Advertisement

ಪಾಲಕರು ಮಕ್ಕಳಿಗೆ ಲಸಿಕೆ ಹಾಕಿಸಲಿ

11:28 AM Sep 01, 2019 | Naveen |

ಯಾದಗಿರಿ: ರೋಟಾವೈರಸ್‌ ಸೋಂಕಿನಿಂದ ರಕ್ಷಣೆ ಪಡೆಯುವ ಏಕೈಕ ನಿರ್ದಿಷ್ಟ ಸಾಧನವೆಂದರೆ ರೋಟಾವೈರಸ್‌ ಲಸಿಕೆ ಹಾಕಿಸುವುದಾಗಿದೆ. ಮಕ್ಕಳಿಗೆ 6, 10 ಮತ್ತು 14 ವಾರಗಳ ವಯಸ್ಸಿನಲ್ಲಿ ರೋಟಾವೈರಸ್‌ ಲಸಿಕೆ ತಪ್ಪದೇ ಹಾಕಿಸಬೇಕು ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಸಲಹೆ ನೀಡಿದರು.

Advertisement

ನಗರದ ಜಿಲ್ಲಾ ಆಸ್ಪತ್ರೆ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ರೋಟಾವೈರಸ್‌ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರೋಟಾವೈರಸ್‌ ಹೆಚ್ಚು ಸಾಂಕ್ರಾಮಿಕವಾಗಿದ್ದು, ಅತಿಸಾರದಿಂದ ಬಳಲುತ್ತಿರುವ ರೋಗಿಗಳು ದೊಡ್ಡ ಪ್ರಮಾಣದಲ್ಲಿ ವೈರಸ್‌ನ್ನು ಮಲದ ಮೂಲಕ ಹೊರ ಹಾಕುತ್ತಾರೆ. ಒಂದು ಮಗುವಿಗೆ ಕಲುಷಿತವಾದ ನೀರು, ಆಹಾರ ಮತ್ತು ಕೊಳೆಯಾದ ಕೈಗಳ ಸಂಪರ್ಕಕ್ಕೆ ಬರುವುದರಿಂದ ವೈರಸ್‌ ಹರಡುತ್ತದೆ. ಈ ವೈರಾಣು ತುಂಬಾ ಸಮಯದವರೆಗೆ ಮಕ್ಕಳ ಕೈಯಲ್ಲಿ ಮತ್ತು ಇತರ ಗಟ್ಟಿಯಾದ ಮೇಲ್ಪದರಗಳಲ್ಲಿ ಜೀವಂತವಾಗಿರಬಹುದು. ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಅಡಿಯಲ್ಲಿ ಎಲ್ಲಾ ಲಸಿಕೆಗಳ ಜೊತೆಗೆ ಈ ಲಸಿಕೆ ನೀಡಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಮಕ್ಕಳಿಗೆ ಲಸಿಕೆ ನೀಡಿ ಮಾತನಾಡಿ, ರೋಟಾವೈರಸ್‌ ಒಂದು ಅತೀ ಹೆಚ್ಚು ಹರಡಬಲ್ಲ ವೈರಾಣು. ಇದು ಮಕ್ಕಳಲ್ಲಿ ಭೇದಿಯಾಗಲು ಬಹು ಮುಖ್ಯ ಕಾರಣವಾಗಿದೆ. ರೋಟಾವೈರಸ್‌ ಸೋಂಕಿನ ಆರಂಭ ಕಡಿಮೆ ಪ್ರಮಾಣದ ಭೇದಿಯಿಂದ ಆಗುತ್ತದೆ. ಮುಂದೆ ಅದು ಗಂಭೀರ ಸ್ವರೂಪಕ್ಕೆ ತಿರುಗಬಹುದು. ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಶರೀರದಲ್ಲಿ ನೀರು ಮತ್ತು ಲವಣಾಂಶ ಕೊರತೆಯಾಗಬಹುದು. ಕೆಲವು ಸಂದರ್ಭಗಳಲ್ಲಿ ಮಕ್ಕಳು ಸಾವಿಗೀಡಾಗಬಹುದು. ಆದ್ದರಿಂದ ಸಾರ್ವಜನಿಕರು ತಮ್ಮ ಮಕ್ಕಳಿಗೆ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ಎಲ್ಲಾ ಲಸಿಕೆಗಳ ಜೊತೆಯಲ್ಲಿ ರೋಟಾವೈರಸ್‌ ಲಸಿಕೆ ಪಡೆಯುವಂತೆ ತಿಳಿಸಿದರು.

ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ತಾಯಿ ಎದೆ ಹಾಲು ಅತಿ ಅವಶ್ಯಕ. ಶಿಶುವಿಗೆ ಹುಟ್ಟಿನಿಂದ 6 ತಿಂಗಳವರೆಗೆ ತಾಯಿ ಎದೆ ಹಾಲು ಕುಡಿಸುವುದರಿಂದ ಶಿಶು ದೈಹಿಕವಾಗಿ ಮತ್ತು ಬೌದ್ಧಿಕವಾಗಿ ಬೆಳವಣಿಗೆ ಹೊಂದಲು ಸಾಧ್ಯ. 6 ತಿಂಗಳ ನಂತರ ಪೂರಕ ಪೌಷ್ಟಿಕ ಆಹಾರದ ಜೊತೆಗೆ ಎರಡು ವರ್ಷದವರೆಗೆ ತಾಯಿಯ ಎದೆ ಹಾಲು ಮುಂದುವರೆಸಬೇಕು. ಎಲ್ಲರೂ ತಪ್ಪದೇ ಶೌಚಾಲಯ ಬಳಸಬೇಕು ಎಂದು ಕರೆ ನೀಡಿದರು.

Advertisement

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ನಾರಾಯಣಪ್ಪ ಮಾತನಾಡಿ, ಪ್ರತಿದಿನ ಸುಮಾರು 300 ಮಕ್ಕಳು ಅತಿಸಾರ ಭೇದಿಯಿಂದ ಉಂಟಾಗುವ ನಿರ್ಜಲೀಕರಣದಿಂದ ಸಾವನ್ನಪ್ಪುತ್ತಿದ್ದಾರೆ. ರೋಟಾವೈರಸ್‌ನಿಂದ ಉಂಟಾಗುವ ಅತಿಸಾರ ಭೇದಿಯನ್ನು ಲಸಿಕೆಯಿಂದ ತಡೆಗಟ್ಟಬಹುದು ಎಂದು ಹೇಳಿದರು.

ಜಿಲ್ಲಾ ಆರ್‌.ಸಿ.ಎಚ್ ಅಧಿಕಾರಿ ಡಾ| ಲಕ್ಷ್ಮೀಕಾಂತ ಪ್ರಾಸ್ತಾವಿಕ ಮಾತನಾಡಿ, ಯಾದಗಿರಿ ಜಿಲ್ಲೆಯ ಎಲ್ಲಾ ತಾಲೂಕು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಬರುವ ಒಟ್ಟು 34,212 ಮಕ್ಕಳಿಗೆ ರೋಟಾವೈರಸ್‌ ಲಸಿಕೆಯನ್ನು ನೀಡುವ ಗುರಿ ಹೊಂದಲಾಗಿದೆ. ಅದಕ್ಕಾಗಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಒಟ್ಟು 10 ಮಾರಕ ರೋಗಗಳಾದ ಬಾಲ್ಯಕ್ಷಯ, ಪೋಲಿಯೋ, ಗಂಟಲುಮಾರಿ, ನಾಯಿ ಕೆಮ್ಮು, ಧನುರ್ವಾಯು, ಕಾಮಾಲೆ, ನಿಮೋನಿಯ, ದಡಾರ, ರುಬೆಲ್ಲಾ, ಅತಿಸಾರ ಭೇದಿ ವಿರುದ್ಧ ತಪ್ಪದೇ ಲಸಿಕೆ ಹಾಕಿಸುವಂತೆ ತಿಳಿಸಿದರು.

ಡಾ| ವೀರೇಶ, ಡಾ| ಹಣಮಂತರೆಡ್ಡಿ, ಸುದರ್ಶನ, ಗಂಗಾಧರ, ಆಶಾ ಕಾರ್ಯಕರ್ತೆಯರು, ತಾಯಂದಿರು ಭಾಗವಹಿಸಿದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿರಾದಾರ ಶಂಕರ ನಿರೂಪಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅರವಿಂದ ಕುಮಾರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next