Advertisement

ಯಾದಗಿರಿಗಿಲ್ಲ ಸಚಿವ ಸ್ಥಾನದ ಗರಿ

11:27 AM Aug 21, 2019 | Naveen |

ಯಾದಗಿರಿ: ಹಿಂದುಳಿದ ಜಿಲ್ಲೆಗೆ ಸಚಿವ ಸ್ಥಾನ ನೀಡುವ ನಿಟ್ಟಿನಲ್ಲಿ ಅನ್ಯಾಯವಾಗುತ್ತಲೇ ಬಂದಿದ್ದು, ಈ ಸಲವೂ ಜಿಲ್ಲೆಯಲ್ಲಿ ಬಿಜೆಪಿಯ ಇಬ್ಬರು ಶಾಸಕರಿದ್ದರೂ ಸಚಿವ ಸ್ಥಾನ ಸಿಗಲೇ ಇಲ್ಲ.

Advertisement

ಜಿಲ್ಲೆಯ ನಾಲ್ಕು ವಿಧಾನಸಭೆ ಕ್ಷೇತ್ರಗಳಲ್ಲಿ ಯಾದಗಿರಿ ಮತ್ತು ಸುರಪುರ ಕ್ಷೇತ್ರ ಬಿಜೆಪಿ ತೆಕ್ಕೆಯಲ್ಲಿದೆ. ಶಹಾಪುರ ಕಾಂಗ್ರೆಸ್‌, ಗುರುಮಠಕಲ್ ಜೆಡಿಎಸ್‌ ವಶದಲ್ಲಿದೆ. ಸುರಪುರ ಕ್ಷೇತ್ರವನ್ನು ಸತತ 3 ಬಾರಿ ಪ್ರತಿನಿಧಿಸಿದ್ದ ರಾಜುಗೌಡ ಅವರಿಗೆ ಯಡಿಯೂರಪ್ಪ ಸಂಪುಟದಲ್ಲಿ ಎಸ್‌ಟಿ ಕೋಟಾದಲ್ಲಿ ಮಂತ್ರಿಗಿರಿ ಪಕ್ಕಾ ಎಂದೇ ಬೆಂಬಲಿಗರು ಭಾವಿಸಿದ್ದರು.

ಕಾರ್ಯಕರ್ತರು ಕನಸು ಕಂಡಿದ್ದರು. ತಮ್ಮ ಶಾಸಕರೇ ಮಂತ್ರಿಯಾಗುತ್ತಾರೆ ಎನ್ನುವ ಭರವಸೆ ಇಟ್ಟಿದ್ದರು. ಕಾರ್ಯಕರ್ತರು ಕೆಲ ವಾರಗಳಿಂದ ಬೆಂಗಳೂರಿನಲ್ಲಿಯೇ ಬೀಡು ಬಿಟ್ಟಿದ್ದರು. ಆದರೀಗ ಸಂಭ್ರಮಿಸಲು ಹೋದ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ.

ಇನ್ನು ಯಡಿಯೂರಪ್ಪನವರ ಆಪ್ತ, ಯಾದಗಿರಿಯಿಂದ ಪ್ರಥಮ ಬಾರಿಗೆ ಆಯ್ಕೆಯಾಗಿದ್ದ ವೆಂಕಟರೆಡ್ಡಿ ಮುದ್ನಾಳ ಅವರಿಗೆ ಮಂತ್ರಿಯಾಗುವ ನಿರೀಕ್ಷೆ ಇರಲಿಲ್ಲ. ಪಕ್ಷದಲ್ಲಿ ಸಾಕಷ್ಟು ಹಿರಿಯರು ಇದ್ದಾರೆ. ತಾನು ಪ್ರಥಮ ಬಾರಿಗೆ ಆರಿಸಿ ಬಂದಿದ್ದು, ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಹೇಳುತ್ತಲೇ ಬಂದಿದ್ದರು. ಸಂಪುಟ ರಚನೆಗೂ ಮುನ್ನ ಮುದ್ನಾಳ ಅವರ ಬೆಂಬಲಿಗರ ನಿಯೋಗ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿತ್ತು.

ಸಂಪರ್ಕಕ್ಕೆ ಸಿಗದ ರಾಜುಗೌಡ
ಮಂತ್ರಿ ಸ್ಥಾನ ಸಿಕ್ಕೇ ಸಿಗುತ್ತದೆ ಎಂಬ ಭರವಸೆಯಲ್ಲಿದ್ದ ಶಾಸಕ ರಾಜುಗೌಡರಿಗೆ ನಿರಾಸೆಯಾಗಿದೆ. ಮೂರು ಬಾರಿ ಆರಿಸಿ ಬಂದಿದ್ದು, ಈ ಬಾರಿ ಮಂತ್ರಿ ಸ್ಥಾನ ಸಿಗಲಿದೆ ಎಂದು ನಂಬಿದ್ದ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನವಾಗಿದೆ. ಮಂತ್ರಿ ಸ್ಥಾನ ಕೈತಪ್ಪಿರುವ ಕುರಿತು ಸಂಪರ್ಕಿಸಿದರೆ ಶಾಸಕ ರಾಜುಗೌಡ ಸಂಪರ್ಕಕ್ಕೆ ಸಿಗಲಿಲ್ಲ.
ನಮ್ಮ ಕ್ಷೇತ್ರದ ಜನರಿಗೆ ನಾನು ಸಚಿವನಾಗಬೇಕು ಎನ್ನುವ ಬಯಕೆ ಇರುವುದು ಸಾಮಾನ್ಯ. ಮೊದಲ ಬಾರಿಗೆ ಶಾಸಕ ಆಗಿರುವುದರಿಂದ ನಾನು ಮಂತ್ರಿ ಸ್ಥಾನದ ಪಟ್ಟಿಯಲ್ಲಿಲ್ಲ. ಯಾದಗಿರಿ ಮತಕ್ಷೇತ್ರದ ಅಭಿವೃದ್ಧಿ ದೃಷ್ಟಿಯಲ್ಲಿ ಏನು ಬೇಕೋ ಅದನ್ನು ನಮ್ಮ ಸರ್ಕಾರ ನೀಡುವ ವಿಶ್ವಾಸವಿದೆ.
ವೆಂಕಟರೆಡ್ಡಿ ಗೌಡ ಮುದ್ನಾಳ,
ಯಾದಗಿರಿ ಶಾಸಕ

ಉತ್ತರ ಕರ್ನಾಟಕ ಮತ್ತು ಹೈದ್ರಾಬಾದ್‌ ಕರ್ನಾಟಕ ಭಾಗವನ್ನು ಸಂಪುಟ ರಚನೆಯಲ್ಲಿ ಕಡೆಗಣಿಸಲಾಗಿದೆ. ಹೈಕ ಭಾಗಕ್ಕೆ ಕೇವಲ ಒಂದು ಸಚಿವ ಸ್ಥಾನ ನೀಡಿದ್ದು, ಇದರಲ್ಲಿ ರಾಜಕೀಯ ಅಸಮಾನತೆ ಕಾಣುತ್ತಿದೆ. ಇದು ಸರಿಯಾದ ನಡೆಯಲ್ಲ.
ಡಾ| ಶರಣು ಗದ್ದುಗೆ,
ಕರವೇ ಉತ್ತರ ಕರ್ನಾಟಕ ಅಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next