Advertisement

ಯೋಗ ದಿನ ಅರ್ಥಪೂರ್ಣ ಆಚರಿಸಿ

11:17 AM Jun 14, 2019 | Naveen |

ಯಾದಗಿರಿ: ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜೂನ್‌ 21ರಂದು ಆಯೋಜಿಸುವ ಅಂತಾರಾಷ್ಟ್ರೀಯ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುವಂತೆ ಅಪರ ಜಿಲ್ಲಾಕಾರಿ ಪ್ರಕಾಶ ಜಿ. ರಜಪೂತ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಗುರುಮಠಕಲ್ ತಾಲೂಕಿನ ಚಂಡರಕಿಯಲ್ಲಿ ಗ್ರಾಮ ವಾಸ್ತವ್ಯ ಮಾಡಲು ಅದೇ ದಿನ ಜಿಲ್ಲೆಗೆ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯ ಪೂರ್ವ ಸಿದ್ಧತೆಗೆ ಹೆಚ್ಚು ಒತ್ತು ನೀಡಿದರೂ ಯೋಗ ದಿನಾಚರಣೆಗೆ ಯಾವುದೇ ರೀತಿಯ ತೊಂದರೆ ಉಂಟಾಗಬಾರದು ಎಂದರು. ಎಲ್ಲಾ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ, ಜಿಲ್ಲಾಡಳಿತ, ಆಯುಷ್‌ ಇಲಾಖೆ ಹಾಗೂ ಪತಂಜಲಿ ಯೋಗ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿರುವ ಯೋಗ ದಿನಾಚರಣೆಯನ್ನು ಯಶಸ್ವಿಗೊಳಿಸಬೇಕು ಎಂದು ಸೂಚಿಸಿದರು.

ಯೋಗ ದಿನಾಚರಣೆಯಂದು ಬೆಳಗ್ಗೆ 6:45 ಗಂಟೆಯೊಳಗೆ ಎಲ್ಲಾ ಅಧಿಕಾರಿ, ಸಿಬ್ಬಂದಿಗಳು ಕಾಲೇಜು ಮೈದಾನದಲ್ಲಿ ಹಾಜರಿರಬೇಕು. ಬೆಳಗ್ಗೆ 6:45ರಿಂದ 7 ಗಂಟೆಯವರೆಗೆ ಧ್ಯಾನ, ಭಾರತ ಸರ್ಕಾರದ ಮಾರ್ಗಸೂಚಿಯಂತೆ ಬೆಳಗ್ಗೆ 7ರಿಂದ 7:55 ಗಂಟೆಯವರೆಗೆ ಯೋಗ ಮಾಡಬೇಕು. ನಂತರ 8ರಿಂದ 8:30 ಗಂಟೆಯವರೆಗೆ ವೇದಿಕೆ ಕಾರ್ಯಕ್ರಮ ನಡೆಸಬೇಕು. ತದನಂತರ 8:30ರಿಂದ ಉಪಾಹಾರ ವಿತರಿಸಬೇಕು. ಯೋಗ ಕಾರ್ಯಕ್ರಮಕ್ಕಾಗಿ ನಿಗದಿಪಡಿಸಿದ ಸಮಯದಲ್ಲಿ ವ್ಯತ್ಯಾಸವಾಗಬಾರದು ಎಂದು ನಿರ್ದೇಶಿಸಿದರು.

ದಿನಾಚರಣೆ ಪ್ರಯುಕ್ತ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನವನ್ನು ಸ್ವಚ್ಛಗೊಳಿಸಿ, ಮೈದಾನದಲ್ಲಿ ಕಸದ ತೊಟ್ಟಿಗಳು, ಕುಡಿಯುವ ನೀರು ಹಾಗೂ ವೇದಿಕೆ ಮೇಲೆ ಗಣ್ಯರಿಗಾಗಿ ಆಸನಗಳ ವ್ಯವಸ್ಥೆ ಮಾಡುವಂತೆ ನಗರಸಭೆ ಪೌರಾಯುಕ್ತ ರಮೇಶ ಸುಣಗಾರ ಅವರಿಗೆ ಸೂಚಿಸಿದರು.

ಅಂದು ಮಳೆ ಬಂದರೆ ನಗರದ ಯಾವುದಾದರೂ ಛಾವಣಿ ಇರುವ ಸ್ಥಳವನ್ನು ಗುರುತಿಸಿ, ಕಾರ್ಯಕ್ರಮ ನಡೆಸಲು ಸಿದ್ಧರಿರಬೇಕು. ದಿನಾಚರಣೆಯ ಅಂಗವಾಗಿ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಯೋಗ ಸ್ಪರ್ಧೆ, ನಿಬಂಧ ಸ್ಪರ್ಧೆ ಆಯೋಜಿಸಬೇಕು. ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿದ್ಯಾರ್ಥಿಗಳು, ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು, ನಗರದ ಎಲ್ಲಾ ಶಾಲೆಯ ಮಕ್ಕಳು ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ತಿಳಿಸಿದರು. ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜೂನ್‌ 20ರಂದು ಬೆಳಗ್ಗೆ 8:00 ಗಂಟೆಗೆ ಯಾದಗಿರಿ ನಗರದ ಸ್ಟೇಷನ್‌ ಏರಿಯಾದಲ್ಲಿ ಹಾಗೂ ಬೆಳಗ್ಗೆ 10.30 ಗಂಟೆಗೆ ನಗರ ಪ್ರದೇಶದಲ್ಲಿ ಜಾಗೃತಿ ಜಾಥಾ ನಡೆಸುವಂತೆ ಅಪರ ಜಿಲ್ಲಾಧಿಕಾರಿಗಳು ಸೂಚಿಸಿದರು.

Advertisement

ಸಭೆಯಲ್ಲಿ ಜಿಲ್ಲಾ ಆಯುಷ್‌ ಅಧಿಕಾರಿ ಡಾ| ಪ್ರಕಾಶ ಎಚ್. ರಾಜಾಪುರ, ಡಾ| ರಮೇಶ ಸಜ್ಜನ್‌, ಡಾ| ಶಿವಲಿಂಗಪ್ಪ ಪಾಟೀಲ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿರಾದಾರ ಶಂಕರ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಕೆ. ವಿಶ್ವನಾಥ, ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಅನಿಲ ಗುರೂಜಿ, ಬಸವ ಯೋಗ ಸಮಿತಿ ಚಾರಿಟೆಬಲ್ ಟ್ರಸ್ಟ್‌ನ ಸೋಮನಾಥರೆಡ್ಡಿ ಕಣೇಕಲ್, ಸ್ಕೌಟ್ಸ್‌ ಮತ್ತು ಗೈಡ್ಸ್‌ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಥ್ಲೆಟಿಕ್ಸ್‌ ತರಬೇತುದಾರ ದೊಡ್ಡಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next