Advertisement

ಯಾದಗಿರಿ: ಸೋಂಕಿತರ ಸಂಖ್ಯೆ 880ಕ್ಕೆ ಏರಿಕೆ

12:27 PM Jun 22, 2020 | Naveen |

ಯಾದಗಿರಿ: ಜಿಲ್ಲೆಯಲ್ಲಿ ರವಿವಾರ ಮೂವರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 880ಕ್ಕೆ ಏರಿಕೆಯಾಗಿದೆ. ಈ ಮಧ್ಯೆ ರವಿವಾರ 15 ಜನ ಗುಣಮುಖರಾಗಿದ್ದು, ಈವರೆಗೆ ಒಟ್ಟು 514 ಜನ ಗುಣಮುಖರಾದಂತಾಗಿದೆ.

Advertisement

ಗುರುಮಠಕಲ್‌ನ ಹರಿಜನ ಓಣಿಯ 42 ವರ್ಷದ ಮಹಿಳೆ (ಪಿ-9106)ಗೆ ಸೋಂಕು ದೃಢವಾಗಿದ್ದು, ಇವರು ಅಂಗನವಾಡಿ ಸಹಾಯಕಿ ಎನ್ನಲಾಗಿದೆ. ಅಂಗನವಾಡಿ ಶಿಕ್ಷಕಿಯರು ಮತ್ತು ಸಹಾಯಕಿಯರು ಮನೆ ಮನೆಗೆ ತೆರಳಿ ಮಕ್ಕಳು ಮತ್ತು ಗರ್ಭಿಣಿಯರಿಗೆ ಆಹಾರ ವಿತರಿಸುವ ಕಾರ್ಯ ಮಾಡುತ್ತಿದ್ದಾರೆ. ಇದೀಗ ಅಂಗನವಾಡಿ ಸಹಾಯಕಿಗೆ ಸೋಂಕು ತಗುಲಿರುವುದು ಅತಂಕಕ್ಕೆ ಕಾರಣವಾಗಿದೆ. ಇವರ ಸೋಂಕಿನ ಮೂಲವನ್ನು ಅಧಿಕಾರಿಗಳು ಪತ್ತೆ ಹಚ್ಚುತ್ತಿದ್ದು, ನಿತ್ಯ ಜನರ ಮಧ್ಯೆ ಸಂಪರ್ಕ ಹೊಂದಿರುವ ಇವರ ಸಂಪರ್ಕಕ್ಕೆ ಎಷ್ಟು ಮಕ್ಕಳು, ಗರ್ಭಿಣಿ ಮತ್ತು ಬಾಣಂತಿಯರು ಬಂದಿದ್ದಾರೆ ಎನ್ನುವುದು ದೊಡ್ಡ ಸವಾಲಾಗಿದೆ.

ಇನ್ನು ಶಹಾಪುರ ತಾಲೂಕಿನ ಮದ್ರಿಕಿ ಗ್ರಾಮದ 69 ವರ್ಷದ ಮಹಿಳೆ (ಪಿ-9105), ಸುರಪುರ ತಾಲೂಕಿನ ಅಡ್ಡೋಡಗಿ ಗ್ರಾಮದ 32 ವರ್ಷದ ಪುರುಷ (ಪಿ-9107) ಕೊರೊನಾ ಸೋಂಕಿಗೆ ತುತ್ತಾಗಿದ್ದು ಇಬ್ಬರೂ ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸಿದವರಾಗಿದ್ದಾರೆ. ಜಿಲ್ಲೆಯಲ್ಲಿ ಖಚಿತಪಟ್ಟ ಒಟ್ಟು 880 ಪ್ರಕರಣಗಳಲ್ಲಿ 514 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

814 ವರದಿ ಬಾಕಿ: ರವಿವಾರದ 1168 ನೆಗೆಟಿವ್‌ ವರದಿ ಸೇರಿ ಈವರೆಗೆ 21,927 ಮಾದರಿಗಳ ವರದಿ ನೆಗೆಟಿವ್‌ ಬಂದಿವೆ. ಹೊಸದಾಗಿ ಕಳುಹಿಸಲಾದ 86 ಮಾದರಿಗಳು ಸೇರಿ 814 ಮಾದರಿಗಳ ವರದಿ ಬರಬೇಕಿದೆ. ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 1377 ಜನ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 2779 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ. ಜಿಲ್ಲೆಯಲ್ಲಿ 73 ಕಂಟೈನ್ಮೆಂಟ್‌ ಝೋನ್‌ಗಳನ್ನು ರಚಿಸಲಾಗಿದೆ.

ಹೊಸ ಜಿಲ್ಲಾಸ್ಪತ್ರೆಯಲ್ಲಿ 173 ಜನ, ಶಹಾಪುರ ಕೊರೊನಾ ಕೇರ್‌ ಸೆಂಟರ್‌ನಲ್ಲಿ 55 ಜನ, ಸುರಪುರ ಕೊರೊನಾ ಕೇರ್‌ ಸೆಂಟರ್‌ನಲ್ಲಿ 50 ಹಾಗೂ ಬಂದಳ್ಳಿ ಏಕಲವ್ಯ ಕೊರೊನಾ ಕೇರ್‌ ಸೆಂಟರ್‌ನಲ್ಲಿ 54 ಜನರನ್ನು ಅವಲೋಕನೆಗಾಗಿ ಇರಿಸಲಾಗಿದೆ. ಜಿಲ್ಲೆಯ 21 ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರಗಳಲ್ಲಿ ಒಟ್ಟು 743 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next