Advertisement

ಗ್ರಾಮಗಳಿಗೆ ಹರಿಯದ ನೀರು-ನಿತ್ಯ ಗೋಳಾಟ

12:51 PM Apr 27, 2019 | Naveen |

ಯಾದಗಿರಿ: ಜಲ ನಿರ್ಮಿಲ ಯೋಜನೆಯಡಿ ಯಾದಗಿರಿ ತಾಲೂಕು ಅಬ್ಬೆತುಮಕೂರು, ಮುದ್ನಾಳ, ಸಣ್ಣ ತಾಂಡಾ, ಗುರುಸುಣಗಿ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು 2007-08ರಲ್ಲಿ ಜಾರಿಗೆ ಬಂದ ಯೋಜನೆ ಹಳ್ಳ ಹಿಡಿದಿದೆ.

Advertisement

ಯೋಜನೆಯಡಿ ಭೀಮನದಿಯಿಂದ ಪೈಪ್‌ಲೈನ್‌ ಮೂಲಕ ನಿರಂತರ ಕುಡಿಯುವ ನೀರು ಒದಗಿಸಲು ಶೇಖರಣೆಗೆ ಟ್ಯಾಂಕ್‌, ಪೈಪ್‌ಲೈನ್‌ ಕಾರ್ಯ ಮುಗಿದಿದೆ. ನೀರಿನ ಟ್ಯಾಂಕ್‌ ಮತ್ತು ಶುದ್ಧೀಕರಣ ಘಟಕ ಸ್ಥಾಪಿಸಿ ಕಾಮಗಾರಿ ಮುಗಿಸಲಾಗಿದೆ. ಆದರೆ, ಕಾಮಗಾರಿ ಬಳಿಕ ಕೆಲ ದಿನಗಳು ಮಾತ್ರ ನೀರು ಸರಬರಾಜು ಮಾಡಲಾಯಾಯಿತು. ಬಳಿಕ ನಿಲ್ಲಿಸಿದ್ದು, ಹಲವು ವರ್ಷಗಳು ಉರುಳಿದರೂ ನೀರು ಮಾತ್ರ ಸರಬರಾಜು ಆಗುತ್ತಿಲ್ಲ. ಕಳಪೆ ಮಟ್ಟದ ಪೈಪ್‌ಲೈನ್‌ ಮಾಡಿರುವುದೇ ಯೋಜನೆ ಹಳ್ಳ ಹಿಡಿಯಲು ಕಾರಣವಾಗಿದೆ. ಗ್ರಾಮಗಳಲ್ಲಿ ನೀರಿನಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಗ್ರಾಮೀಣ ಭಾಗದಲ್ಲಿ ಕೋಟ್ಯಂತರ ರೂ. ಖರ್ಚು ಮಾಡಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಿದರೂ ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂತಹ ಸಮಸ್ಯೆಯುಂಟಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಲ್ಲದೇ ಭೀಮಾನದಿ ಪಕ್ಕದಲ್ಲಿಯೇ ಹಳ್ಳಿಗಳಿದ್ದರೂ ಅಕ್ಕಪಕ್ಕದಲ್ಲಿ ಸಾವಿರಾರು ಎಕರೆ ಜಮೀನಿನಲ್ಲಿ ಭತ್ತ ಬೆಳೆಯುತ್ತಿದ್ದಾರೆ. ಅವರಿಗೆ ನೀರು ಲಭ್ಯವಾಗುತ್ತಿದೆ. ಆದರೆ, ಗ್ರಾಮೀಣ ಜನರಿಗೆ ಹನಿ ನೀರು ಲಭ್ಯವಾಗುತ್ತಿಲ್ಲ. ಆದ್ದರಿಂದ ಈ ಅವ್ಯವಹಾರದಲ್ಲಿ ಭಾಗಿಯಾಗಿ ತೊಂದರೆಗೆ ಕಾರಣರಾದ ಸಂಬಂಧಪಟ್ಟವರನ್ನು ಅಮಾನತಿನಲ್ಲಿಟ್ಟು, ತನಿಖೆ ಮಾಡಬೇಕು. ಇಲ್ಲವಾದರೆ ಪ್ರತಿಭಟನೆ ಮಾಡುವದಲ್ಲದೆ ರಾಜ್ಯ ಸರಕಾರ ಮತ್ತು ಜಿಲ್ಲಾಡಳತದ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಟೋಕ್ರೆ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಮುದ್ನಾಳ ಎಚ್ಚರಿಸಿದ್ದಾರೆ.

ಜಲ ನಿರ್ಮಲ ಯೋಜನೆಯಡಿ ಕುಡಿಯುವ ನೀರು ಸರಬರಾಜುಗೊಳ್ಳಬೇಕಿತ್ತು. ಕೋಟಿಗಟ್ಟಲೇ ಹಣ ಖರ್ಚು ಮಾಡಿದ ಕಾಮಗಾರಿ ಕಳಪೆ ಮಟ್ಟದಿಂದ ಪೈಪ್‌ಲೈನ್‌ ತುಕ್ಕು ಹಿಡಿದಿದೆ. ಹಾಗಾಗಿ ಯೋಜನೆ ಲಾಭದಿಂದ ಗ್ರಾಮಗಳು ವಂಚಿತಗೊಂಡಿವೆ. ಇದರಿಂದಾಗಿ ಕುಡಿಯುವ ನೀರಿನ ಸಮಸ್ಯೆಯುಂಟಾಗಿದೆ. ಸರಕಾರದ ಬೊಕ್ಕಸಕ್ಕೆ ನಷ್ಟವಾಗಿದೆ. ನೀರಿನಂತೆ ಹಣ ಪೋಲಾಗಿದ್ದರೂ ಜನರಿಗೆ ಹನಿ ನೀರು ಸಿಗದೇ ಸಂಕಷ್ಟ ಹೆಚ್ಚಾಗಿದೆ. ಜಲನಿರ್ಮಲ ಯೋಜನೆಗೆ ಕೋಟ್ಯಂತರ ಹಣ ಖರ್ಚು ಮಾಡಿದ್ದನ್ನು ಕೈಬಿಟ್ಟು ಮತ್ತೆ ಹೊಸ ಯೋಜನೆಯಡಿ ಹಣ ಖರ್ಚು ಮಾಡಿ ಬಿಲ್ ಎತ್ತುವಳಿ ಮಾಡುತ್ತಿದ್ದಾರೆ. ಹಿಂದಿನ ಪೈಪ್‌ ಪೈಲ್ಗೆ ಜೋಡಣೆ ಮಾಡಿ ಹಣ ಎತ್ತುತ್ತಿದ್ದಾರೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು.
•ಉಮೇಶ ಕೆ. ಮುದ್ನಾಳ,
ಟೋಕ್ರೆ ಕೋಲಿ ಸಮಾಜ ಜಿಲ್ಲಾಧ್ಯಕ್ಷ.

Advertisement
Advertisement

Udayavani is now on Telegram. Click here to join our channel and stay updated with the latest news.

Next