ಯಾದಗಿರಿ: ಜಿಲ್ಲೆಯ ಹಲವು ಗ್ರಾಮಗಳಲ್ಲಿ ಅಕ್ರಮ ಮದ್ಯ ಸಂಗ್ರಹ ಮತ್ತು ಮಾರಾಟ ನಡೆಯುತ್ತಿದ್ದು, ಕೂಡಲೇ ಅಂತವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಫೋನ್ ಇನ್ ಕಾರ್ಯಕ್ರಮದಲ್ಲಿ ನಾಗರಿಕರೊಬ್ಬರು ಕೇಳಿದ ಪ್ರಶ್ನೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ| ವೇದಮೂರ್ತಿ ಉತ್ತರಿಸಿದರು.
ಜಿಲ್ಲಾ ಪೊಲೀಸ್ ಕಾರ್ಯಾಲಯದಲ್ಲಿ ಬುಧವಾರ ಸಾರ್ವಜನಿಕರು ಹಾಗೂ ಪೊಲೀಸ್ ಇಲಾಖೆ ಮಧ್ಯೆ ಉತ್ತಮ ಸಂಪರ್ಕ ಬೆಳೆಸುವ ನಿಟ್ಟಿನಲ್ಲಿ ಉತ್ತಮ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಸುಧಾರಿಸಲು ನಡೆಸಿದ ಫೋನ್ ಇನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಕ್ರಮ ಮದ್ಯದ ಬಗ್ಗೆ ಈಗಾಗಲೇ ಗಂಭೀರವಾಗಿ ಚರ್ಚಿಸಿದ್ದು, ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಾರ್ವಜನಿಕರಿಂದ ಒಟ್ಟು 12 ಕರೆಗಳು ಬಂದಿದ್ದು, ಗ್ರಾಮಗಳಲ್ಲಿ ಅಕ್ರಮ ಮದ್ಯ, ಸಾರಾಯಿ ಸೇಂದಿ ಮಾರಾಟ, ಜೂಜಾಟ ಬಗ್ಗೆ ಕ್ರಮ ಜರುಗಿಸುವಂತೆ ಸಾರ್ವಜನಿಕರು ದೂರು ನೀಡಿದ್ದು, ಈ ಬಗ್ಗೆ ಸಂಬಂಧಪಟ್ಟ ಠಾಣಾಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದರು. ಪೊಲೀಸ್ ಇಲಾಖೆಯ ಕೆಲವೊಂದು ಅಧಿಕಾರಿ ಹಾಗೂ ಸಿಬ್ಬಂದಿ ಜನರೊಂದಿಗೆ ಸರಿಯಾಗಿ ವರ್ತನೆ ಮಾಡುತ್ತಿಲ್ಲ ಎಂದು ಕೆಲವರು ದೂರಿದರು.
ಜನಸ್ನೇಹಿ ಪೊಲೀಸ್ ವ್ಯವಸ್ಥೆ ಸರಿಯಾಗಿ ಜಾರಿ ಮಾಡುವಂತೆ ಸಾರ್ವಜನಿಕರ ಮನವಿಯ ಮೇರೆಗೆ ಡಿವೈಎಸ್‌ಪಿ ಅವರ ಅಧೀನದ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಸರಿಯಾದ ಸೂಚನೆ ನೀಡಬೇಕು. ಜಿಲ್ಲೆಯಲ್ಲಿ ಸಾರ್ವಜನಿಕರೊಂದಿಗೆ ಉತ್ತಮವಾಗಿ ವರ್ತನೆ ಮಾಡಬೇಕು. ಈ ಮೂಲಕ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಸರಿಯಾದ ರೀತಿಯಲ್ಲಿ ಜಾರಿ ಮಾಡುವಂತೆ ಸೂಚನೆಯನ್ನು ಸ್ಥಳದಲ್ಲಿಯೇ ನೀಡಲಾಯಿತು.
ಅಲ್ಲದೆ ಸಂಚಾರ ವ್ಯವಸ್ಥೆಯನ್ನು ಕಾಪಾಡುವುದು, ಗ್ರಾಮದಲ್ಲಿ ಕಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವುದು, ಗ್ರಾಮದಲ್ಲಿ ಎಸ್.ಸಿ., ಎಸ್.ಟಿ ಸಭೆ ಕೈಗೊಳ್ಳುವುದು, ಸಾಲ ನೀಡುವ ವಂಚನೆ, ಗ್ರಾಮಗಳಲ್ಲಿ ಹುಡುಗರು ಎರಡು ಮದುವೆ ಮಾಡಿಕೊಂಡು ಗ್ರಾಮದಲ್ಲಿರುವ ಹುಡುಗಿಯರಿಗೆ ತೊಂದರೆ ಕೊಡುತ್ತಿರುವ ಕುರಿತು, ಅಲ್ಲದೇ ಬೀಟ್ ಸಿಬ್ಬಂದಿಯವರು ಗ್ರಾಮಕ್ಕೆ ಸರಿಯಾಗಿ ಭೇಟಿ ನೀಡುತ್ತಿಲ್ಲ.
ಹೀಗೆ ಕೆಲ ಅಹವಾಲುಗಳು ಫೋನ್ ಇನ್ ಕಾರ್ಯಕ್ರಮದಲ್ಲಿ ಸ್ವೀಕೃತವಾಯಿತು. ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು ಸಂಬಂಧಪಟ್ಟ ವ್ಯಾಪ್ತಿಯ ಪೊಲೀಸ್ ಠಾಣೆಯ ಎಲ್ಲ ಪಿ.ಐ/ಪಿ.ಎಸ್.ಐ ಅವರುಗಳಿಗೆ ಸೂಕ್ತ ಸೂಚನೆ ನೀಡಲಾಗುವುದು. ಖುದ್ದಾಗಿ ಸಮಸ್ಯೆ ಪರಿಹರಿಸಲು ಜಿಲ್ಲಾ ಮಟ್ಟದಲ್ಲಿ ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.