Advertisement

ಶಿಕ್ಷಕರ ಕೊರತೆ ನೀಗಿಸಲು ಶಿಕ್ಷಣ ಇಲಾಖೆ ನಿರ್ಲಕ್ಷ್ಯ

11:36 AM Jun 17, 2019 | Naveen |

ಅನೀಲ ಬಸೂದೆ
ಯಾದಗಿರಿ:
ಗಡಿ ತಾಲೂಕಿನ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ತಾಂಡವಾಡುತ್ತಿದ್ದು, ಇದರಿಂದ ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವುದು ಗಗನ ಕುಸುಮವಾಗಿದೆ.

Advertisement

ಗಡಿ ಭಾಗದ ಕನ್ನಡ ಶಾಲೆಗಳ ಸ್ಥಿತಿ ಚಿಂತಾಜನಕವಾಗಿದ್ದು, ಚಂಡರಕಿ ಗ್ರಾಮದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಾಸ್ತವ್ಯ ಹೂಡುತ್ತಿರುವ ಶಾಲೆಯೂ ಇದರಿಂದ ಹೊರತಾಗಿಲ್ಲ. ಹಾಗಾಗಿ ಶಾಲೆಯಲ್ಲಿ ವಾಸ್ತವ್ಯ ಮಾಡುತ್ತಿರುವುದರಿಂದ ಶಿಕ್ಷಕರ ಕೊರತೆ ನೀಗಿಸಿ ಶಿಕ್ಷಣ ಮಟ್ಟ ಸುಧಾರಣೆಗೆ ಸೂಕ್ತ ಕ್ರಮ ಕೈಗೊಳ್ಳಲಿ ಎನ್ನುವ ಒತ್ತಾಯ ಸಾರ್ವಜನಿಕರದ್ದು.

ಸಿಎಂ ವಾಸ್ತವ್ಯ ಹೂಡುತ್ತಿರುವ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 7ನೇ ತರಗತಿಯವರೆಗೆ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆಗೆ ಒಟ್ಟು 11 ಹುದ್ದೆಗಳು ಮಂಜೂರಾಗಿದ್ದು, ಇವರಲ್ಲಿ 8 ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಸಿಎಂ ಆಗಮನ ಸುದ್ದಿ ತಿಳಿದು ವಾರದ ಹಿಂದೆ ಅಷ್ಟೇ 3 ಜನ ಶಿಕ್ಷಕರನ್ನು ಹೆಚ್ಚುವರಿ ಕರ್ತವ್ಯಕ್ಕೆ ನೇಮಿಸಲಾಗಿದೆ.

ಇಲ್ಲಿನ ಉರ್ದು ಪ್ರಾಥಮಿಕ ಶಾಲೆಯಲ್ಲಿ 2ಹುದ್ದೆ ಮಂಜೂರಿದ್ದು, ಇವರಲ್ಲಿ ಒಬ್ಬರು ಕರ್ತವ್ಯ ನಿರ್ವಹಿಸುತ್ತಿದ್ದು, ಇನ್ನು ಒಂದು ಹುದ್ದೆಗೆ ಹೆಚ್ಚುವರಿ ನೇಮಕ ಮಾಡಲಾಗಿದೆ. ಗ್ರಾಮದ ಪ್ರೌಢಶಾಲೆಗೆ 11 ಹುದ್ದೆಗಳು ಮಂಜೂರಿದ್ದು, 8 ಜನ ಕಾರ್ಯ ನಿರ್ವಹಿಸುತ್ತಿದ್ದು, ದೈಹಿಕ ಶಿಕ್ಷಣ ಶಿಕ್ಷಕ, ಚಿತ್ರಕಲೆ ಶಿಕ್ಷಕ ಹುದ್ದೆ ಹಾಗೂ ಸೇವಕನ ಹುದ್ದೆ ಖಾಲಿಯಿದೆ.

