Advertisement

ಮಕ್ಕಳ ಸಮಸ್ಯೆ ಅರಿತುಕೊಳ್ಳಲು ಸೂಚನೆ

11:58 AM Sep 04, 2019 | Naveen |

ಯಾದಗಿರಿ: ವಿವಿಧ ಇಲಾಖೆಗಳ ಅಡಿಯಲ್ಲಿ ನಡೆಯುತ್ತಿರುವ ಜಿಲ್ಲೆಯ ವಸತಿ ಶಾಲೆ ಮತ್ತು ವಸತಿ ನಿಲಯಗಳಲ್ಲಿರುವ ನೈಜ ಸಮಸ್ಯೆಗಳನ್ನು ಅರಿಯಲು ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು ಒಂದು ರಾತ್ರಿ ವಸತಿ ಶಾಲೆ, ವಸತಿ ನಿಲಯಗಳಲ್ಲಿ ಉಳಿದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಸೂಚಿಸಿದರು.

Advertisement

ಜಿಪಂ ಸಭಾಂಗಣದಲ್ಲಿ ಮಂಗಳವಾರ ಕೊಪ್ಪಳ ಜಿಲ್ಲೆಯ ವಸತಿ ನಿಲಯದಲ್ಲಿ ಇತ್ತೀಚೆಗೆ ವಿದ್ಯುತ್‌ ಅವಘಡದಿಂದ ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಹಿನ್ನಲೆ ಹಮ್ಮಿಕೊಂಡ ಜಿಲ್ಲೆಯ ವಸತಿ ಶಾಲೆ ಮತ್ತು ನಿಲಯಗಳ ತಾಲೂಕು ಮಟ್ಟದ ಅಧಿಕಾರಿ, ಪ್ರಾಂಶುಪಾಲರು ಹಾಗೂ ಮೇಲ್ವಿಚಾರಕರ ಸಭೆಯಲ್ಲಿ ಅವರು ಮಾತನಾಡಿದರು.

ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಗಳಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಯ ಬಾಲಕರ ವಸತಿ ನಿಲಯಗಳಲ್ಲಿ ಪುರುಷ ಅಧಿಕಾರಿಗಳು ಮತ್ತು ಬಾಲಕಿಯರ ವಸತಿ ನಿಲಯಗಳಲ್ಲಿ ಮಹಿಳಾ ಅಧಿಕಾರಿಗಳು ಒಂದು ರಾತ್ರಿ ಮಕ್ಕಳೊಂದಿಗೆ 15 ದಿನದೊಳಗೆ ವಾಸ ಮಾಡಿ ವರದಿ ನೀಡಬೇಕು. ಮಕ್ಕಳೊಂದಿಗೆ ಮುಕ್ತವಾಗಿ ಚರ್ಚಿಸಿ, ಅವರ ಸಮಸ್ಯೆಗಳನ್ನು ಆಲಿಸಬೇಕು. ಆ ಸಂದರ್ಭದಲ್ಲಿ ಪ್ರಾಂಶುಪಾಲರು, ನಿಲಯ ಮೇಲ್ವಿಚಾರಕರು ಇರದಿದ್ದರೆ ಮಕ್ಕಳು ಮುಕ್ತವಾಗಿ ಸಂಭಾಷಣೆ ನಡೆಸುತ್ತಾರೆ ಎಂದು ಸಲಹೆ ನೀಡಿದರು.

ನೋಡಲ್ ಅಧಿಕಾರಿಗಳು ತಮಗೆ ಸಂಬಂಧಿಸಿದ ವಸತಿ ಶಾಲೆ ಅಥವಾ ವಿದ್ಯಾರ್ಥಿ ನಿಲಯಗಳ ಸಂಪೂರ್ಣ ಪ್ರಗತಿಯ ಹೊಣೆ ಹೊಂದಿದ್ದು, ಅವುಗಳನ್ನು ಮಾದರಿ ಶಾಲೆ/ ಮಾದರಿ ವಿದ್ಯಾರ್ಥಿ ನಿಲಯಗಳನ್ನಾಗಿ ಮಾಡುವ ಜವಾಬ್ದಾರಿ ಇರುತ್ತದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ, ಶುದ್ಧ ಕುಡಿಯುವ ನೀರು ಒದಗಿಸಿ. ನೀರು ಶುದ್ಧಿಕರಣ ಘಟಕ, ಸೋಲಾರ್‌, ಜನರೇಟರ್‌, ಕಂಪ್ಯೂಟರ್‌, ಶೌಚಾಲಯ, ಕ್ರೀಡಾ ಸಾಮಗ್ರಿ ಸೇರಿದಂತೆ ಇನ್ನಿತರ ಮೂಲ ಭೂತ ಸೌಲಭ್ಯಗಳು ಸರ್ವಕಾಲಕ್ಕೂ ಬಳಸುವಂತಿರಬೇಕು ಎಂದು ನಿರ್ದೇಶಿಸಿದರು.

