ಯಾದಗಿರಿ: ಎಲ್ಲೆಡೆ ಕೊರೊನಾದಿಂದ ಆತಂಕ ಆವರಿಸಿದೆ. ಆರೋಗ್ಯ ಇಲಾಖೆ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಮತ್ತು ಜಿಲ್ಲಾ ಲೆಕ್ಕಪತ್ರ ವ್ಯವಸ್ಥಾಪಕರ ಹುದ್ದೆಗಳಿಗೆ ತರಾತುರಿಯಲ್ಲಿ ಭರ್ತಿ ಮಾಡಲು ಹುನ್ನಾರ ನಡೆಸಿರುವುದನ್ನು ಸದ್ಯದ ಪರಿಸ್ಥಿತಿಯಲ್ಲಿ ತಡೆದು ನಂತರ ಅರ್ಹರನ್ನು ಆಯ್ಕೆ ಮಾಡಿಕೊಳ್ಳುವಂತೆ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಆಗ್ರಹಿಸಿದೆ.
ಈ ಕುರಿತು ಜಿಲ್ಲಾಧಿಕಾರಿಗಳು, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಪ್ರತ್ಯೇಕ ಮನವಿಗಳು ಸಲ್ಲಿಸಿದ ಸೇನೆ ಕಾರ್ಯಕರ್ತರು, ಜಿಲ್ಲಾ ಆರೋಗ್ಯ ಇಲಾಖೆ ಎರಡು ಪ್ರಮುಖ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಜಿಲ್ಲಾ ಆರೋಗ್ಯ ಸಂಘದ ಸದಸ್ಯ ಕಾರ್ಯದರ್ಶಿಗಳು ತರಾತುರಿಯಲ್ಲಿ ಪ್ರಕಟಣೆ ನೀಡಿರುವುದು ಅನೇಕ ಗುಮಾನಿಗಳಿಗೆ ಎಡೆ ಮಾಡಿಕೊಟ್ಟಿದೆ.
ಇಡಿ ಜಗತ್ತು ಕೊರೊನಾ ಮಹಾಮಾರಿ ವಿರುದ್ಧ ಹೋರಾಡುತ್ತ ಎಲ್ಲ ಕೆಲಸ ಕಾರ್ಯ ಮುಂದೂಡುತ್ತಿದೆ. ಇದಲ್ಲದೇ ತಾಂತ್ರಿಕ ಮತ್ತು ಅವಶ್ಯಕ ಸಿಬ್ಬಂದಿ ನೇಮಕ ಮಾಡಿಕೊಂಡಿದ್ದರೆ ಅದಕ್ಕೆ ಯಾವುದೇ ಆಕ್ಷೇಪಣೆ ಇರುತ್ತಿರಲಿಲ್ಲ. ನಿಯಮಾನುಸಾರ 15 ದಿನಗಳ ಕಾಲಾವಕಾಶ ನೀಡಬೇಕು. ಆದರೆ ಇಲ್ಲಿ ಕೇವಲ 5 ದಿನಗಳ ಕಾಲಾವಕಾಶ ನೀಡಿದ್ದಾರೆ. ಇದರಲ್ಲಿ ಈಗಾಗಲೇ 2 ದಿನ ಮುಗಿದು ಹೋಗಿದೆ. ಇಂತಹ ಅಸಂಬದ್ಧ ಕೆಲಸ ಜಿಲ್ಲೆಗೆ ಅಗತ್ಯವಾಗಿದೆಯೇ ಎಂದು ಪ್ರಶ್ನಿಸಿದರು.
ಜಿಲ್ಲೆಗೆ ಕೆಟ್ಟ ಹೆಸರು ತರಲು ಯತ್ನಿಸುತ್ತಿರುವ ಅಧಿಕಾರಿಗೆ ಸರಿಯಾಗಿ ಪಾಠ ಕಲಿಸಿ ಮತ್ತೆ ಇಂತಹ ತಪ್ಪು ಮಾಡದಂತೆ ಎಚ್ಚರಿಸಬೇಕು ಎಂದು ಆಗ್ರಹಿಸಿದರು. ಇಲ್ಲವಾದಲ್ಲಿ ಹಂತ ಹಂತವಾಗಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಜಿಲ್ಲಾದ್ಯಕ್ಷ ಕಾಶಿನಾಥ ನಾಟೇಕರ್ ಮನವಿ ಸಲ್ಲಿಸಿದರು. ಅಜಯ ಯಳಸಂಗಿಕರ್, ಗುರು ನಾಟೇಕರ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಬಂದಪ್ಪ ಬಾಚವಾರ, ರಮೇಶ ಹುಂಡೇಕಲ್ ಇದ್ದರು.