಹಕರು ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಒಂದು ವಾರದಿಂದ ಸೇವೆಗೆ ಗೈರಾಗಿ ಪ್ರತಿಭಟನೆಯಲ್ಲಿ ತೊಡಗಿದ್ದು, ತೆಲಂಗಾಣ ಸರ್ಕಾರ ಪ್ರಯಾಣಿಕರಿಗೆ ತೊಂದರೆಯಾಗಬಾರದೆಂದು ಕಳೆದೆರಡು ದಿನಗಳಿಂದ ಖಾಸಗಿ ವ್ಯಕ್ತಿಗಳನ್ನು ನೇಮಿಸಿಕೊಂಡು ಯಥಾವತ್ತಾಗಿ ಸಾರಿಗೆ ಸೇವೆ ಆರಂಭಿಸಿದೆ. ಅಲ್ಲಿಯ ವಾಹನಗಳು ನಮ್ಮ ರಾಜ್ಯದ ಬಸ್ ನಿಲ್ದಾಣದಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಸಂಚರಿಸುತ್ತಿವೆ. ಬಸ್‌ನಲ್ಲಿ ಹಣ ಪಡೆಯಲಾಗುತ್ತದೆ ಹೊರತು ಟಿಕೆಟ್ ನೀಡಲಾಗುತ್ತಿಲ್ಲ.
ಚಾಲಕ, ನಿರ್ವಾಹಕರು ಇಲ್ಲದೇ ಇರುವ ಬಸ್‌ಗಳು ನಮ್ಮ ರಾಜ್ಯಕ್ಕೆ ಪ್ರವೇಶಿಸಿ ಇಲ್ಲಿನ ಪ್ರಯಾಣಿಕರನ್ನು ಹತ್ತಿಸಿಕೊಂಡು ಸಂಚರಿಸುವುದು ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ಉದ್ಭವವಾಗಿದೆ.