Advertisement

ಕುಡಿಯುವ ನೀರಿಗೆ ತೀವ್ರ ಸಂಕಷ್ಟ

01:20 PM May 08, 2019 | Team Udayavani |

ಯಾದಗಿರಿ: ಕೋಲಾರ ಹೊರತು ಪಡಿಸಿ ಅತೀ ಹೆಚ್ಚು ಕೆರೆಗಳಿದ್ದರೂ ಮಳೆ ಅಭಾವದಿಂದ ತೀವ್ರ ಬರಕ್ಕೆ ತುತ್ತಾಗಿರುವ ಜಿಲ್ಲೆಯಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ.

Advertisement

ಜಿಲ್ಲಾ ಕೇಂದ್ರ ಸೇರಿದಂತೆ ನಗರ ಮತ್ತು ಗ್ರಾಮೀಣ ಪ್ರದೇಶದ ಜನರು ಕುಡಿಯುವ ನೀರಿಗೆ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ. ಸಮರ್ಪಕ ಕುಡಿಯುವ ನೀರು ಸರಬರಾಜಿಗೆ ಯಾದಗಿರಿ ನಗರ, ಗುರುಮಠಕಲ್ ಪಟ್ಟಣ ಸೇರಿದಂತೆ ಸುತ್ತಲಿನ 36 ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಸರಬರಾಜುಗೊಳಿಸಲು ಭೀಮಾ ನದಿಯ ಬ್ರಿಡ್ಜ್ ಕಂ. ಬ್ಯಾರೇಜ್‌ ಮೂಲಕ ಪ್ರತ್ಯೇಕ ಯೋಜನೆಗಳು ಅನುಷ್ಠಾನಗೊಂಡಿದ್ದರೂ ಕುಡಿಯುವ ನೀರಿನ ಬವಣೆ ತಪ್ಪಿಲ್ಲ. ಗುರುಮಠಕಲ್ ಕುಡಿಯುವ ನೀರಿನ ಯೋಜನೆಗೆ 40 ಕೋಟಿಯಷ್ಟು ಹಣ ಖರ್ಚು ಮಾಡಲಾಗಿದೆ. ಆದರೂ, ಗ್ರಾಮೀಣ ಭಾಗಗಳಿಗೆ ಸಮರ್ಪಕ ನೀರು ದೊರೆಯುತ್ತಿಲ್ಲ. ಜಿಲ್ಲೆಯಲ್ಲಿ ಸತತ 10 ವರ್ಷಗಳಿಂದ ಮಳೆಯ ಅಭಾವವಾಗಿದ್ದು, ಅಂತರ್ಜಲ ಮಟ್ಟ ತೀವ್ರ ಕುಸಿತ ಕಂಡಿದೆ.

ಸುರಪುರ ನಗರದಲ್ಲಿ ಸುಮಾರು ವರ್ಷಗಳಿಂದ ಕುಡಿಯುವ ನೀರಿಗೆ ತೀವ್ರ ಸಂಕಷ್ಟ ಇದ್ದು, ಈ ಭಾಗದ ಜನರು ದೂರದ ಬೋರವೆಲ್, ತೆರೆದ ಬಾವಿಗಳನ್ನೇ ಅವಲಂಭಿಸಿದ್ದಾರೆ. ಸುಮಾರು 60 ವರ್ಷಗಳ ಹಿಂದೆ ಶೆಳ್ಳಗಿ ಹತ್ತಿರದ ಕೃಷ್ಣಾ ನದಿಯಿಂದ ಸುರಪುರಕ್ಕೆ ಕುಡಿಯುವ ನೀರು ಸರಬರಾಜು ಯೋಜನೆ ಆರಂಭವಾಗಿತ್ತು. ಆದರೆ ಉತ್ತಮ ಗುಣಮಟ್ಟದಲ್ಲಿ ಪೈಪ್‌ಲೈನ್‌ ಜೋಡಣೆಯಾಗದಿರುವುದು ನೀರಿಗೆ ತೊಂದರೆಯುಂಟಾಗಿದೆ. ಈ ಹಿಂದೆಯೇ ಸರ್ಕಾರಕ್ಕೆ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ 130 ಕೋಟಿ ರೂಪಾಯಿ ಕ್ರಿಯಾಯೋಜನೆ ಸಲ್ಲಿಸಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ.

