Advertisement

ಶೌಚಾಲಯ ಇದ್ದರೂ ತಪ್ಪದ ಚಂಬು ಸವಾರಿ

12:22 PM Mar 13, 2020 | Naveen |

ಯಾದಗಿರಿ: ಸರ್ಕಾರಿ ಅಂಕಿ ಅಂಶಗಳ ಪ್ರಕಾರ ಗಡಿ ಜಿಲ್ಲೆ ಯಾದಗಿರಿಯ 123 ಗ್ರಾಮ ಪಂಚಾಯಿತಿಗಳಲ್ಲಿಯೂ ವೈಯಕ್ತಿಕ ಶೌಚಾಲಯ ನಿರ್ಮಾಣದಲ್ಲಿ ಶೇ.100ರಷ್ಟು ಸಾಧನೆಯಾಗಿದ್ದು, ಬಯಲು ಮುಕ್ತ ಜಿಲ್ಲೆಯನ್ನಾಗಿಯೂ ಘೋಷಿಸಲಾಗಿದೆ. ಆದರೆ ಬಹುತೇಕ ಗ್ರಾಮೀಣ ಭಾಗದಲ್ಲಿ ಶೌಚಾಲಯ ನಿರ್ಮಿಸಿಕೊಂಡಿದ್ದರೂ ಅಷ್ಟಾಗಿ ಬಳಸುತ್ತಿಲ್ಲ ಎಂದು ಗೊತ್ತಾಗಿದೆ.

Advertisement

ಸರ್ಕಾರ ಬಯಲು ಶೌಚಮುಕ್ತವಾಗಿಸಲು ಸಾಮಾನ್ಯ ವರ್ಗದವರಿಗೆ 12 ಸಾವಿರ ರೂ. ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವರ್ಗಕ್ಕೆ 15 ಸಾವಿರ ರೂ. ಪ್ರೋತ್ಸಾಹ ಧನ ನೀಡುತ್ತಿದ್ದು, ಮೊದಲು ಹಂತ ಹಂತವಾಗಿ ಚೆಕ್‌ ಮೂಲಕ ಪಾವತಿಯಾಗುತ್ತಿದ್ದ ಅನುದಾನ ಈಗ ನೇರವಾಗಿ ಫಲಾನುಭವಿ ಖಾತೆಗೆ ಜಮೆಯಾಗುತ್ತಿದೆ. ಸರ್ಕಾರ ಎಷ್ಟು ಪ್ರೋತ್ಸಾಹ ನೀಡಿದರೂ ಶೌಚಾಲಯ ನಿರ್ಮಿಸಿ ಬಳಸದಿರುವ ಸಂಗತಿಗಳು ಕಂಡು ಬರುತ್ತಿವೆ.

ಇನ್ನಾದರೂ ಗ್ರಾಮೀಣ ಪ್ರದೇಶಕ್ಕೆ ಪ್ರವೇಶಿಸಬೇಕಾದರೆ ಮೂಗು ಮುಚ್ಚಿಕೊಂಡೇ ಇಂಟ್ರಿ ಕೊಡುವ ಪರಿಸ್ಥಿತಿಯಿದೆ. 2010ರಲ್ಲಿ ಸಂಪೂರ್ಣ ಸ್ವತ್ಛ ಅಭಿಯಾನ, 2012ರಲ್ಲಿ ನಿರ್ಮಲ ಭಾರತ ಅಭಿಯಾನ ಹಾಗೂ 2014ರಲ್ಲಿ ಸ್ವಚ್ಛ ಭಾರತ ಅಭಿಯಾನಗಳು ಬಯಲು ಶೌಚ ಮುಕ್ತವಾಗಿಸಲು ಸರ್ಕಾರ ಜಾರಿಗೆ ತಂದರೂ ಬದಲಾವಣೆ ಅಷ್ಟಕಷ್ಟೇ ಎನ್ನುವಂತಿದೆ.

