ಯಾದಗಿರಿ: ಸಂಕ್ರಾಂತಿ ಸರ್ವ ಜನಾಂಗದವರಿಗೂ ಸಮೃದ್ಧಿಯನ್ನು ತರುವ ಹಬ್ಬವಾಗಲಿ ಎಂದು ಅಬ್ಬೆತುಮಕೂರಿನ ಪೀಠಾಧಿಪತಿ ಡಾ| ಗಂಗಾಧರ ಸ್ವಾಮೀಜಿ ನುಡಿದರು.
ಮಕರ ಸಂಕ್ರಾಂತಿ ನಿಮಿತ್ತ ಶ್ರೀ ಮಠದ ವತಿಯಿಂದ ಅಬ್ಬೆತುಮಕೂರಿನ ಸೀಮಾಂತರದ ಭೀಮಾ ನದಿ ತಟದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹೊಳಿ ಜಾತ್ರೆ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ರೈತ ಭಿತ್ತಿ ಬೆಳೆದ ಫಸಲನ್ನು ರಾಶಿ ಮಾಡಿಕೊಳ್ಳುವ ಸಂದರ್ಭದಲ್ಲಿ ಬರುವ ಸಂಕ್ರಾಂತಿ ವಿಶೇಷ ಮಹತ್ವವನ್ನು ಪಡೆದಿದೆ. ಇದೇ ಸಂದರ್ಭದಲ್ಲಿ ಎಳ್ಳು ದಾನ ಮಾಡುವದರಿಂದಲೂ ಪುಣ್ಯ ಸಿಗುತ್ತದೆ ಎಂಬ ನಂಬಿಕೆಯಿಂದ ಜನರು ಎಳ್ಳನ್ನು ಪರಸ್ಪರ ನೀಡುವ ಪರಂಪರೆ ನಮ್ಮಲ್ಲಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಶ್ರೀಗಳು ಹೂವಿನಿಂದ ಅಲಂಕೃತವಾದ ತೆಪ್ಪದಲ್ಲಿ ಭೀಮಾನದಿ ಮಧ್ಯ ಭಾಗಕ್ಕೆ ತೆರಳಿ ಪುಣ್ಯ ಸ್ನಾನ ಮಾಡಿ ನಾಡಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿ ಗಂಗಾ ದೇವಿಗೆ ವಿಶೇಷ ಪೂಜೆ ನೆರವೇರಿಸಿದರು. ಪುನಃ ಶ್ರೀಗಳು ತೆಪ್ಪದಲ್ಲಿ ನದಿ ಮಧ್ಯ ಭಾಗದಿಂದ ದಡಕ್ಕೆ ಆಗಮಿಸಿದಾಗ ಶ್ರೀಗಳಿಗೆ ಭಕ್ತರು ಪಾದಪೂಜೆ ನೆರವೇರಿಸಿದರು.
ನಂತರ ಶ್ರೀಗಳು ಗಂಗಾ ಮಾತೆಗೆ ಸೀರೆ ಉಡಿಸುವುದರ ಮೂಲಕ ಉಡಿ ತುಂಬುವ ಕಾರ್ಯಕ್ರಮ ನಡೆಸಿಕೊಟ್ಟರು. ನಂತರ ಹೊಳಿ ಜಾತ್ರೆಗೆ ಆಗಮಿಸಿದ ಎಲ್ಲ ಭಕ್ತರು ಸಜ್ಜಿ ರೊಟ್ಟಿ, ಶೇಂಗಾ ಹೋಳಿಗೆ, ಕರಿಗಡಬು, ಪುಂಡಿ ಪಲ್ಯ, ಹಿಂಡಿ ಪಲ್ಯ, ಎಣ್ಣೆ ಬದನೆ ಕಾಯಿ, ಶೇಂಗಾ ಹಿಂಡಿ ಹೀಗೆ ವಿವಿಧ ಬಗೆಯ ಭೋಜನ ಸವಿದು ಖುಷಿ ಪಟ್ಟರು.
ಈ ಸಂದರ್ಭದಲ್ಲಿ ದೋರನಹಳ್ಳಿ ಶ್ರೀ ವೀರಮಹಾಂತ ಶಿವಾಚಾರ್ಯರು, ದೇವಾಪುರದ ಶ್ರೀಗಳು, ಪ್ರಮುಖರಾದ ಡಾ| ಸುಭಾಶ್ಚಂದ್ರ ಕೌಲಗಿ, ಎಸ್.ಎನ್. ಮಿಂಚನಾಳ, ರಾಮಶೆಟ್ಟೆಪ್ಪ ಹುಗ್ಗಿ, ಹನುಮಾನ ಸೇಠ ಸುರಪುರ,
ಡಾ| ಶರಣಬಸವ ಎಲ್ಹೇರಿ ಸೇರಿದಂತೆ ಅಬ್ಬೆತುಮಕೂರು ಮತ್ತು ಸುತ್ತಮುತ್ತಲಿನ ಹಳ್ಳಿಗಳು ಅಲ್ಲದೇ ಶಹಾಪುರ, ಸುರಪುರ, ಗುರುಮಠಕಲ್, ಕಲಬುರಗಿ, ಸೇಡಂ, ಚಿತ್ತಾಪುರ, ಬಿಜಾಪುರ, ಸಿಂದಗಿ, ದಾವಣಗೇರೆ, ಮಾನವಿ, ರಾಯಚೂರು ಸೇರಿದಂತೆ ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಿಂದಲೂ ಅನೇಕ ಭಕ್ತರು ಆಗಮಿಸಿದ್ದರು.