ಯಾದಗಿರಿ: ಹೊಸ ತಾಲೂಕು ಕೇಂದ್ರಗಳು ಘೋಷಣೆಯಾದರೂ ಸಮರ್ಪಕ ಅನುಷ್ಠಾನಗಿಲ್ಲ. ತಾಲೂಕು ಕೇಂದ್ರಗಳಿಂದ ದೂರ ಇರುವ ಗ್ರಾಮಗಳ ಜನರಿಗೆ ಅನುಕೂಲವಾಗುವ ಬದಲಿಗೆ ಇನ್ನೂ ಅನಾನುಕೂಲ ಮಾತ್ರ ತಪ್ಪಿಲ್ಲ. ಸರ್ಕಾರವೇ ಹೊಸ ತಾಲೂಕುಗಳಲ್ಲಿ 14 ಇಲಾಖೆ ಕಚೇರಿಗಳನ್ನು ಸ್ಥಾಪಿಸಬೇಕು ಎಂದು ನಿರ್ದೇಶಿಸಿತ್ತು. ಆದರೆ ಬೆರಳಣಿಕೆ ಅಷ್ಟೇ ಕಚೇರಿಗಳು ಮಾತ್ರ ಆರಂಭವಾಗಿದ್ದು, ಹೊಸ ತಾಲೂಕುಗಳಿಗೆ ಕಂದಾಯ ದಾಖಲೆಗಳು ಹಸ್ತಾಂತರವಾಗಿದ್ದು, ಕಚೇರಿಗಳ ಮೂಲ ಸೌಕರ್ಯಕ್ಕೆ ತಲಾ 5 ಲಕ್ಷದಂತೆ ಹಳೆ ತಹಶೀಲ್ದಾರ್ ಖಾತೆಗೆ ನೀಡಲಾಗಿದೆ ಎನ್ನುವ ಮಾಹಿತಿ ಇದೆ.
Advertisement
ಜಿಲ್ಲೆಯಲ್ಲಿ ಗುರುಮಠಕಲ್, ಹುಣಸಗಿ ಹಾಗೂ ವಡಗೇರಾ ನೂತನ ತಾಲೂಕುಗಳಾಗಿ ಘೋಷಣೆಯಾಗಿದ್ದು, ಸಮರ್ಪಕ ಅನುಷ್ಠಾನ ಆಗದಿರುವುದು ಇಲ್ಲಿನ ಜನರಲ್ಲಿ ನಿರಾಸೆ ಮೂಡಿಸಿದೆ. ಸರ್ಕಾರಗಳು ಚುನಾವಣೆ ಸಂದರ್ಭದಲ್ಲಿ ಹೊಸ ವಿಷಯಗಳ ಮೂಲಕ ಚುನಾವಣೆ ಎದುರಿಸಿ ಜನರ ಅಮಾಯಕತೆಯೊಂದಿಗೆ ಆಟವಾಡುವ ಕೆಲಸ ನಿರಂತರ ನಡೆಯುತ್ತಿದೆ ಎನ್ನುವ ಬೇಸರದ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
Related Articles
ಎಚ್.ಡಿ. ಕುಮಾರಸ್ವಾಮಿ ಸರ್ಕಾರ ಇದ್ದಾಗ ಸ್ಥಳೀಯ ಶಾಸಕ ನಾಗನಗೌಡ ಕಂದಕೂರ ಎಲ್ಲಾ ಕಚೇರಿಗಳು ಒಂದೆಡೆ ನಿರ್ಮಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎನ್ನುವ ನಿಟ್ಟಿನಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸರ್ಕಾರಕ್ಕೆ ಮನವರಿಕೆ ಮಾಡಿದ್ದರು ಎನ್ನಲಾಗಿದೆ.
Advertisement
ಸರ್ಕಾರದ ಬದಲಾಗಿರುವುದರಿಂದ ಆಸೆಗೆ ತಣ್ಣೀರೆರೆಚಿದಂತಾಗಿದೆ. ಇನ್ನೂ ಗ್ರಾಮ ಪಂಚಾಯಿತಿ ಕೇಂದ್ರವಾಗಿದ್ದ ವಡಗೇರಾವನ್ನು ನೂತನ ತಾಲೂಕು ಕೇಂದ್ರವಾಗಿ ಸರ್ಕಾರ ಘೋಷಿಸಿರುವುದು ಅಲ್ಲಿಯೂ ಕೇವಲ ತಹಶೀಲ್ದಾರ್ ಕಚೇರಿ ಆರಂಭಿಸಿ ಹುದ್ದೆ ಮಂಜೂರು ಮಾಡಲಾಗಿದೆ. ಅಲ್ಲಿನ ಆಸ್ಪತ್ರೆ ಆವರಣದ ಕೊಠಡಿಯಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಕಚೇರಿ ತೆರೆಯಲಾಗಿದೆ. ಅದನ್ನು ಹೊರತು ಪಡಿಸಿ ಬೇರೆ ಇಲಾಖೆ ಕಚೇರಿಗಳು ಕಾರ್ಯಾರಂಭವಾಗಿಲ್ಲ.
ಪ್ರಸ್ತುತ ತಾಲೂಕು ಪಂಚಾಯಿತಿ ಸೇರಿದಂತೆ ವಿವಿಧ ಕಚೇರಿಗಳು ಆರಂಭಿಸಿ ಅನುಕೂಲ ಕಲ್ಪಿಸಬೇಕು ಎನ್ನುವುದು ವಡಗೇರಾ ತಾಲೂಕಿನ ಜನರ ಬೇಡಿಕೆಯಾಗಿದೆ. ಪ್ರಸ್ತುತ ವಡಗೇರಾ ಮತ್ತು ಹಯ್ನಾಳ (ಬಿ) ಹೋಬಳಿಯ 64 ಗ್ರಾಮಗಳನ್ನು ಸೇರಿಸಿ ಹೊಸ ತಾಲೂಕು ಕಾರ್ಯಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅಂದುಕೊಂಡಂತೆ ತಾಲೂಕು ಕೇಂದ್ರದಲ್ಲಿ ವಿವಿಧ ಕಚೇರಿಗಳು ಆರಂಭವಾಗಿದ್ದರೇ ಈ ಭಾಗದ ಜನರು ದೂರದ ಶಹಾಪುರಕ್ಕೆ ಅಲೆದಾಡುವುದನ್ನು ತಪ್ಪಿಸಬಹುದು.
ಅಲ್ಲದೇ ಸುರಪುರ ತಾಲೂಕಿನಿಂದ ಬೇರ್ಪಡಿಸಿ ಹುಣಸಗಿ ಮತ್ತು ಕೊಡೇಕಲ್ ಹೋಬಳಿಗಳ ಸುಮಾರು 82 ಗ್ರಾಮಗಳನ್ನು ನೂತನ ಹುಣಸಗಿ ತಾಲೂಕು ಕೇಂದ್ರಕ್ಕೆ ಸೇರಿಸಲಾಗಿತ್ತು. ಇಲ್ಲಿಯೂ ತಹಶೀಲ್ದಾರ್ ಕಚೇರಿ ಕಾರ್ಯಾರಂಭಿಸಿದ್ದು, ತಾಲೂಕು ಪಂಚಾಯಿತಿ ಕಚೇರಿ ಆರಂಭವಾಗಿದೆ. ಬೇರೆ ಇಲಾಖೆಗಳ ಕಚೇರಿಗಳು ಆರಂಭವಾಗದಿರುವುದು ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಸುರಪುರಕ್ಕೆ ಅಲೆದಾಡುವ ಅನಿವಾರ್ಯತೆಯಿದೆ.