ಶೌಚಾಲಯಗಳ ನಿರ್ಮಾಣ, ಬಳಕೆ ಕುರಿತು ನೈಜ ಚಿತ್ರಣವನ್ನು ಬಯಲಿಗೆ ತಂದು ಅಧಿಕಾರಿಗಳು ಶೌಚಾಲಯ ಬಳಕೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಬೇಕಿದೆ. ಇದರೊಂದಿಗೆ ಸಾರ್ವಜನಿಕರು ಆರೋಗ್ಯಯುತ ವಾತಾವರಣ ನಿರ್ಮಾಣಕ್ಕೆ ಶೌಚಾಲಯ ಬಳಸಬೇಕಿದೆ. 2012ರ ಸರ್ವೇ ಪ್ರಕಾರ ಜಿಲ್ಲೆಯಲ್ಲಿ ಯಾದಗಿರಿ ತಾಲೂಕಿನಲ್ಲಿ 4297, ಶಹಾಪುರ 8571 ಹಾಗೂ ಸುರಪುರ 9225 ಸೇರಿ ಒಟ್ಟು 22093 ಶೌಚಾಲಯಗಳು ನಿರ್ಮಾಣವಾಗಿದ್ದವು. ಜಿಲ್ಲಾಡಳಿತ ಯಾದಗಿರಿ ತಾಲೂಕಿನಲ್ಲಿ 35333, ಶಹಾಪುರ 43933 ಹಾಗೂ ಸುರಪು 44450 ಸೇರಿ ಜಿಲ್ಲೆಯಲ್ಲಿ ಒಟ್ಟು 1,23,716 ಶೌಚಾಲಯ ನಿರ್ಮಿಸುವ ಗುರಿ ಹೊಂದಿದ್ದು, ಅದರಂತೆ ಶೇ.100ರಷ್ಟು ಸಾಧನೆ ಮಾಡಿದ್ದರಿಂದ 2018ರ ಅ.2ರಂದು ಬಯಲು ಮುಕ್ತ ಜಿಲ್ಲೆಯಾಗಿ ಘೋಷಣೆಯಾಗಿದೆ. ಆದರೆ, ಜಿಲ್ಲೆಯಲ್ಲಿ ಯಾದಗಿರಿ ತಾಲೂಕು ಅಲ್ಲಿಪುರ ಗ್ರಾಪಂ ವ್ಯಾಪ್ತಿಯಲ್ಲಿ ರಸ್ತೆ ಬದಿಗಳಲ್ಲಿ ಬಯಲು ಮಾತ್ರ ತಪ್ಪಿಲ್ಲ.

ನಿತ್ಯ ಜನರು ತೆಂಬಿಗೆ ಹಿಡಿದು ಹೋಗುವ ಚಾಳಿ ಮರೆತಿಲ್ಲ. ಕೆಲವು ಶೌಚಾಲಯಗಳನ್ನು ಸಂಪೂರ್ಣ ನಿರ್ಮಿಸಿಲ್ಲ. ಕೇವಲ ನಾಲ್ಕು ಗೋಡೆ ನಿರ್ಮಿಸಿ ಬಾಗಿಲು ಕೂಡಿಸಲಾಗಿದೆ. ಅದಕ್ಕೆ ತೋಡಿದ್ದ ಮುಚ್ಚಿ ಬಳಕೆ ಮಾಡದೇ ಬಿಡಲಾಗಿದೆ. ರಾಮಸಮುದ್ರ ಗ್ರಾಮದಲ್ಲಿ ನಿರ್ಮಾಣವಾಗಿರುವ ಶೌಚಾಲಯಗಳು ಬೇರೆ ಉದ್ದೇಶಗಳಿಗಾಗಿ ಉಪಯೋಗವಾಗುತ್ತಿದ್ದು, ಗ್ರಾಮದಲ್ಲಿ ನೀರಿನ ಕೊರತೆ ಇರುವುದರಿಂದ ಶೌಚಾಲಯ ಬಳಸುತ್ತಿಲ್ಲ ಎನ್ನುವ ಸಂಗತಿ ಬೆಳಕಿಗೆ ಬಂದಿದೆ. ಅರಕೇರಾ(ಕೆ) ಗ್ರಾಮದಲ್ಲಿ ನಿರ್ಮಿಸಲಾಗಿರುವ ಶೌಚಾಲಯಗಳು ನಾಮಕೇ ವಾಸ್ತೆ ಎನ್ನುವಂತಿದ್ದು ಬಹುತೇಕ ಬಳಕೆಯೇ ಇಲ್ಲ. ಸುರಪುರ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಾಣವಾಗಿರುವ ಶೌಚಾಲಯಗಳನ್ನು ಕೆಲವರು ಬಳಸುತ್ತಿದ್ದು, ಕೆಲವೆಡೆ ಅಪೂರ್ಣ ಕಾಮಗಾರಿ ಮಾಡಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಶಹಾಪುರ ತಾಲೂಕಿನಲ್ಲಿಯೂ ಪರಿಸ್ಥಿತಿ ಹೊರತಾಗಿಲ್ಲ.