ಇನ್ನೂ ಶಹಾಪುರದಲ್ಲಿಯೂ ಕುಡಿಯುವ ನೀರಿಗೆ ಜನರು ಪರಿತಪಿಸುವ ಪರಿಸ್ಥಿತಿ ಸಾಮಾನ್ಯವಾಗಿದೆ. ಶಹಾಪುರ ಬಳಿಯ ಶೆಟಿಗೇರಾ ಗ್ರಾಮದ ಕೆರೆಯಿಂದ ಶೆಟಿಗೇರಾ, ವನದುರ್ಗ, ಚನ್ನೂರ, ಹೊಸಕೇರಾ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲು ವಿಶ್ವ ಬ್ಯಾಂಕ್‌ ಜಲ ನಿರ್ಮಾಣ ಯೋಜನಯಡಿ 5.67 ಕೋಟಿ ರೂಪಾಯಿ ವೆಚ್ಚದಲ್ಲಿ 2013ರಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಕೆರೆಯಲ್ಲಿ ನೀರಿಲ್ಲದೇ ಬತ್ತಿ ಹೋಗಿದ್ದು, ಕೋಟ್ಯಂತರ ಖರ್ಚು ಮಾಡಿದರೂ ಕುಡಿಯುವ ನೀರಿಗೆ ಪರದಾಡುವಂತಾಗಿದೆ.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಭಾವವಾಗಿರುವುದರಿಂದ ಜಿಲ್ಲಾಡಳಿತ ಸಮಸ್ಯೆಗೆ ಸ್ಪಂದಿಸಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ಹಲವು ಕಾರ್ಯ ಯೋಜನಗಳನ್ನು ಕೈಗೆತ್ತಿಕೊಂಡಿದ್ದರೂ ನೀರಿಗಾಗಿ ಪರದಾಡುವ ಸ್ಥಿತಿ ಮಾತ್ರ ಸುಧಾರಿಸುತ್ತಿಲ್ಲ.

Advertisement

500 ಕೊಳವೆ ಬಾವಿಗಳ ಮರು ಕೊರೆಯುವಿಕೆ: ಜಿಲ್ಲೆಯಲ್ಲಿ ಸುಮಾರು 10 ವರ್ಷಗಳಿಂದ ಮಳೆಯ ಅಭಾವದಿಂದ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದ್ದು, ಹೊಸ ಕೊಳವೆ ಬಾಯಿಗಳನ್ನು ಕೊರೆಯಿಸುವ ಬದಲು ಸರ್ಕಾರದ ನಿರ್ದೇಶನದಂತೆ ಈ ಹಿಂದೆ ಕೊರೆದು ವಿಫಲವಾದ ಬೋರವೆಲ್ಗಳನ್ನು ಮರು ಕೊರೆಯುವ ಕಾರ್ಯಕ್ಕೆ ಮುಂದಾಗಿದೆ. ಜಿಲ್ಲೆಯ ಒಟ್ಟು 500 ಬೋರವೆಲ್ಗಳನ್ನು ಮರು ಕೊರೆಯುವ ಕಾಮಗಾರಿಗೆ 1.50 ಕೋಟಿ ರೂಪಾಯಿ ಖರ್ಚು ಮಾಡಲು ನಿಗದಿ ಪಡಿಸಿದ್ದು, ಹಲವೆಡೆ ಕಾಮಗಾರಿ ಪ್ರಗತಿಯಲ್ಲಿದೆ.

36 ಖಾಸಗಿ ಬೋರವೆಲ್ ಬಳಕೆ: ಗ್ರಾಮೀಣ ಭಾಗದಲ್ಲಿ ತೀವ್ರ ನೀರಿನ ಅಭಾವವಿರುವ ಪ್ರದೇಶಗಳಲ್ಲಿ ಬೇರೆ ಯಾವುದೇ ನೀರಿನ ಮೂಲಗಳಿಲ್ಲದಿರುವ ಜನ ವಸತಿ ಪ್ರದೇಶಕ್ಕೆ ಹತ್ತಿರ ಇರುವ ಯಾದಗಿರಿ, ಶಹಾಪುರ ಹಾಗೂ ಸುರಪುರ ತಾಲೂಕಿನ ಅಗತ್ಯವಿರುವ ಕಡೆ 36 ಖಾಸಗಿ ಬೋರವೆಲ್ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.

