ಯಾದಗಿರಿ: ಜಿಲ್ಲೆಯಲ್ಲಿ ಗುರುತಿಸಿರುವ 456 ತೀವ್ರ ಅಪೌಷ್ಟಿಕ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಪ್ರತಿ ತಿಂಗಳು ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಬೇಕು. ತೀವ್ರ ಅಪೌಷ್ಟಿಕ ಮಕ್ಕಳು ತಿಂಗಳಲ್ಲಿ 20 ದಿನ ಕಡ್ಡಾಯವಾಗಿ ಅಂಗನವಾಡಿಯಲ್ಲಿ ಹಾಜರಿರುವಂತೆ ನೋಡಿಕೊಳ್ಳಬೇಕು ಎಂದು ಪ್ರವಾಸೋದ್ಯಮ ಇಲಾಖೆ ಸರ್ಕಾರದ ಕಾರ್ಯದರ್ಶಿ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಟಿ.ಕೆ. ಅನಿಲ್‌ಕುಮಾರ್ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಮಟ್ಟದ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು. ಇವರ ಜೊತೆಗೆ ಮೇಲ್ವಿಚಾರಕಿಯರು ಅಂಗನವಾಡಿ ಕೇಂದ್ರಗಳಿಗೆ ನಿರಂತರ ಭೇಟಿ ನೀಡುವ ಮೂಲಕ ಜಿಲ್ಲೆಯಲ್ಲಿರುವ 25 ಸಾವಿರ ಸಾಧಾರಣ ಅಪೌಷ್ಟಿಕ ಮಕ್ಕಳ ಪೌಷ್ಟಿಕ ಗುಣಮಟ್ಟ ಸುಧಾರಿಸಲು ಕ್ರಮ ಕೈಗೊಳ್ಳಬೇಕು. ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳಿಗೆ ನಿಯಮಾನುಸಾರ ಪೌಷ್ಟಿಕ ಆಹಾರ ನೀಡಬೇಕು ಎಂದು ನಿರ್ದೇಶಿಸಿದರು. ಹತ್ತಿಕುಣಿ ಬಾಲಕರ ವಸತಿ ನಿಲಯಕ್ಕೆ ಅನಿರೀಕ್ಷಿತ ಭೇಟಿ ನೀಡಿದ ಸಂದರ್ಭದಲ್ಲಿ ನೀರಿನ ವ್ಯವಸ್ಥೆ ಇಲ್ಲದಿರುವುದು, ಮೂಲ ಸೌಕರ್ಯಗಳ ಕೊರತೆ ಕಂಡುಬಂತು. ನೀರಿನ ಕೊರತೆಯಿಂದಾಗಿ ಶೌಚಾಲಯ ಬಳಸುವುದಕ್ಕೆ ಯೋಗ್ಯವಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ-52, ಪರಿಶಿಷ್ಟ ಪಂಗಡಗಳ-7, ಅಲ್ಪಸಂಖ್ಯಾತರ-10, ಹಿಂದುಳಿದ ವರ್ಗಗಳ-65 ವಸತಿ ನಿಲಯಗಳಲ್ಲಿ ಮುಖ್ಯವಾಗಿ ಆಹಾರ, ನೀರು ಪೂರೈಕೆ ಮತ್ತು ಶೌಚಾಲಯ ವ್ಯವಸ್ಥೆ ಇರಬೇಕು. ಈ ಬಗ್ಗೆ ವರದಿ ನೀಡುವಂತೆಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಫಲಿತಾಂಶ ಹೆಚ್ಚಳಕ್ಕೆ ಕ್ರಮ: ಜಿಲ್ಲೆಯ ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳ ಎಸ್ಸೆಸ್ಸೆಲ್ಸಿ ಫಲಿತಾಂಶ ಕೂಡ ತುಂಬ ಕಡಿಮೆ ಇದೆ. ಇಂಗ್ಲಿಷ್, ಗಣಿತ ಮತ್ತು ವಿಜ್ಞಾನ ವಿಷಯಗಳ ಬಗ್ಗೆ ಗೌರವಧನ ಆಧಾರದ ಮೇಲೆ ಹಾಸ್ಟೆಲ್ ಗಳಲ್ಲಿ ಬೋಧನೆ ಮಾಡಿಸಬಹುದು. ಕಳೆದ ಸಾಲಿನಲ್ಲಿ ಅತಿ ಕಡಿಮೆ ಫಲಿತಾಂಶ ಬಂದ ವಸತಿ ನಿಲಯಗಳಲ್ಲಿ ವಿಷಯ ತಜ್ಞರಿಂದ ಬೋಧನೆ ಕಡ್ಡಾಯ. ನಗರ ಪ್ರದೇಶದ ವಸತಿ ನಿಲಯಗಳಲ್ಲಿ ಶೇ.90ಕ್ಕಿಂತ ಹೆಚ್ಚು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶೇ.80ಕ್ಕಿಂತ ಹೆಚ್ಚು ಫಲಿತಾಂಶ ಬರಲು ಕ್ರಮ ಕೈಗೊಂಡಿರುವ ಕುರಿತಂತೆ ಮುಂದಿನ ಸಭೆಯಲ್ಲಿ ಪಿಪಿಟಿ ಮೂಲಕ ಪ್ರಸ್ತುತಪಡಿಸಬೇಕು. ಅದೇ ರೀತಿ ಶಾಲೆಗಳಲ್ಲಿ ಕೂಡ ಫಲಿತಾಂಶ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಬಂದಳ್ಳಿ ಏಕಲವ್ಯ ಶಾಲೆಯನ್ನು 2020-21ನೇ ಸಾಲಿನಿಂದ ಆರಂಭಿಸಲು ಅಗತ್ಯವಿರುವ ಸಿಬ್ಬಂದಿ ನೇಮಕ ಮತ್ತು ಮೂಲ ಸೌಕರ್ಯ ಕಲ್ಪಿಸಲು ಕ್ರೈಸ್ತ್ನಿ ರ್ದೇಶಕರಿಗೆ ಪ್ರಸ್ತಾವನೆ ಸಲ್ಲಿಸಿ ಎಂದು ಸೂಚಿಸಿದರು.
ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸಿ: ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯಡಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದವರು ವರ್ಷದಲ್ಲಿ 5 ಲಕ್ಷ ರೂ.ವರೆಗೆ ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ಸರ್ಕಾರ ಈ ಯೋಜನೆ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ತಿಳಿವಳಿಕೆ ಮೂಡಿಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಪಂ ಸಿಇಒ ಶಿಲ್ಪಾ ಶರ್ಮಾ, ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾ ಧಿಕಾರಿ ಎಸ್.ಎಸ್. ರವಿಶಂಕರ, ಜಂಟಿ ಕೃಷಿ ನಿರ್ದೇಶಕಿ ಆರ್. ದೇವಿಕಾ, ಸಹಾಯಕ ಆಯುಕ್ತರಾದ ಶಂಕರಗೌಡ ಎಸ್. ಸೋಮನಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಮಲ್ಲನಗೌಡ ಎಸ್.ಪಾಟೀಲ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ| ಲಕ್ಷ್ಮೀ ಕಾಂತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪ್ರಭಾಕರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.