ಯಾದಗಿರಿ: ಮಗುವಿನ ಆರೋಗ್ಯ ದೇಶದ ಭವಿಷ್ಯವಾದ್ದರಿಂದ ಮಕ್ಕಳನ್ನು ಆರೋಗ್ಯವಂತರಾಗಿ ಬೆಳೆಸುವುದು ಪೋಷಕರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿರಾದಾರ ಶಂಕರ ಹೇಳಿದರು.
ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಐ.ಇ.ಸಿ/ಎಸ್.ಬಿ.ಸಿ.ಸಿ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಶು ಆರೋಗ್ಯವಂತ ಇರಬೇಕಾದರೆ ಹೆರಿಗೆಯಾದ ಅರ್ಧ ಗಂಟೆಯೊಳಗೆ ತಾಯಿ ಎದೆ ಹಾಲು ಕುಡಿಸಬೇಕು. ತಾಯಿ ಹಾಲಿನಲ್ಲಿ ರೋಗ ನಿರೋಧಕ ಶಕ್ತಿಯ ಜೊತೆಗೆ ಶಿಶುವಿನ ಬೆಳವಣಿಗೆಗೆ ಬೇಕಾದ ಎಲ್ಲಾ ಪೋಷಕಾಂಶಗಳಿರುತ್ತವೆ. ತಾಯಿ ಹಾಲು ಅಮೃತಕ್ಕೆ ಸಮಾನ. ಶಿಶುವಿನ ಜನನದ ನಂತರ 48 ಗಂಟೆಗಳು ಮಗುವಿಗೆ ಸ್ನಾನ ಮಾಡಿಸುವಂತಿಲ್ಲ. ಮಗುವಿಗೆ ಶುಭ್ರವಾದ ಬಟ್ಟೆಯಿಂದ ಸ್ವತ್ಛಗೊಳಿಸಿ ಮತ್ತೂಂದು ಶುಭ್ರ ಬಟ್ಟೆಯಿಂದ ಮಗುವನ್ನು ಸುತ್ತಬೇಕು. ತಾಯಿ ದೇಹಕ್ಕೆ ಅಂಟಿಕೊಂಡಿರುವಂತೆ ಮಗುವನ್ನು ಇರಿಸಬೇಕು. ಆರು ತಿಂಗಳವರೆಗೆ ಕೇವಲ ತಾಯಿ ಹಾಲನ್ನು ಕುಡಿಸಬೇಕು. ಆರು ತಿಂಗಳ ನಂತರ ತಾಯಿ ಹಾಲಿನ ಜತೆ ಎಮ್ಮೆ ಹಾಲು, ಆಕಳ ಹಾಲು ಕೊಡಬೇಕು ಎಂದು ತಿಳಿಸಿದರು. ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ನಂದಣ್ಣ, ಗೋವಿಂದ ರಾಠೊಡ ಮಾತನಾಡಿದರು. ಆರೋಗ್ಯವಂತ ಮಕ್ಕಳಿಗೆ ಪ್ರಥಮ ಬಹುಮಾನ 300 ರೂ., ದ್ವಿತೀಯ ಬಹುಮಾನ 200 ರೂ. ಹಾಗೂ ತೃತೀಯ ಬಹುಮಾನ 100 ರೂ.ಗಳನ್ನು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿರಾದಾರ ಶಂಕರ ವಿತರಿಸಿದರು.
ಹಿರಿಯ ಆರೋಗ್ಯ ಸಹಾಯಕ ಸಿದ್ದಯ್ಯ, ಹಿರಿಯ ಆರೋಗ್ಯ ಸಹಾಯಕಿ ವಿದ್ಯಾಚಾರಿ ಶಿಲ್ಪಾ, ತಾಯಂದಿರು ಹಾಗೂ ಗರ್ಭಿಣಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.