ಯಾದಗಿರಿ: ಸರ್ಕಾರ ರಾಜ್ಯದಲ್ಲಿ ಮದ್ಯ ಪಾನವನ್ನು ಸಂಪೂರ್ಣ ನಿಷೇಧಿಸಬೇಕು ಎಂದು ರಾಜ್ಯ ರೈತ ಸಂಘ ಮತ್ತು ವೀರಭಾರತಿ ಪ್ರತಿಷ್ಠಾನದ ಜಂಟಿಯಾಗಿ ಆಗ್ರಹಿಸಿದ ಮನವಿಯನ್ನು ವಿವಿಧ ಮಠಾಧೀಶರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.
ಜಿಲ್ಲಾಧಿಕಾರಿಗಳನ್ನು ಭೇಟಿಯಾದ ಉಭಯ ಸಂಘಟನೆ ಪ್ರಮುಖರು ಮತ್ತು ಗುರುಮಠಕಲ್ ಖಾಸಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ, ಶಹಾಪುರ ತಾಲೂಕು ಮದ್ದರಕಿ ಹಿರೇಮಠದ ಶೀಲವಂತ ಶಿವಾಚಾರ್ಯ ಸ್ವಾಮೀಜಿ, ಸೊಪ್ಪಿ ಬಸವೇಶ್ವರ ಸಂಸ್ಥಾನ ಮಠದ ಚನ್ನವೀರ ದೇವರು ಹಾಗೂ ರಾಮಕೃಷ್ಣ ಆಶ್ರಮದ ಪಿ. ವೇಣುಗೋಪಾಲ ಜೀ ಮನವಿ ಸಲ್ಲಿಸಿದರು.
ಗುಜರಾತ್‌ನಲ್ಲಿ ಇದುವರೆಗೆ ಮದ್ಯ ಮಾರಾಟ ಆರಂಭಿಸಿಲ್ಲ. ಹೀಗಾಗಿ ಅಲ್ಲಿ ಮದ್ಯ ಮಾರಾಟವಿಲ್ಲದೇ ಸರ್ಕಾರ ನಡೆಸಲು ಸಾಧ್ಯವಿದ್ದರೆ ರಾಜ್ಯದಲ್ಲಿ ಏಕೆ ಸಾಧ್ಯವಿಲ್ಲ? ಕೋವಿಡ್ ಬೀಗಮುದ್ರೆ ತೆರವುಗೊಳಿಸಿದ ನಂತರ ಉಂಟಾಗುವ ಅನಾಹುತಗಳನ್ನು ತಡೆಯಲು ರ್‍ಯಾಂಡಮ್ ಟೆಸ್ಟ್ ಸೇರಿದಂತೆ ವ್ಯಾಪಕ ಮುಂಜಾಗ್ರತಾ ಕ್ರಮ ಕೈಗೊಳ್ಳುಬೇಕು ಎಂದು ಮನವಿ ಮಾಡಲಾಯಿತು.
ಲಾಕ್‌ಡೌನ್ 2ನೇ ಅವಧಿ ಮುಗಿಯುವುದಕ್ಕೂ ಮುನ್ನವೇ ರಾಜ್ಯ ಸರ್ಕಾರ ಮದ್ಯ ಮಾರಾಟಕ್ಕೆ ನಿರ್ಣಯ ಕೈಗೊಂಡಿರುವುದು ನಿಜಕ್ಕೂ ಸೋಜಿಗ ಮೂಡಿಸಿತು. ಮದ್ಯ ಮಾರಾಟ ಆರಂಭವಾಗುತ್ತಿದ್ದಂತೆಯೇ ರಾಜ್ಯಾದ್ಯಂತ ಅಪರಾಧಗಳ ಸಂಖ್ಯೆ ಏರುಮುಖ ಕಂಡಿರುವುದು ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳೇ ಸಾಕ್ಷಿಯಾಗಿದೆ ಎಂದು ಹೇಳಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಕಾಂತ ಪಾಟೀಲ ಮದ್ದರಕಿ, ವೀರಭಾರತಿ ಪ್ರತಿಷ್ಠಾನ ಅಧ್ಯಕ್ಷ ವೈಜನಾಥ ಹಿರೇಮಠ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ಘೂಳಿ, ಆರೋಗ್ಯ, ವೈದ್ಯಕೀಯ ಶಿಕ್ಷಣ ಇಲಾಖೆ ಒಳ, ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ವಿಶ್ವಾರಾಧ್ಯ ಯಮೋಜಿ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಇದ್ದರು.