ಯಾದಗಿರಿ: ವಚನಗಳಲ್ಲಿ ಅಗಾಧ ಶಕ್ತಿ ಅಡಗಿದ್ದು, ಸಮಾಜ ಸುಧಾರಣೆ ನಿಟ್ಟಿನಲ್ಲಿ ಜಗತ್ತಿನ ಎಲ್ಲಾ ಕ್ರಾಂತಿಗಳಿಗಿಂತ ವಚನ ಕ್ರಾಂತಿಯೇ ಶ್ರೇಷ್ಠವೆಂದು ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ ಹೇಳಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಡಾ| ಪ್ರದೀಪ ಕುಮಾರ ಹೆಬ್ರಿ ರಚಿತ ಶರಣ ಶ್ರೇಷ್ಠರು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಚನ ಸಾಹಿತ್ಯ ಕನ್ನಡ ಸಾಹಿತ್ಯದ ತಾಯಿ ಬೇರು, ಶರಣರು ರಚಿಸಿದ ವಚನಗಳು ಸರಳವಾಗಿ ಜನ ಸಾಮಾನ್ಯರಿಗೆ ಅರ್ಥವಾಗುತ್ತಿದ್ದವು ಎಂದರು. ನಾಡಿನಲ್ಲಿ ಹಲವು ವಚನಕಾರರನ್ನು ಗಮನಿಸಿದರೆ ಅವರು ಕೇವಲ ಬೋಧನೆ ಮಾಡಲಿಲ್ಲ. ನುಡಿದಂತೆ ನಡೆದು ಸಮಾಜಕ್ಕೆ ಆದರ್ಶವಾಗಿದ್ದಾರೆ. ಪ್ರಸ್ತುತ ದಿನಗಳಲ್ಲಿ ಮಠಗಳು, ಧರ್ಮದ ಮಾರ್ಗದಲ್ಲಿ ಸಾಗುವಂತೆ ಮಾರ್ಗದರ್ಶನ ನೀಡುವ ಅಗತ್ಯವಿದೆ ಎಂದರು.
ಶಾಸಕ ನಾಗನಗೌಡ ಕಂದಕೂರ ಮಾತನಾಡಿ, ಆಧುನಿಕ ತಂತ್ರಜ್ಞಾನ ಯುಗದಲ್ಲಿಯೂ ಪುಸ್ತಕಗಳು ಓದುಗರ ಅಪಾರವಾಗಿರುವುದು ಹೆಮ್ಮೆಯ ವಿಷಯ. ಸಾಹಿತಿಗಳು ರಚಿಸಿದ ಕೃತಿ, ಪುಸ್ತಕಗಳನ್ನು ಖರೀದಿಸಿ ಓದುವುದರಿಂದ ಅವರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು. ಪ್ರಸ್ತುತ ಯುವ ಪೀಳಿಗೆಗೆ ಶರಣರ ವಚನಗಳ ಕುರಿತು ಅರಿವು ಮೂಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟ ಅವರು, ತಮ್ಮ ಅನುಭವಗಳಲ್ಲಿ ಪುಸ್ತಕಗಳಲ್ಲಿ ದಾಖಲಿಸಿದ ಶರಣರು ಉತ್ತಮ ವಿಚಾರಗಳನ್ನು ಪಸರಿಸಿದ್ದು, ಆ ವಿಚಾರಗಳು ಎಂದೆಂದಿಗೂ ಪ್ರಸ್ತುತ ಎಂದರು.
ಸಾಹಿತಿ ಡಾ| ಪ್ರದೀಪ ಹೆಬ್ರಿ ಮಾತನಾಡಿ, ವಚನಗಳಲ್ಲಿ ಮಾನವೀಯ ಮೌಲ್ಯಗಳು ಅಡಗಿದ್ದು, ಪ್ರತಿಯೊಂದು ಶಾಲೆ, ಗ್ರಾಮ ಪಂಚಾಯಿತಿಗಳಲ್ಲಿ ವಚನ ಕೃತಿಗಳನ್ನಿಡಬೇಕು. ಶರಣ ಸಂಸ್ಕೃತಿ ಶ್ರೇಷ್ಠ ಸಂಸ್ಕೃತಿಯಾಗಿದೆ ಎಂದರು.
ಖಾಸಾ ಮಠದ ಪೂಜ್ಯ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನೇರಡಗುಂಬಾ ಪೂಜ್ಯ ಪಂಚಮಸಿದ್ದಲಿಂಗ ಮಹಾಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಪ್ಪ ಎಸ್. ಹೊಟ್ಟಿ, ಲಿಂಗಣ್ಣ ಪಡಶೆಟ್ಟಿ, ಚಂದ್ರಕಾಂತ ಕರದಳ್ಳಿ, ಅಯ್ಯಣ್ಣ ಹುಂಡೇಕಾರ್, ಮಹಾದೇವಪ್ಪ ಅಬ್ಬೆತುಮಕೂರು, ಡಾ| ಗಾಳೆಪ್ಪ ಪೂಜಾರಿ, ಡಾ| ಎಸ್.ಎಸ್. ನಾಯಕ್, ಸುಭಾಷ್ ಅಯಾರಕರ್, ನೂರದಂಪ್ಪ ಲೇವಡಿ, ದೇವರಾಜ ನಾಯಕ್ ವರ್ಕನಹಳ್ಳಿ ಇದ್ದರು.