ಯಾದಗಿರಿ: ಜಿಲ್ಲಾದ್ಯಂತ ಅ. 27ರಿಂದ 29ರವರೆಗೆ ದೀಪಾವಳಿ ಆಚರಿಸಲಿದ್ದು, ಪರವಾನಗಿ ಇಲ್ಲದೆ ಪಟಾಕಿ ಹಾಗೂ ಇನ್ನಿತರ ಸ್ಫೋಟಕ ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ದೀಪಾವಳಿ ಪ್ರಯುಕ್ತ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ಮಾರಾಟಗಾರರು ಪಟಾಕಿ ಹಾಗೂ ಇನ್ನಿತರ ಸ್ಫೋಟಕ ವಸ್ತುಗಳ ಬಳಕೆಯಲ್ಲಿ ಮುಂಜಾಗ್ರತಾ ಕ್ರಮ ಅನುಸರಿಸಬೇಕು ಎಂದು ತಿಳಿಸಿದರು.
ಪಟಾಕಿ ಮಾರಾಟಗಾರರು ಹಾಗೂ ಸಾರ್ವಜನಿಕರು ಸುಪ್ರೀಂಕೋರ್ಟ್ ನಿಗದಿಪಡಿಸಿರುವ ಪರಿಸರ ಸ್ನೇಹಿ ಪಟಾಕಿಗಳನ್ನು ಉಪಯೋಗಿಸುವ ಮೂಲಕ ಪರಿಸರ ಸ್ನೇಹಿ ದೀಪಾವಳಿ ಆಚರಿಸುವಂತೆ ಮನವಿ ಮಾಡಿದರು.
ಸುಪ್ರೀಂಕೋರ್ಟ್ ಆದೇಶದಂತೆ ಸಾರ್ವಜನಿಕರು ಪಟಾಕಿಗಳನ್ನು ರಾತ್ರಿ 8ರಿಂದ ರಾತ್ರಿ 10:00 ಗಂಟೆಯವರೆಗೆ ಮಾತ್ರ ಸ್ಫೋಟಿಸಬಹುದು. ಸ್ಫೋಟಕ ಪಟಾಕಿಗಳನ್ನು ಅಧಿಕೃತವಾಗಿ ಪರವಾನಿಗಿ ಪಡೆದ ಮಾರಾಟಗಾರರು ಮಾತ್ರ ಮಾರಾಟ ಮಾಡಬೇಕು ಮತ್ತು ಅ ಧಿಕೃತವಾಗಿ ಪರವಾನಿಗಿ ಪಡೆದವರ ಸ್ಫೋಟಕ ಪಟಾಕಿಗಳನ್ನು ಆದೇಶಾನುಸಾರ ಮಾತ್ರ ಮಾರಾಟ ಮಾಡಬೇಕು. ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಮತ್ತು ಪಟಾಕಿ ಸಿಡಿಸಿದ ನಂತರದ ಘನ ತ್ಯಾಜ್ಯ ವಸ್ತುಗಳಿಂದ ಮಾಲಿನ್ಯ ಉಂಟಾಗುವುದರಿಂದ ಸರಣಿ ಸ್ಫೋಟಕ ಪಟಾಕಿಗಳನ್ನು ತಯಾರಿಸುವುದು, ಮಾರಾಟ ಮಾಡುವುದು ಮತ್ತು ಬಳಸುವುದನ್ನು ನಿಷೇ ಧಿಸಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಸಣ್ಣವೆಂಕಟೇಶ ಸನಬಾಳ ಮಾತನಾಡಿ, ಪಟಾಕಿ ಹಾಗೂ ಇನ್ನಿತರ ಸ್ಫೋಟಕ ವಸ್ತುಗಳನ್ನು ಬಳಸುವಾಗ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳನ್ನು ವಿವರಿಸಿದರು.
ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ. ರಜಪೂತ, ಸಹಾಯಕ ಆಯುಕ್ತರಾದ ಶಂಕರಗೌಡ ಎಸ್. ಸೋಮನಾಳ, ನಗರಸಭೆ ಪೌರಾಯುಕ್ತ ರಮೇಶ ಸುಣಗಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ| ಭಗವಂತ ಅನವಾರ, ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳಾದ ಹನುಮನಗೌಡ, ಅಬಕಾರಿ ಇಲಾಖೆಯ ಜಿಲ್ಲಾ ವಿಚಕ್ಷಣ ದಳದ ನಿರೀಕ್ಷಕರಾದ ಕೇದಾರನಾಥ್, ಸಾಹಿತಿ ಅಯ್ಯಣ್ಣ ಹುಂಡೇಕಾರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಸಿದ್ದಪ್ಪ ಹೊಟ್ಟಿ, ಆರ್. ಮಹಾದೇವಪ್ಪ ಅಬ್ಬೆತುಮಕೂರ, ಬಸವಂತರಾಯ ಮಾಲಿಪಾಟೀಲ, ನಾಗೇಂದ್ರ ಜಾಜಿ, ಚನ್ನಪ್ಪ ಸಾಹು ಠಾಣಗುಂದಿ, ಮೌಲಾಲಿ ಅನಪುರ, ನೂರೊಂದಪ್ಪ ಲೇವಡಿ ಸೇರಿದಂತೆ ಅಧಿಕಾರಿಗಳು, ಮಾರಾಟಗಾರರು ಸಭೆಯಲ್ಲಿ ಹಾಜರಿದ್ದರು.