ವಸತಿ ಶಾಲೆ, ವಿದ್ಯಾರ್ಥಿ ನಿಲಯಗಳಲ್ಲಿನ ವಿದ್ಯಾರ್ಥಿಗಳು ಯಾವುದೇ ರೀತಿಯ ಅವಘಡಗಳಿಗೆ ಒಳಗಾಗದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ವಸತಿ ಶಾಲೆ ಅಥವಾ ವಸತಿ ನಿಲಯಗಳ ಮೇಲೆ ವಿದ್ಯುತ್‌ ತಂತಿಗಳು ಹಾದು ಹೋಗಿದ್ದರೆ ತಕ್ಷಣ ಸ್ಥಳಾಂತರಿಸಬೇಕು ಎಂದು ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

Advertisement

ವಸತಿ ಶಾಲೆ ಮತ್ತು ವಸತಿ ನಿಲಯಗಳಲ್ಲಿ ಸಿ.ಸಿ ಟಿವಿ ಕ್ಯಾಮರಾ 24×7 ಕಾರ್ಯನಿರ್ವಹಿಸುತ್ತಿರಬೇಕು. ಕಾವಲುಗಾರರು ಜಾಗೃತರಾಗಿರಬೇಕು. ಯಾವುದೇ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಲಿಖೀತ ಅನುಮತಿ ಇಲ್ಲದೆ ಹೊರ ಹೋಗುವಂತಿಲ್ಲ. ರಜೆಯನ್ನು ಸಹ ಸಕಾರಣದೊಂದಿಗೆ ಲಿಖೀತವಾಗಿ ಪಡೆದು ಸಂಬಂಧಿಸಿದ ಪಾಲಕರ ಜೊತೆಗೆ ಹೋಗತಕ್ಕದ್ದು. ಇನ್ನು ಸ್ನಾನ ಗೃಹ, ಶೌಚಾಲಯಗಳನ್ನು ಸೂಕ್ತವಾಗಿ ಬಳಕೆ ಮಾಡಬೇಕು. ಯಾವುದೇ ಕಾರಣಕ್ಕೂ ಸ್ನಾನ ಗೃಹ, ಶೌಚಾಲಯಗಳನ್ನು ಬಳಸದೇ ಇರುವ ವಿಷಯ ಗಮನಕ್ಕೆ ಬಂದರೆ ಸಂಬಂಧಪಟ್ಟ ವಾರ್ಡನ್‌, ಪ್ರಾಂಶುಪಾಲರು, ತಾಲೂಕು ಮಟ್ಟದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಸತಿ ಶಾಲೆ, ವಿದ್ಯಾರ್ಥಿ ನಿಲಯಗಳು ಎಸ್‌ಎಸ್‌ಎಲ್ಸಿ ಫಲಿತಾಂಶದಲ್ಲಿ ಶೇ. 100ರಷ್ಟು ಸಾಧನೆ ಮಾಡಲು ಪ್ರಾಂಶುಪಾಲರು, ಮೇಲ್ವಿಚಾರಕರು ಶ್ರಮಿಸಬೇಕು. ವಿಷಯ ಶಿಕ್ಷಕರಿಂದ ಗೌರವ ಧನ ನೀಡಿ ಬೋಧನೆ ಮಾಡಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿ, ನೋಡಲ್ ಅಧಿಕಾರಿಗಳು ಎಲ್ಲಾ ಇಲಾಖೆ ವಸತಿ ಶಾಲೆ, ವಿದ್ಯಾರ್ಥಿನಿಲಯಗಳನ್ನು ತಪಾಸಣೆ ಮಾಡಬೇಕು. ವಸತಿ ಶಾಲೆ/ ವಿದ್ಯಾರ್ಥಿನಿಲಯಗಳಲ್ಲಿನ ಶೈಕ್ಷಣಿಕ ಚಟುವಟಿಕೆಗಳಿಗೆ ಅಗತ್ಯವಿರುವ ಎಲ್ಲಾ ರೀತಿಯ ಮಾರ್ಗೋಪಾಯಗಳನ್ನು ಕಂಡು ಹಿಡಿದು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಅನುಷ್ಠಾನಕ್ಕೆ ತರಬೇಕು ಎಂದು ಸೂಚಿಸಿದರು. ವಸತಿ ಶಾಲೆ ಅಥವಾ ವಿದ್ಯಾರ್ಥಿನಿಲಯಗಳ ನಿರ್ವಹಣೆಯಲ್ಲಿ ಲೋಪವೆಸಗುವ ಯಾವುದೇ ಅಧಿಕಾರಿ, ಸಿಬ್ಬಂದಿ ವರ್ಗದವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಸಹಾಯಕ ಆಯುಕ್ತರಾದ ಶಂಕರಗೌಡ ಎಸ್‌. ಸೋಮನಾಳ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸುನೀಲ್ ಬಿಸ್ವಾಸ್‌, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಂ.ಎಸ್‌. ಅಲ್ಲಾಬಕಷ ವೇದಿಕೆಯಲ್ಲಿದ್ದರು.

ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಅಜೀತ್‌ ಜಿ. ನಾಯಕ, ಜಿಲ್ಲಾ ಪರಿಶಿಷ್ಟ ಪಂಗಡಗಳ ಕಲ್ಯಾಣಾಧಿಕಾರಿ ಬಂದೇನವಾಜ್‌ ಗೇಸುದರಾಜ್‌, ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣಾಧಿಕಾರಿ ಪೂರ್ಣಿಮಾ ಚೂರಿ ಸೇರಿದಂತೆ ಜೆಸ್ಕಾಂ ಅಧಿಕಾರಿಗಳು, ವಸತಿ ನಿಲಯಗಳ ನೋಡಲ್ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು, ವಸತಿ ನಿಲಯಗಳ ಮೇಲ್ವಿಚಾರಕರು, ವಸತಿ ಶಾಲೆಗಳ ಪ್ರಾಂಶುಪಾಲರು ಸಭೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next