ಯಾದಗಿರಿ: ಜೂ.25ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿವೆ. ಈ ಹಿನ್ನೆಲೆಯ್ಲಲಿ ಜೂ.15ರೊಳಗೆ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಸ್ ಮಾಡಬೇಕು. ಖುರ್ಚಿ, ಟೇಬಲ್, ಶೌಚಾಲಯ ಸೇರಿ ಶಾಲೆಯಲ್ಲಿನ ಎಲ್ಲ ವಸ್ತುಗಳನ್ನು ಶುಚಿಗೊಳಿಸಬೇಕು. ಮಕ್ಕಳಿಗೆ ಮಾಸ್ಕ್ ವಿತರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಬಿ.ಚವ್ಹಾಣ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಕೋವಿಡ್-19 ಕುರಿತು ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು. ಸರ್ಕಾರ ಲಾಕ್‌ಡೌನ್ ಸಡಿಲಿಕೆ ಮಾಡಿದೆ. ಪ್ರತಿಯೊಬ್ಬರೂ ಸಾಮಾಜಿಕ ಅಂತರ ಪಾಲಿಸಬೇಕು. ಹೊರಗೆ ಸಂಚರಿಸುವಾಗ ಮಾಸ್ಕ್ ಧರಿಸಬೇಕು. ಸೋಂಕು ತಡೆಗೆ ಮುಂಜಾಗ್ರತೆ ವಹಿಸುವ ಮೂಲಕ ಸೋಂಕು ತಡೆಗೆ ಸಹಕರಿಸಬೇಕೆಂದು ಕೋರಿದರು. ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಲ್ಲಿನ ವಲಸೆ ಕಾರ್ಮಿಕರಿಗೆ ಸರಿಯಾದ ಸಮಯಕ್ಕೆ ಊಟ ಕೊಡಬೇಕು. ಕುಡಿಯುವ ನೀರು, ವಿದ್ಯುತ್, ಶೌಚಾಲಯ ಸೇರಿದಂತೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದರು.
ಲಾಕ್‌ಡೌನ್‌ನಿಂದ ನಷ್ಟಕ್ಕೀಡಾದ ಹೂವು, ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಪರಿಹಾರ ನೀಡುವುದಾಗಿ ಸಿಎಂ ಘೋಷಿಸಿದ್ದಾರೆ. ಅರ್ಜಿ ಸಲ್ಲಿಕೆ ಅವಧಿ ಮುಗಿದಿದ್ದರೆ ವಿಸ್ತರಣೆ ಮಾಡುವಂತೆ ತೋಟಗಾರಿಕೆ ಉಪನಿರ್ದೇಶಕರಿಗೆ ಸೂಚಿಸಿದರು. ಮಡಿವಾಳರು, ಕ್ಷೌರಿಕರು, ಆಟೊ, ಟ್ಯಾಕ್ಸಿ ಚಾಲಕರಿಗೆ ಸರ್ಕಾರ ಒಂದು ಬಾರಿಯಾಗಿ 5 ಸಾವಿರ ರೂ. ಪರಿಹಾರ ಘೋಷಿಸಿದೆ. ಅರ್ಹ ಫಲಾನುಭವಿಗಳಿಗೆ ಪರಿಹಾರ ತಲುಪಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹೆಚ್ಚಿನ ಪ್ರಚಾರ ನೀಡಬೇಕು. ರಾಜ್ಯ ಸರ್ಕಾರ ಅಸಂಘಟಿತ ವಲಯದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಘೋಷಿಸಿರುವ 5 ಸಾವಿರ ರೂ. ಪರಿಹಾರ ಧನವನ್ನು ಬಾಕಿ 11 ಸಾವಿರ ಜನರಿಗೆ ಜೂನ್ ಅಂತ್ಯದೊಳಗೆ ತಲುಪಿಸಬೇಕು ಎಂದು ತಾಕೀತು ಮಾಡಿದರು.
ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಮಾತನಾಡಿ, ಅನ ಧಿಕೃತ ಹತ್ತಿ ಬೀಜ ಮಾರಾಟದ ವಿರುದ್ಧ ಕ್ರಮ ಅಗತ್ಯವಾಗಿದೆ. ಜೆಸ್ಕಾಂ ಲೈನ್‌ಮೆನ್ ಗಳು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಜೆಸ್ಕಾಂ ಇಂಜಿನಿಯರ್‌ಗಳು ಕ್ರಮ ಕೈಗೊಳ್ಳಬೇಕು ಎಂದರು. ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಮಾತನಾಡಿ, ಜಿಲ್ಲೆಯಲ್ಲಿ ಹತ್ತಿ ಖರೀದಿ ಪ್ರಮಾಣ ಹೆಚ್ಚಿಸಬೇಕು ಎಂದರು.
ಡಿಸಿ ಎಂ.ಕೂರ್ಮಾರಾವ್ ಮಾತನಾಡಿ, ಎಲ್ಲಾ ಸೌಕರ್ಯ ಹೊಂದಿರುವ ಹಾಸ್ಟೇಲ್‌ಗಳನ್ನೇ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳನ್ನಾಗಿ ಮಾಡಲಾಗಿದೆ. ಅಲ್ಲಿನ ಸಿಬ್ಬಂದಿ ಸೇವಿಸುತ್ತಿರುವ ಆಹಾರವನ್ನೇ ವಲಸೆ ಕಾರ್ಮಿಕರಿಗೆ ನೀಡಲಾಗುತ್ತಿದೆ. ಸರ್ಕಾರ ಸಾಂಸ್ಥಿಕ ಕ್ವಾರಂಟೈನ್ ಅವಧಿಯನ್ನು 14 ದಿನಗಳಿಂದ 7 ದಿನಗಳಿಗೆ ನಿಗದಿ ಮಾಡಿದೆ. ಶಾಸಕರ ಸಲಹೆ ಮೇರೆಗೆ ವಲಸೆ ಕಾರ್ಮಿಕರನ್ನು 14 ದಿನಗಳವರೆಗೆ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಪಂ ಸಿಇಒ ಶಿಲ್ಪಾ ಶರ್ಮಾ, ಎಸ್ಪಿ ಋಷಿಕೇಶ ಸೋನವಣೆ ಮಾತನಾಡಿದರು. ಇದೇ ವೇಳೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಪ್ರಗತಿ ಪರಿಶೀಲನೆ ಮಾಡಿದರು. ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.