ಯಾದಗಿರಿ: ಮಹಾಮಾರಿ ಕೋವಿಡ್ ಆತಂಕದ ಮಧ್ಯೆಯೂ ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಮೊದಲ ದಿನ ಗುರುವಾರ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಿತು.
ವಿದ್ಯಾರ್ಥಿಗಳು ನಿರಾತಂಕ ಪರೀಕ್ಷೆ ಬರೆದರು. ಒಟ್ಟು 1,059 ವಿದ್ಯಾರ್ಥಿಗಳು ಗೈರಾಗಿದ್ದರು. ಗುರುವಾರ ನಡೆದ ದ್ವಿತೀಯ ಭಾಷೆ ಪರೀಕ್ಷೆಗೆ ಜಿಲ್ಲೆಯ 15,676 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಒಟ್ಟು 14617 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಇದರಲ್ಲಿ ಜಿಲ್ಲೆಯ ಕಂಟೈನ್ಮೆಂಟ್ ಝೋನ್‌ಗಳ 353 ವಿದ್ಯಾರ್ಥಿಗಳು ಸೇರಿದ್ದಾರೆ. ಇವರಲ್ಲಿ ಮೊದಲ ಬಾರಿಗೆ ಪರೀಕ್ಷೆ ಬರೆಯುವ 13,062 ವಿದ್ಯಾರ್ಥಿಗಳಲ್ಲಿ 12381 ವಿದ್ಯಾರ್ಥಿಗಳು ಹಾಜರಾಗಿದ್ದು 681 ಮಕ್ಕಳು ಗೈರಾಗಿದ್ದರು. ಇನ್ನು ಮೊದಲ ಬಾರಿಗೆ ಪರೀಕ್ಷೆ ಬರೆಯುವ 693 ಖಾಸಗಿ ವಿದ್ಯಾರ್ಥಿಗಳಲ್ಲಿ 524 ಜನ ಹಾಜರಿದ್ದರೆ, 169 ಮಕ್ಕಳು ಪರೀಕ್ಷೆಗೆ ಬರಲಿಲ್ಲ.
ಇತರೆ ಜಿಲ್ಲೆಯ 455 ವಿದ್ಯಾರ್ಥಿಗಳಲ್ಲಿ 445 ಮಕ್ಕಳು ಹಾಜರಿದ್ದರು. 10 ಮಕ್ಕಳು ಗೈರಾಗಿದ್ದರು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ. ಜಿಲ್ಲೆಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಒಂದೂವರೆ ತಾಸು ಮುಂಚಿತವಾಗಿ ಆಗಮಿಸಿದ್ದರು. ಸಾಮಾಜಿಕ ಅಂತರ ಕಾಪಾಡುವ ಮೂಲಕ ಪ್ರತಿಯೊಬ್ಬರ ಕೈಗೆ ಸ್ಯಾನಿಟೈಜ್ ಮಾಡಿ, ಮಾಸ್ಕ್ ವಿತರಿಸಿ, ಥರ್ಮಲ್ ಸ್ಕ್ರೀನಿಂಗ್ ನಡೆಸಿ ಕೇಂದ್ರದೊಳಗೆ ಕಳಿಸುವ ದೃಶ್ಯ ಸಾಮಾನ್ಯವಾಗಿತ್ತು. ಪರೀಕ್ಷಾ ಕೇಂದ್ರಗಳಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ವಿಶೇಷವಾಗಿ ಪರೀಕ್ಷೆ ಬರೆಯುವ ಮಕ್ಕಳಿಗಾಗಿ ಒಪ್ಪಂದದ ಮೇರೆಗೆ 50 ಸಾರಿಗೆ ಸಂಸ್ಥೆ ಬಸ್ ಹಾಗೂ 34 ಶಾಲಾ ವಾಹನಗಳನ್ನು ಬಳಸಿಕೊಳ್ಳಲಾಗಿದೆ. ಜಿಲ್ಲಾ ಕೇಂದ್ರದಲ್ಲಿ ವಿಶೇಷವಾಗಿ ಮಹಾತ್ಮ ಗಾಂಧಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಸ್ಯಾನಿಟೈಜೇಶನ್ ಟನಲ್ ನಿರ್ಮಿಸಿ ಸುರಕ್ಷತೆಗೆ ಆದ್ಯತೆ ನೀಡಲಾಗಿತ್ತು. ಉಳಿದಂತೆ ಈ ಬಾರಿ ಪರೀಕ್ಷಾ ಕೇಂದ್ರದೊಳಗೆ ಪಾಲಕರು ಆಗಮಿಸಲು ಅವಕಾಶ ನೀಡದೇ ಪರೀಕ್ಷೆ ಬರೆಯುವ ಮಕ್ಕಳು ಮಾತ್ರ ಪ್ರವೇಶಿಸಿ ತಮ್ಮ ನೋಂದಣಿ ಸಂಖ್ಯೆಯನ್ನು ಪರಿಶೀಲಿಸಿ ಕೇಂದ್ರಗಳಿಗೆ ತೆರಳಿದರು.
ಡಿಸಿ-ಸಿಇಒ ಭೇಟಿ: ಪರೀಕ್ಷೆಯ ಮೊದಲ ದಿನ ಗುರುವಾರ ಜಿಲ್ಲಾ ಧಿಕಾರಿ ಎಂ.ಕೂರ್ಮಾರಾವ್ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಯಾದಗರಿ ನಗರದ ಮಹಾತ್ಮ ಗಾಂ ಧಿ ಶಾಲೆ, ಚಿರಂಜೀವಿ ಪ್ರೌಢಶಾಲೆ, ಜವಾಹರ ಶಾಲೆ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ ಅವರು, ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಲು ಮತ್ತು ಕೋವಿಡ್19 ಸಂಬಂಧ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸ್ ಮಾಡಬೇಕು. ಮಾಸ್ಕ್ ವಿತರಿಸಬೇಕು. ಜ್ವರ, ಕೆಮ್ಮು, ನೆಗಡಿಯಂತಹ ಲಕ್ಷಣಗಳಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಗಳಲ್ಲಿ ಕೂಡಿಸಿ ಪರೀಕ್ಷೆ ಬರೆಯಿಸಲು ಸೂಚನೆ ನೀಡಿದರು.
ಜಿಪಂ ಸಿಇಒ ಶಿಲ್ಪಾ ಶರ್ಮಾ ವಿವಿಧ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಯಾದಗಿರಿ ನಗರದ ಕನ್ಯಾ ಪ್ರೌಢಶಾಲೆ, ಖಾನಾಪುರ ಸರ್ಕಾರಿ ಪ್ರೌಢಶಾಲೆ, ಹತ್ತಿಗುಡೂರು ಸರ್ಕಾರಿ ಪ್ರೌಢಶಾಲೆಗಳ ಪರೀಕ್ಷಾ ಕೇಂದ್ರಗಳಿಗೆ ಭೇಟಿ ಪರಿಶೀಲಿಸಿ ಮಾಹಿತಿ ಪಡೆದರು.