ಯಾದಗಿರಿ: ಈ ಭಾಗದಲ್ಲಿ ಹೆಚ್ಚಿನ ರೈತರು ಭತ್ತ ಬೆಳೆದು ಕಟಾವು ಮಾಡಲು ಸಿದ್ಧಗೊಂಡಿದ್ದು ಯಂತ್ರಗಳು ಬೇರೆ ರಾಜ್ಯದಿಂದ ಬರಬೇಕಿರುವುದರಿಂದ ಚೆಕ್‌ಪೋಸ್ಟ್ ಗಳಲ್ಲಿ ತೊಂದರೆ ನೀಡಿದಂತೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಖಡಕ್ ಸೂಚನೆ ನೀಡಿದರು.
ಜಿಪಂ ಸಭಾಂಗಣದಲ್ಲಿ ಬುಧವಾರ ರಾಜ್ಯದಲ್ಲಿ ಕೋವಿಡ್-19 ಆವರಿಸಿರುವ ಕಾರಣ ಕೃಷಿ ಚಟುವಟಿಕೆ ಸುಗಮವಾಗಿ ನಡೆಯಲು ಯಾದಗಿರಿ ಜಿಲ್ಲೆಯಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ ರೈತರು ಪಕ್ಕದ ಆಂಧ್ರಪ್ರದೇಶ-ತೆಲಂಗಾಣ ರಾಜ್ಯಗಳಿಂದ ಕಟಾವು ಯಂತ್ರ ತರಿಸಿಕೊಳ್ಳುತ್ತಾರೆ. ಎಂತಹ ಸಂದಿಗ್ಧ ಪರಿಸ್ಥಿತಿಯಿದ್ದರೂ ರೈತ ಸಮುದಾಯಕ್ಕೆ ತೊಂದರೆಯಾದಲ್ಲಿ ಇಡೀ ದೇಶ ಸಂಕಷ್ಟಕ್ಕೆ ಸಿಲುಕಿದಂತೆ. ಈ ಹಿನ್ನೆಲೆಯಲ್ಲಿ ಕೃಷಿ ಪರಿಕರಗಳನ್ನು ರಾಜ್ಯದ ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ಮುಕ್ತವಾಗಿ ಸಾಗಾಣಿಕೆ ಮಾಡಲು ಅನುಮತಿ ನೀಡುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ಕೊಡಲಾಗಿದೆ. ಆದರೂ ಕೆಲವೆಡೆ ದೂರುಗಳು ಬರುತ್ತಿದ್ದು, ಜಿಲ್ಲಾ ಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ತೊಂದರೆ ನೀಡುತ್ತಿರುವವ ವಿರುದ್ಧ ಕ್ರಮ ಜರುಗಿಸುವಂತೆ ಸೂಚಿಸಿದರು.
ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿಯ ನಿರ್ಬಂಧವಿಲ್ಲ. ಕೃಷಿಗೆ ಪೂರಕವಾದ ಯಂತ್ರಗಳು, ಬೀಜ, ಗೊಬ್ಬರ, ಕ್ರಿಮಿನಾಶಕ ಮತ್ತು ಕೃಷಿ ಉತ್ಪನ್ನಗಳ ಮಾರಾಟ-ಸಾಗಾಣಿಕೆಗೆ ಸಂಪೂರ್ಣ ಅನುಮತಿ ನೀಡಲಾಗಿದ್ದು, ಅಂತಾರಾಜ್ಯ ನಿರ್ಬಂಧಗಳನ್ನು ತೆಗೆದು ಹಾಕಲಾಗಿದೆ ಎಂದು ತಿಳಿಸಿದರು.
ಮುಂಗಾರು ಬಿತ್ತನೆಗಾಗಿ ಬೀಜ-ರಸಗೊಬ್ಬರ ಪೂರೈಕೆಗೆ ಸರ್ಕಾರ ಸನ್ನದ್ಧವಾಗಿದ್ದು, ರೈತರು ಆತಂಕ ಪಡುವ ಅಗತ್ಯವಿಲ್ಲ. ಎಪಿಎಂಸಿ ಎಂದಿನಂತೆ ಕಾರ್ಯ ನಿರ್ವಹಿಸಬೇಕು. ಹಮಾಲರಿಗೆ ಪಾಸ್ ವಿತರಿಸಬೇಕು. ಇನ್ನು ತರಕಾರಿ, ಹಣ್ಣು-ಹಂಪಲುಗಳಿಗೆ ಮಾರುಕಟ್ಟೆ ಒದಗಿಸಲು ತೋಟಗಾರಿಕೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ರೈತರಿಂದ ದೂರುಗಳು ಬರುವ ಮುನ್ನವೇ ಅವರ ಸಮಸ್ಯೆ ಅರಿತು ಅಧಿಕಾರಿಗಳು ಕೆಲಸ ಮಾಡಬೇಕು. ನಿರ್ಲಕ್ಷé ವಹಿಸುವವರಿಗೆ ಶಿಕ್ಷೆ ತಪ್ಪಿದ್ದಲ್ಲ ಎಂದು ಎಚ್ಚರಿಕೆ ನೀಡಿದರು.
ರೈತ ಮುಖಂಡರಿಂದ ಜಿಲ್ಲೆಯ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದ ಸಚಿವರು ತೊಂದರೆಗಳು ಎದುರಾದಾಗಕೃಷಿ ಅಧಿಕಾರಿಗಳು ಅಥವಾ ಸಹಾಯವಾಣಿ ಸಂಪರ್ಕ ಮಾಡಬಹುದು ಎಂದು ಸಲಹೆ ನೀಡಿದರು. ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಕೋವಿಡ್ -19 ತಡೆಗೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು. ಜಂಟಿ ಕೃಷಿ ನಿರ್ದೇಶಕರು ಕೃಷಿ ಇಲಾಖೆ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ, ವಿಪ ಸದಸ್ಯ ಬಿ.ಜಿ. ಪಾಟೀಲ, ಜಿಲ್ಲಾ ಪಂಚಾಯತ ಅಧ್ಯಕ್ಷ ರಾಜಶೇಖರಗೌಡ ಪಾಟೀಲ್ ವಜ್ಜಲ್, ಜಿಪಂ ಉಪಾಧ್ಯಕ್ಷೆ ಗಿರಿಜಮ್ಮ ಎಸ್. ರೊಟ್ನಡಗಿ, ಜಿಪಂ ಸಿಇಒ ಶಿಲ್ಪಾ ಶರ್ಮಾ, ಎಸ್ಪಿ ಋಷಿಕೇಶ ಭಗವಾನ್ ಸೋನವಣೆ, ಎಡಿಸಿ ಪ್ರಕಾಶ್ ಜಿ.ರಜಪೂತ, ಎಸಿ ಶಂಕರಗೌಡ ಎಸ್.ಸೋಮನಾಳ ಸೇರಿದಂತೆ ರೈತ ಮುಖಂಡರು ಇದ್ದರು.