ಅನೀಲ ಬಸೂದೆ
ಯಾದಗಿರಿ: ನಿವೃತ್ತ ಶಿಕ್ಷಕ ವೆಂಕಪ್ಪ ಆಲೆಮನಿ ಅವರ ಇಬ್ಬರು ಪುತ್ರಿಯರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿ ಗಡಿಜಿಲ್ಲೆಯಲ್ಲಿ ಗಮನ ಸಳೆದಿದ್ದಾರೆ. ಒಬ್ಬ ಮಗಳು ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರಾಗಿ ಸರಕಾರಿ ಸೇವೆಗೆ ಆಯ್ಕೆಯಾದರೆ, ಈಗಾಗಲೇ ಸರಕಾರಿ ಸೇವೆಯಲ್ಲಿರುವ ಇನ್ನೊಬ್ಬ ಮಗಳು ಉತ್ತಮ ಸೇವಾ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನಿವೃತ್ತ ಶಿಕ್ಷಕ ವೆಂಕಪ್ಪ ಆಲೆಮನಿ ಅವರ ಎರಡನೇ ಪುತ್ರಿ ಚೇತನಾ ಕರ್ನಾಟಕ ಲೋಕ ಸೇವಾ ಆಯೋಗದ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರಾಗಿ ಆಯ್ಕೆಯಾಗಿದ್ದಾರೆ. ಹಿರಿಯ ಪುತ್ರಿ ಪ್ರತಿಭಾ ವಸತಿ ನಿಲಯ ಮೇಲ್ವಿಚಾರಕಿಯಾಗಿ ಸೇವೆ ಸಲ್ಲಿಸಿ ರಾಜ್ಯ ಮಟ್ಟದ ಉತ್ತಮ ವಾರ್ಡನ್ ಪ್ರಶಸ್ತಿ ಪಡೆದಿದ್ದಾರೆ.
ಮೂಲತಃ ಗುರುಮಠಕಲ್ ತಾಲೂಕು ಚಿಂತನಹಳ್ಳಿ ಗ್ರಾಮದವರಾದ ವೆಂಕಪ್ಪ ಆಲೆಮನಿ ಸೈದಾಪುರದ ವಿದ್ಯಾವರ್ಧಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿಯೇ ಇಬ್ಬರು ಪುತ್ರಿಯರು ಈಗ ಸಾಧನೆ ಮೆಟ್ಟಿಲು ಹತ್ತಿದ್ದಾರೆ. ಚೇತನಾ ಆಲೆಮನಿ ಸೈದಾಪುರದಲ್ಲಿ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದಾರೆ. ರಾಯಚೂರು ಎಲ್‌ವಿಡಿ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಮುಗಿಸಿ ದಾವಣಗೆರೆಯಲ್ಲಿ ಬಿಇ ಹಾಗೂ ತುಮಕೂರಿನಲ್ಲಿ ಎಂಟೆಕ್ ಪೂರ್ಣಗೊಳಿಸಿ ಸುಮಾರು 6 ವರ್ಷಗಳಿಂದ ಕಲಬುರಗಿ ಕೆಬಿಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2017ರ ಕೆಪಿಎಸ್‌ಸಿ ಪರೀಕ್ಷೆ ಎದುರಿಸಿ ಈಗ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರಾಗಿ ಆಯ್ಕೆಯಾಗಿದ್ದಾರೆ.
ಹಿರಿಯ ಮಗಳು ಪ್ರತಿಭಾ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮೇಲ್ವಿಚಾರಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಲಬುರಗಿ ಜಿಲ್ಲೆ ಆಳಂದ ತಾಲೂಕು ಬೆಳಮಗಿಯಲ್ಲಿ 7 ವರ್ಷ ಸೇವೆ ಸಲ್ಲಿಸಿದ್ದಾರೆ. ಇದೀಗ ಕಳೆದ 2 ತಿಂಗಳಿನಿಂದ ಯಾದಗಿರಿ ಜಿಲ್ಲೆ ವಡಗೇರಾ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮೇಲ್ವಿಚಾರಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಪರಿಶ್ರಮ ಹಾಗೂ ಸೇವೆ ಪರಿಗಣಿಸಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ರಾಜ್ಯ ಮಟ್ಟದ ಉತ್ತಮ ವಾರ್ಡನ್ ಪ್ರಶಸ್ತಿ ನೀಡಿ ಗೌರವಿಸಿದೆ. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಂದ ಮಂಗಳವಾರವಷ್ಟೇ ಪ್ರಶಸ್ತಿ ಸ್ವೀಕರಿಸಿದ್ದಾರೆ. ಒಂದೇ ಕುಟುಂಬದಲ್ಲಿ ಎರಡು ರತ್ನಗಳು ಹೊಳೆಯುತ್ತಿರುವುದು ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.