Advertisement

ಲಕ್ಷಾನುಗಟ್ಟಲೇ ಖರ್ಚು
ಜಿಲ್ಲೆಯಲ್ಲಿ 2016-17 ರಿಂದ 2019-20ರ ಜನವರಿ ವರೆಗೆ ಗ್ರಾಮೀಣ ವಿಧಾನಸಭಾ ಕ್ಷೇತ್ರವಾರು ಒಟ್ಟು 14188.55 ಲಕ್ಷಗಳು ಖರ್ಚು ಮಾಡಲಾಗಿದೆ. ಗುರುಮಠಕಲ್‌ ವಿಧಾನಸಭಾ ಕ್ಷೇತ್ರದಲ್ಲಿ 2016-17ರಲ್ಲಿ 531.69 ಲಕ್ಷ, 2017-18ರಲ್ಲಿ 1090.035 ಲಕ್ಷ, 2018-19ರಲ್ಲಿ 1357.02 ಲಕ್ಷ ಹಾಗೂ 2019-20ರ ಜನವರಿ ತಿಂಗಳ ವರೆಗೆ 389.52 ಲಕ್ಷ ರೂ. ಖರ್ಚು ಮಾಡಲಾಗಿದೆ. ಇನ್ನು ಶಹಾಪುರ ಕ್ಷೇತ್ರದಲ್ಲಿ ಕ್ರಮವಾಗಿ 227.40 ಲಕ್ಷ, 1036.91 ಲಕ್ಷ, 2154.67 ಲಕ್ಷ ಹಾಗೂ ಪ್ರಸ್ತುತ ಜನವರಿ ವರೆಗೆ 305.39 ಲಕ್ಷ ಖರ್ಚು ಮಾಡಲಾಗಿದೆ. ಸುರಪುರ ಕ್ಷೇತ್ರದಲ್ಲಿ 310.53 ಲಕ್ಷ, 1284.675 ಲಕ್ಷ, 2166.93 ಲಕ್ಷ ಸೇರಿದಂತೆ 2020 ಜನವರಿ ವೇಳೆಗೆ 539.52 ಲಕ್ಷ ರೂ. ಖರ್ಚಾಗಿದೆ. ಯಾದಗಿರಿ ಕ್ಷೇತ್ರದ ವ್ಯಾಪ್ತಿಯಲ್ಲಿ 323.83 ಲಕ್ಷ, 1044.36 ಲಕ್ಷ, 1106.5 ಲಕ್ಷ ರೂ. ಪ್ರಸ್ತುತ ಜನವರಿ ವೇಳೆಗೆ 319.57 ಲಕ್ಷ ರೂ.ಖರ್ಚಾಗಿದೆ.

ಜಿಲ್ಲೆ ಬಯಲು ಶೌಚಮುಕ್ತವಾಗಿ ಘೋಷಣೆಯಾಗಿದೆ. ಸಾಕಷ್ಟು ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರು ಶೌಚಾಲಯ ಬಳಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಜನವರಿ ಮತು ಫೆಬ್ರವರಿಯಲ್ಲಿ ಟಾಟಾ ಟ್ರಸ್ಟ್‌ ಹಾಗೂ ಗ್ರಾಪಂ ಸೇರಿ ಜಾಗೃತಿ ಮೂಡಿಸಿದೆ. ಅಲ್ಲದೇ ಶಾಲೆ ಮಕ್ಕಳಲ್ಲಿಯೂ ಅರಿವು ಮೂಡಿಸಿ ಮನೆಯವರೆಲ್ಲ ಶೌಚಾಲಯ ಬಳಸುವಂತೆ ಹೇಳಾಗುತ್ತಿದೆ. ಗುಲಾಬಿ ಹೂ ನೀಡಿ ಬಯಲಿಗೆ ತೆರಳುವುದನ್ನು ನಿಯಂತ್ರಿಸಲು ಶ್ರಮಿಸಲಾಗಿದೆ. ನಿರಂತರ ಜಾಗೃತಿ ನಡೆಯುತ್ತದೆ.
ಶಿಲ್ಪಾ ಶರ್ಮಾ, ಜಿಪಂ ಸಿಇಒ

ಅನೀಲ ಬಸೂದೆ

Advertisement

Udayavani is now on Telegram. Click here to join our channel and stay updated with the latest news.

Next