ಯಾದಗಿರಿ: ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಬರುವುದರಿಂದ ಗೋಚರಿಸಿದ ಗ್ರಹಣವನ್ನು ಜಿಲ್ಲಾದ್ಯಂತ ಸಾರ್ವಜನಿಕರು ವೀಕ್ಷಿಸಿ ಕಣ್ತುಂಬಿಸಿಕೊಂಡರು. ಒಬ್ಬ ಮಗನಿರುವ ತಾಯಿ, ಯಕ್ಕಿ ಗಿಡಕ್ಕೆ ಪೂಜೆ ಸಲ್ಲಿಸುವುದರಿಂದ ಗ್ರಹಣದ ಪರಿಣಾಮ ಬೀರಲ್ಲ ಎಂಬ ಮಾತು ಎಲ್ಲೆಡೆ ಹರಡಿದ್ದರಿಂದ ಕೆಲವು ಕಡೆ ಅವರ ನಂಬಿಕೆಗನುಗುಣವಾಗಿ ಪೂಜೆ ಸಲ್ಲಿಸಿದ್ದು ಕಂಡು ಬಂದಿತು.
ಜಿಲ್ಲೆಯ ನಾಯ್ಕಲ್ ಮತ್ತು ಹೆಡಗಿಮುದ್ರಾ ಗ್ರಾಮಗಳಲ್ಲಿ ಒಬ್ಬ ಮಗ ಇರುವ ಮಹಿಳೆಯರು ಬೆಳಗ್ಗೆ ಸೂರ್ಯ ಗ್ರಹಣ ಆರಂಭವಾಗುವ ಮುಂಚೆಯೇ ಯಕ್ಕಿ ಗಿಡಗಳಿಗೆ ಪೂಜೆ ಸಲ್ಲಿಸಿದರು. ಗ್ರಹಣದ ಯಾವುದೇ ದೋಷಗಳು ಮಗನ ಮೇಲೆ ಪ್ರಭಾವ ಬೀಳದಂತೆ ತಾಯಂದಿರು ಭಗವಂತನಲ್ಲಿ ಪ್ರಾರ್ಥನೆ ಮಾಡಿದರು.
ಗುರುವಾರ ಬೆಳಗ್ಗೆ 8:04 ನಿಮಿಷಕ್ಕೆ ಆರಂಭವಾದ ಗ್ರಹಣ ಯಾದಗಿರಿಯಲ್ಲಿ ಮೋಡ ಕವಿದ ವಾತಾವರಣವಿದ್ದ ಕಾರಣ ವೀಕ್ಷಿಸಲು ಅಡೆತಡೆಯಾಗಿತು. 8:30ರ ವರೆಗೆ ಗ್ರಹಣ ವೀಕ್ಷಣೆ ಸಾಧ್ಯವಾಗಲಿಲ್ಲ. 8:45ರ ವೇಳೆ ಗ್ರಹಣ ಕೆಲವೇ ಸೆಕೆಂಡ್ ಗಳ ವೀಕ್ಷಣೆಗೆ ಅನುಕೂಲವಾಯಿತು. ಬಳಿಕ 9:24ರ ವೇಳೆ ಸೂರ್ಯನ ಮೇಲೆ ಚಂದ್ರ ಚಲಿಸುವುದು ನಿಖರವಾಗಿ ಕಂಡು ಬಂತು.
ಯಾದಗಿರಿ ನಗರದ ಅಂಬೇಡ್ಕರ್ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಹಿಂದಿನಿಂದಲೂ ಗ್ರಹಣ ಸಮಯ ಖಚಿತ ಪಡಿಸಿಕೊಳ್ಳಲು ತಟ್ಟೆಯಲ್ಲಿ ನೀರು ಹಾಕಿ ಒನಕೆ ಅದರಲ್ಲಿ ನಿಂತಷ್ಟು ಸಮಯ ಗ್ರಹಣ ಕಾಲ ಇರುತ್ತದೆ. ಒನಕೆ ತಾನಾಗಿಯೇ ಬಿದ್ದರೆ ಗ್ರಹಣ ಮೋಕ್ಷವಾದಂತೆ ಎನ್ನುವ ಸೂತ್ರದ ಆಧಾರದಲ್ಲಿ ಗ್ರಾಮೀಣರು ಗ್ರಹಣ ಕಾಲವನ್ನು ಅರಿತರು.
ಜಿಲ್ಲಾಡಳಿತ ಭವನದ ಆವರಣದಲ್ಲಿ ಕಲಬುರಗಿ ಜಿಲ್ಲಾ ವಿಜ್ಞಾನ ಕೇಂದ್ರದ ಸಂಚಾರಿ ವಿಜ್ಞಾನ ಪ್ರದರ್ಶನದ ತಂಡದವರು ಸೂರ್ಯ ಗ್ರಹಣ ಇರುವುದರಿಂದ ವಿಜ್ಞಾನ ಕೇಂದ್ರದ ಸಾಯಬಣ್ಣ ಬೊಸಗಿ, ನಾಗೇಶ್ ಪಾಟೀಲ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ಗದುಗಯ್ಯ ಹಿರೇಮಠ ಸಾರ್ವಜನಿಕರ ವೀಕ್ಷಣೆಗೆ ಅನುಕೂಲ ಮಾಡಿದ್ದರು. ಸುಮಾರು 100ಕ್ಕೂ ಹೆಚ್ಚು ಜನರು ಸೋಲಾರ್ ಸುರಕ್ಷತಾ ವಿಧಾನ ಹಾಗೂ ಟೆಲಿಸ್ಕೋಪ್ ಮೂಲಕ ಸುರಕ್ಷತವಾಗಿ ಗ್ರಹಣವನ್ನು ವೀಕ್ಷಿಸಿದರು.