Advertisement

ಅಪಾರ ಭಕ್ತರ ಕಂಡು ಸಂತೋಷ

12:05 PM Mar 01, 2020 | Naveen |

ಯಾದಗಿರಿ: ಅಬ್ಬೆತುಮಕೂರು ಜಾತ್ರೆಯಲ್ಲಿ ನೆರೆದ ಜನಸ್ತೋಮ ನೋಡಿದರೆ ಇದು ಭಕ್ತರ ಸುನಾಮಿಯಾಗಿದೆ ಎಂದರೆ ತಪ್ಪಾಗದು ಎಂದು ಬಾಲೇ ಹೊಸೂರಿನ ದಿಂಗಾಲೇಶ್ವರ ಮಠದ ಪೀಠಾಧಿಪತಿ ದಿಂಗಾಲೇಶ್ವರ ಸ್ವಾಮೀಜಿ ನುಡಿದರು.

Advertisement

ತಾಲೂಕಿನ ಅಬ್ಬೆತುಮಕೂರ ಗ್ರಾಮದಲ್ಲಿ ಶ್ರೀ ವಿಶ್ವಾರಾಧ್ಯರ ಜಾತ್ರಾ ಮಹೋತ್ಸವ ನಿಮಿತ್ತ ಆಯೋಜಿಸಿದ್ದ ಮಾನವ ಧರ್ಮ ಸಮಾವೇಶದಲ್ಲಿ ಅವರು ಮಾತನಾಡಿದರು. ಈ ಭಾಗದ ಸಿದ್ಧಿ ಪುರುಷ ಶ್ರೀ ವಿಶ್ವಾರಾಧ್ಯರ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ರಥೋತ್ಸವದಲ್ಲಿ ಭಾಗವಹಿಸಲು ಭಕ್ತ ಸಮೂಹ ತಂಡೋಪ ತಂಡವಾಗಿ ಬಂದು ಲಕ್ಷಾಂತರ ಸಂಖ್ಯೆಯಲ್ಲಿ ಸೇರಿರುವುದು ನೋಡಿ ನನಗೆ ಅತೀವ ಸಂತೋಷವಾಗಿದೆ ಎಂದರು.

ಪ್ರಪಂಚದಲ್ಲಿ ಏಳು ಅದ್ಭುತಗಳಿವೆ ಎಂದು ಹೇಳುತ್ತಾರೆ. ಆ ಏಳು ಅದ್ಭುತಗಳನ್ನು ಹೇಳಿದವರು ಅಬ್ಬೆತುಮಕೂರು ಜಾತ್ರೆ ನೋಡಿದ್ದರೆ ಇದು 8ನೇ ಅದ್ಭುತವೆಂದು ಹೇಳುತ್ತಿದ್ದರು ಎಂದು ಬಣ್ಣಿಸಿದರು. ಮಾನವ ಧರ್ಮ ಸಮಾವೇಶ ಅರ್ಥಪೂರ್ಣವಾಗಿದೆ. ಹಾಗೆ ವಿಶ್ವಾರಾಧ್ಯರ ಸನ್ನಿ ಧಿಗೆ ಯಾರು ಭಕ್ತಿಯಿಂದ ನಡೆದುಕೊಳ್ಳುತ್ತಾರೋ ಅವರು ಬೇಡಿದ್ದನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಅಂತಹ ಮಹಿಮಾ ಪುರುಷನ ಜಾತ್ರೆಯಲ್ಲಿ ಪಾಲ್ಗೊಂಡ ನೀವು ಪುಣ್ಯವಂತರು ಎಂದರು.

ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ, ಅಬ್ಬೆತುಮಕೂರು ಜಾತ್ರೆಯಲ್ಲಿ ನೆರೆದ ಭಕ್ತರ ಮಧ್ಯೆ ಒಂದು ಭಾವನಾತ್ಮಕ ಸಂಬಂಧವಿದೆ ಎಂದು ತಿಳಿಸಿದರು.

ಡಾ| ಗಂಗಾಧರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ವಿಶ್ವಾರಾಧ್ಯರು ದೇಹಧಾರಿಗಳಾಗಿದ್ದಾಗ ಅನೇಕ ಪವಾಡಗಳನ್ನು ಮಾಡಿ ಮಹಾಪುರುಷ ಎನಿಸಿಕೊಂಡಿದ್ದಾರೆ. ಅಂತಹ ಮಹಾತ್ಮ ಇಂದಿಗೂ ಚೇತನ ಸ್ವರೂಪಿಯಾಗಿ ಇಲ್ಲಿ ನೆರೆದಿರುವ ಲಕ್ಷಾಂತರ ಭಕ್ತರಿಗೆ ಇಷ್ಟಾರ್ಥಗಳನ್ನು ನೆರವೇರಿಸುವ ಕಾಮಧೇನು ಕಲ್ಪವೃಕ್ಷ ಆಗಿದ್ದಾರೆ ಎಂದರು.

Advertisement

ಅಬ್ಬೆತುಮಕೂರಿನ ಮಾಲಿ ಸಕ್ರೆಪ್ಪಗೌಡನ ಭಕ್ತಿ ಭಾವಕ್ಕೆ ಒಲಿದು ವಿಶ್ವಾರಾಧ್ಯರು ಇಲ್ಲಿ ಬಂದು ನೆಲೆ ನಿಲ್ಲುತ್ತಾರೆ. ಸಕ್ರೆಪ್ಪಗೌಡ ಸಿರಿವಂತಿಕೆ ತೊರೆದು ಭಕ್ತಿಯಿಂದ ಗುರುವಿನಲ್ಲಿ ಒಂದಾಗುತ್ತಾನೆ. ಶಿಷ್ಯನ ಭಕ್ತಿಗೊಲಿದ ವಿಶ್ವಾರಾಧ್ಯರು ನೆಲೆನಿಂತ ಈ ಕ್ಷೇತ್ರ ಇಂದು ಅವಿಮುಕ್ತ ಕ್ಷೇತ್ರವಾಗಿದೆ ಎಂದರು.

ಶ್ರೀ ಕಡಗಂಚಿಯ ವೀರಭದ್ರ ಸ್ವಾಮೀಜಿ, ನಿಲೋಗಲ್‌ನ ಪಂಚಾಕ್ಷರಿ ಸ್ವಾಮೀಜಿ, ಪಾಳಾದ ಗುರುಮೂರ್ತಿ ಸ್ವಾಮೀಜಿ, ದೋರನಹಳ್ಳಿಯ ಶಿವಲಿಂಗ ರಾಜೇಂದ್ರ ಸ್ವಾಮೀಜಿ, ಶಹಾಪುರದ ಗುರುಪಾದ ಸ್ವಾಮೀಜಿ, ಮುರುಘೇಂದ್ರ ಸ್ವಾಮೀಜಿ, ಸೇಡಂನ ಸದಾಶಿವ ಸ್ವಾಮೀಜಿ, ಕಾಳಹಸ್ತೇಂದ್ರ ಸ್ವಾಮೀಜಿ, ಹುಕ್ಕೇರಿಯ ಚಂದ್ರಶೇಖರ ಸ್ವಾಮೀಜಿ, ದೇವಾಪುರದ ಶಿವಮೂರ್ತಿ ಸ್ವಾಮೀಜಿ, ಗಬ್ಬೂರಿನ ಬೂದಿ ಬಸವ ಸ್ವಾಮೀಜಿ, ದೇವದುರ್ಗದ ಕಪಿಲ ಸಿದ್ದರಾಮ ಸ್ವಾಮೀಜಿ, ಹಲಕರ್ಟಿಯ ಮುನೀಂದ್ರ ಸ್ವಾಮೀಜಿ, ಶಹಾಪುರದ ಬಸವಯ್ಯ ಶರಣರು ಸೇರಿದಂತೆ ಇತರರಿದ್ದರು. ನಾಗರೆಡ್ಡಿ ಪಾಟೀಲ ಸ್ವಾಗತಿಸಿದರು. ಡಾ| ಸುಭಾಶ್ಚಂದ್ರ ಕೌಲಗಿ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next