Advertisement

ಪಟ್ಟಿಯಿಂದ ಕೈಬಿಟ್ಟವರ ದಾಖಲೆ ಸಂಗ್ರಹಿಸಿಟ್ಟುಕೊಳ್ಳಿ

12:37 PM Feb 06, 2020 | Naveen |

ಯಾದಗಿರಿ: ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳ ಕರಡು ಮತದಾರ ಪಟ್ಟಿ ಪ್ರಕಟಿಸಿದ ನಂತರ ಅಂದರೆ ಕಳೆದ ಡಿಸೆಂಬರ್‌ 16ರಿಂದ ಜನವರಿ 28ರ ವರೆಗೆ ಬಂದಿರುವ ಹಕ್ಕು ಮತ್ತು ಆಕ್ಷೇಪಣೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಅನರ್ಹ ಮತದಾರರನ್ನು ತೆಗೆದು ಹಾಕಿರುವ ಬಗ್ಗೆ ದಾಖಲೆ ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಜಿಲ್ಲಾ ಮತದಾರ ಪಟ್ಟಿ ವೀಕ್ಷಕ ಡಾ|
ಜೆ. ರವಿಶಂಕರ ಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಂತಿಮ ಮತದಾರ ಪಟ್ಟಿ ಸಿದ್ಧತೆ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಬುಧವಾರ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಕರಡು ಮತದಾರ ಪಟ್ಟಿ ಪ್ರಕಟ ನಂತರ ಒಟ್ಟಾರೆ ಜಿಲ್ಲೆಯಲ್ಲಿ ಎಲ್ಲ ನಮೂನೆ ಅರ್ಜಿಗಳ ಮೂಲಕ 15,558 ಹಕ್ಕು ಮತ್ತು ಆಕ್ಷೇಪಣೆಗಳು ಬಂದಿವೆ. ಈ ಪೈಕಿ 12,931 ಅರ್ಜಿಗಳನ್ನು ಅಂಗೀಕರಿಸಿದ್ದು, 882 ಅರ್ಜಿಗಳು ತಿರಸ್ಕೃತಗೊಂಡಿವೆ. ಇವುಗಳಲ್ಲಿ ವಿವಿಧ ಕಾರಣಗಳಿಂದ ಮತದಾರ ಪಟ್ಟಿಯಿಂದ ಕೈಬಿಟ್ಟವರ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಅಂತವರ ಅಗತ್ಯ ದಾಖಲೆ ಸಂಗ್ರಹಿಸಿಟ್ಟುಕೊಂಡರೆ ಚುನಾವಣಾ ಸಂದರ್ಭದಲ್ಲಿ ಯಾವುದೇ ಗೊಂದಲಗಳು ಕಂಡುಬರುವುದಿಲ್ಲ ಮತ್ತು ಚುನಾವಣಾ ಆಯೋಗದಿಂದ ಬರುವ ಅಧಿಕಾರಿಗಳಿಗೂ ಮಾಹಿತಿ ನೀಡಲು ಸುಲಭವಾಗುತ್ತದೆ ಎಂದು ಸಲಹೆ ನೀಡಿದರು.

ಚುನಾವಣಾ ಆಯೋಗದ ನಿರ್ದೇಶನದಂತೆ ಅರ್ಹತಾ ದಿನಾಂಕ: 01.01.2020ರಂತೆ ವಿಧಾನಸಭಾ ಕ್ಷೇತ್ರಗಳ ಭಾವಚಿತ್ರವಿರುವ ಕರಡು ಮತದಾರ ಪಟ್ಟಿ ವಿಶೇಷ ಪರಿಷ್ಕರಣೆ ನಡೆಸಲಾಗಿದೆ. ಅಂತಿಮ ಮತದಾರ ಪಟ್ಟಿಯನ್ನು ಫೆ. 7ರಂದು ಪ್ರಕಟಿಸಲಾಗುವುದು. ಮತದಾರ ಪಟ್ಟಿ ಪರಿಷ್ಕರಣೆ ನಿರಂತರವಾಗಿರಲಿದ್ದು, ಚುನಾವಣೆ ನಾಮಪತ್ರಗಳ ಸ್ವೀಕೃತಿ ಕೊನೆ ದಿನಾಂಕದವರೆಗೆ ಹೆಸರು ಸೇರ್ಪಡೆಗೆ ಅವಕಾಶ ಇರುತ್ತದೆ ಎಂದು ಸ್ಪಷ್ಟಪಡಿಸಿದರು.

ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಮಾತನಾಡಿ, ಕರಡು ಮತದಾರ ಪಟ್ಟಿ ಪ್ರಕಟ ನಂತರ ಅರ್ಜಿ ನಮೂನೆ 6 (ಸೇರ್ಪಡೆ)ರಲ್ಲಿ 9,506 ಅರ್ಜಿಗಳು ಬಂದಿವೆ. ಈ ಪೈಕಿ 7,867 ಅರ್ಜಿಗಳನ್ನು ಅಂಗೀಕರಿಸಲಾಗಿದ್ದು, 545 ಅರ್ಜಿಗಳು ತಿರಸ್ಕೃತಗೊಂಡಿವೆ. ಅರ್ಜಿ ನಮೂನೆ 7 (ಆಕ್ಷೇಪಣೆ)ರಲ್ಲಿ 3,177 ಅರ್ಜಿಗಳು ಬಂದಿವೆ. ಈ ಪೈಕಿ 2,911 ಅರ್ಜಿಗಳನ್ನು ಅಂಗೀಕರಿಸಿದ್ದು, 120 ಅರ್ಜಿಗಳು ತಿರಸ್ಕೃತಗೊಂಡಿವೆ. ನಮೂನೆ 8 (ತಿದ್ದುಪಡಿ)ರಲ್ಲಿ 2,028 ಅರ್ಜಿಗಳು ಬಂದಿವೆ. ಈ ಪೈಕಿ 1,527 ಅರ್ಜಿಗಳನ್ನು ಅಂಗೀಕರಿಸಿದ್ದು, 196 ಅರ್ಜಿಗಳು ತಿರಸ್ಕೃತಗೊಂಡಿವೆ.

ನಮೂನೆ 8ಎ (ವರ್ಗಾವಣೆ) ರಲ್ಲಿ 847 ಅರ್ಜಿಗಳು ಬಂದಿವೆ. ಈ ಪೈಕಿ 626 ಅಂಗೀಕರಿಸಿದ್ದು, 21 ಅರ್ಜಿಗಳು ತಿರಸ್ಕೃತಗೊಂಡಿವೆ ಎಂದು ಮಾಹಿತಿ ನೀಡಿದರು. ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ, ಸಹಾಯಕ ಆಯುಕ್ತ ಶಂಕರಗೌಡ ಎಸ್‌. ಸೋಮನಾಳ, ತಹಶೀಲ್ದಾರರಾದ ಚನ್ನಮಲ್ಲಪ್ಪ ಘಂಟಿ, ಸಂಗಮೇಶ ಜಿಡಗೆ, ಸುರೇಶ ಅಂಕಲಗಿ, ನಿಂಗಣ್ಣ ಎಸ್‌.ಬಿರಾದಾರ, ವಿನಯಕುಮಾರ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ ಹುಲ್‌ಕಲ್‌, ಚುನಾವಣೆ ಶಾಖೆ ಶಿರಸ್ತೇದಾರ್‌ ಜಾಯ್‌ ವಿಲ್ಸನ್‌, ಖಲೀಲ್‌ಸಾಬ್‌, ಶಿಲ್ಪಾ ಪಾಟೀಲ, ಭೀಮೇಶಿ, ಹರೀಶಕುಮಾರ ಸಭೆಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next