19 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು: ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಯಾದಗಿರಿ, ಶಹಾಪುರ ಹಾಗೂ ಸುರಪುರ ತಾಲೂಕಿನ 19 ಗ್ರಾಮಗಳಿಗೆ ಜಿಲ್ಲಾಡಳಿತ ಈಗಾಗಲೇ ಕುಡಿಯುವ ನೀರು ಸರಬರಾಜು ಮಾಡುತ್ತಿದೆ. ನಿತ್ಯ ಒಂದು ಗ್ರಾಮಕ್ಕೆ 2 ಟ್ರಿಪ್‌ನಂತೆ ಪ್ರತಿದಿನ 38 ಟ್ರಿಪ್‌ ನೀರು ಸರಬರಾಜುಗೊಳ್ಳುತ್ತಿದೆ.

ಪೈಪ್‌ಲೈನ್‌ ದುರಸ್ತಿಗೆ 90 ಲಕ್ಷ ಮೀಸಲು: ಜಿಲ್ಲೆಯಲ್ಲಿ ಕುಡಿಯುವ ನೀರು ಸಮರ್ಪಕ ಸರಬರಾಜುಗೊಳಿಸಲು ಸಣ್ಣ ಪುಟ್ಟ ಪೈಪ್‌ಲೈನ ದುರಸ್ತಿ ಕಾಮಗಾರಿಗಾಗಿ ಅವಿಭಜಿತ 3 ತಾಲೂಕಿಗೆ ತಲಾ 30 ಲಕ್ಷದಂತೆ ಒಟ್ಟು 90 ಲಕ್ಷ ರೂಪಾಯಿ ಮೀಸಲಿಟ್ಟು ಹಲವೆಡೆ ಕಾಮಗಾರಿ ನಡೆಸಲಾಗುತ್ತಿದೆ.

ಟಾಸ್ಕ್ ಫೋರ್ಸ್ ಯೋಜನೆಯಡಿ 1.50 ಕೋಟಿ: ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಟಾಸ್ಕ್ ´ೋರ್ಸ್‌ ಯೋಜನೆಯಡಿ ಜಿಲ್ಲೆಯ 3 ತಾಲೂಕುಗಳಿಗೆ ತಲಾ 50 ಲಕ್ಷದಂತೆ ಮೀಸಲಿಟ್ಟು ಕಾಮಗಾರಿ ಕೈಗೊಂಡಿದ್ದು, ಈಗಾಗಲೇ ಮೂರು ಹಂತಗಳಲ್ಲಿ 1.50 ಕೋಟಿ ಅನುದಾನ ಬಿಡುಗಡೆಯಾಗಿದೆ. ನಗರ ಪ್ರದೇಶದಲ್ಲಿ ಎಸ್‌ಎಫ್‌ಸಿ ಯೋಜನೆಯಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಈಗಾಗಲೇ ಅಗತ್ಯ ಕ್ರಮ ವಹಿಸಲಾಗಿದೆ. ಬತ್ತಿದ ಬೋರವೆಲ್ಗಳನ್ನು ಮರು ಕೊರೆಯಿಸಲಾಗುತ್ತಿದ್ದು, ಸಮಸ್ಯಾತ್ಮಕ 19 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜುಗೊಳಿಸಲಾಗುತ್ತಿದೆ. ಅಗತ್ಯ ಇರುವ ಕಡೆ 36 ಖಾಸಗಿ ಬೋರವೆಲ್ಗಳನ್ನು ಬಳಸಿಕೊಂಡು ಗ್ರಾಮೀಣ ಪ್ರದೇಶದ ಜನರಿಗೆ ನೀರು ಒದಗಿಸಲಾಗುತ್ತಿದೆ.
ಎಂ. ಕೂರ್ಮಾರಾವ್‌, ಜಿಲ್ಲಾಧಿಕಾರಿ

ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತಾಂಡವಾಡುತ್ತಿದೆ. ಈ ಬಗ್ಗೆ ಜಿಲ್ಲಾ ಮಟ್ಟದ ಯಾವುದೇ ಅಧಿಕಾರಿಗಳು ಗ್ರಾಮೀಣ ಪ್ರದೇಶಕ್ಕೆ ತೆರಳಿ ಸಮಸ್ಯೆ ಆಲಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಿಗಂತು ಜಿಲ್ಲೆಯ ಸಮಸ್ಯೆಗಳ ಕುರಿತು ಕಾಳಜಿಯೇ ಇಲ್ಲ.
•ಉಮೇಶ ಮುದ್ನಾಳ,
ಸಾಮಾಜಿಕ ಕಾರ್ಯಕರ್ತ

Advertisement

Udayavani is now on Telegram. Click here to join our channel and stay updated with the latest news.

Next