ಅಲ್ಲದೇ ಯಾದಗಿರಿ ತಾಲೂಕಿನ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು 1,412 ಹುದ್ದೆಗಳಲ್ಲಿ 964 ಹುದ್ದೆಗಳಲ್ಲಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, 448 ಹುದ್ದೆಗಳು ಖಾಲಿ ಇವೆ. ಅವಿಭಜಿತ ಯಾದಗಿರಿ- ಗುರುಮಠಕಲ್ ತಾಲೂಕಿನಲ್ಲಿಯೇ 448 ಹುದ್ದೆಗಳು ಖಾಲಿಯಾಗಿದ್ದು, ಇದರಿಂದ ಪ್ರಾಥಮಿಕ ಮಟ್ಟದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.

Advertisement

ಇನ್ನೂ ಪ್ರೌಢ ಶಾಲೆಗಳ 317 ಶಿಕ್ಷಕರ ಹುದ್ದೆ ಮಂಜೂರಾಗಿದ್ದು, ಇವರಲ್ಲಿ 256 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದು, 61 ಹುದ್ದೆಗಳು ಖಾಲಿ ಇವೆ. ಪ್ರಮುಖವಾಗಿ ವಿಜ್ಞಾನ, ಇಂಗ್ಲಿಷ್‌ ಮತ್ತು ಗಣಿತ ವಿಷಯದ ಶಿಕ್ಷಕರೇ ಇಲ್ಲ. ರಾಜ್ಯದ ಗಡಿಯಲ್ಲಿನ 38 ಶಾಲೆಗಳಲ್ಲಿ ಒಟ್ಟು 5,077 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, 218 ಶಿಕ್ಷಕರ ಹುದ್ದೆಗ ಮಂಜೂರಾಗಿದ್ದು, 160 ಶಿಕ್ಷಕರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಇನ್ನೂ 58 ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ ಎಂದು ಶಿಕ್ಷಣ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ.

ಯಾದಗಿರಿ ತಾಲೂಕಿನಲ್ಲಿ ಒಟ್ಟು 1,412 ಪ್ರಾಥಮಿಕ ಶಿಕ್ಷಕರ ಹುದ್ದೆ ಮಂಜೂರಾಗಿದ್ದು, 964 ಜನ ಕಾರ್ಯ ನಿರ್ವಹಿಸುತ್ತಿದ್ದಾರೆ. 448 ಹುದ್ದೆಗಳು ಖಾಲಿ ಇವೆ. ಪ್ರೌಢಶಾಲೆಯ 317 ಹುದ್ದೆಗಳಲ್ಲಿ 256 ಜನ ಸಿಬ್ಬಂದಿಗಳಿದ್ದು, 61 ಹುದ್ದೆಗಳು ಖಾಲಿ ಇವೆ. ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ಶಿಕ್ಷಣವನ್ನು ನೀಡಲಾಗುತ್ತಿದೆ.
ರುದ್ರಗೌಡ.
ಕ್ಷೇತ್ರ ಶಿಕ್ಷಣಾಧಿಕಾರಿ

ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ದೊರೆಯಬೇಕು. ಗಡಿ ಭಾಗದಲ್ಲಿ ಶಿಕ್ಷಕರ ಕೊರೆತೆ ಇರುವುದರಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುತ್ತಿಲ್ಲ. ಹಾಸನಕ್ಕೆ ಕೊಟ್ಟ ಆದ್ಯತೆ ಯಾದಗಿರಿ ಜಿಲ್ಲೆಗೂ ಕೊಡಬೇಕು. ಪ್ರಾಥಮಿಕ ಹಂತದಲ್ಲಿಯೇ ಸರಿಯಾದ ಶಿಕ್ಷಣ ದೊರೆಯಲು ಶಿಕ್ಷಕರನ್ನು ನೇಮಿಸಬೇಕು. ವಿಷಯ ಶಿಕ್ಷಕರ ಕೊರತೆಯಿಂದ ಎಸ್‌ಎಸ್‌ಎಲ್ಸಿ ಫಲಿತಾಂಶದಲ್ಲಿಯೂ ಕುಸಿತ ಕಂಡು ಬರುತ್ತಿದೆ.
ನರಸಿಂಹಲು ನೀರೆಟಿ, ಬಿಜೆಪಿ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next